ಸಂತೆ ಸರಕು

Author : ಬಿ.ಎ. ಮಮತಾ ಅರಸೀಕೆರೆ

Pages 96

₹ 80.00




Year of Publication: 2016
Published by: ನಾಕುತಂತಿ
Address: ನಾಕುತಂತಿ, ಬೆಂಗಳೂರು.

Synopsys

ಬಿ. ಎ ಮಮತಾ ಅರಸೀಕೆರೆ ಅವರ ’ಸಂತೆ ಸರಕು’ ಕೃತಿಯು ಮಹಿಳೆಯರ ಸಮಸ್ಯೆಗಳ ಕುರಿತ ಕವನ ಸಂಕಲನವಾಗಿದೆ. ಈ ಕೃತಿಯು 2015 ರಲ್ಲಿ ಹಾವೇರಿಯ ಕಣವಿ ಕಾವ್ಯ ಪುರಸ್ಕಾರ ಹಾಗೂ ಮಂಡ್ಯದ ಬಿ.ಎಂ. ಶ್ರೀ ಕಾವ್ಯ ಪುರಸ್ಕಾರವನ್ನು ಪಡೆದಿರುತ್ತದೆ.  ಈ ಕವನ ಸಂಕಲನಕ್ಕೆ ಬೆನ್ನುಡಿ ಬರೆದಿರುವ ಶ. ಸತೀಶ್ ಕುಲಕರ್ಣಿ ಅವರು, ’ಸಂತೆ ಸರಕು’ ನವಿರುಭಾವದಲ್ಲಿ ಆತ್ಮನಿವೇದನೆಯ ಮಮತಾ ಕಾವ್ಯದ ಸೂಕ್ಷ-ಎಚ್ಚರಗಳನ್ನು ಒಂದು ಗತಿಯಲ್ಲಿ ಕಾಪಾಡಿಕೊಂಡಿದೆ. ಎಲ್ಲಿಯೂ ವಾಚ್ಯವಾಗದೆ, ಹಸಿ ಹಸಿ ಹೇಳಿಕೆಯ ಮಟ್ಟದಲ್ಲಿ ಮಾತುಗಾರಿಕೆಯನ್ನು ಹೂಡದೆ ಕಾವ್ಯದ ಗಾಂಭೀರ್ಯವನ್ನು ಕಾಪಾಡಿಕೊಂಡದ್ದು ಮಮತಾ ಕಾವ್ಯದ ಬಲು ದೊಡ್ಡ ಗುಣ. ಮೊದಲ ಸಂಕಲನವೆಂದು ಸಿದ್ಧಮಾದರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇಂತಿಂಥವೇ ಕವಿತೆಗಳಿರಬೇಕೆಂಬ ಸಾಮಾನ್ಯ ಪರಿಕಲ್ಪನೆಯನ್ನು ಕವಯಿತ್ರಿ ಮುರಿದಿದ್ದಾರೆ. ಹೆಣ್ತನದ ಮರುವ್ಯಾಖ್ಯಾನ ಮತ್ತು ದಿಟ್ಟ ವಿಚಾರವಂತಿಕೆ ಈ ಕಾವ್ಯದ ಬುನಾದಿಯಾಗಿದೆ. ಒಂದಿಷ್ಟು ಪ್ರಯೋಗಶೀಲತೆ, ಮತ್ತಿಷ್ಟು ಕಥನಗಾರಿಕೆ ಮೊನಚಾದ ವ್ಯಂಗ್ಯ ಹಾಗೂ ಸತ್ಯ ನಿಷ್ಟುರತೆ ಪರವಾದ ಈ ಕವಿತೆಗಳು ಮೊದಲ ಓದಿನಲ್ಲಿಯೇ ಗೆಲ್ಲುತ್ತವೆ.  ಒಂದೊಂದು ಪದ್ಯವನ್ನು ಓದುತ್ತ ಹೋದಂತೆ ಆಗಾಗ ನಮ್ಮ ಗಂಡುಲೋಕ ನಿರ್ಮಿಸಿದ ಖೆಡ್ಡಾಗಳಲ್ಲಿ ನಾವೇ ಬಿದ್ದೇಳುವ ಭಾವ ಮೂಡುತ್ತದೆ. ಪುರುಷನ ಅಹಂಕಾರ ಹೊಂಚು, ಸೋಗಲಾಡಿತನ ಬಟಾಬಯಲಾಗಿ ನಿಲ್ಲುತ್ತದೆ. ಇದಕ್ಕೆ ಕವಯತ್ರಿ ಯಾವ ಸಿಟ್ಟು, ಅಕ್ರೋಶ, ಧಿಕ್ಕಾರದ ಧಿಮಾಕಿನಲ್ಲಿ ಭಾಷೆ ಬಳಸುವುದಿಲ್ಲ. ಬದಲಿಗೆ ನಮ್ಮಾತ್ಮವನ್ನು ಸೀಳಿ ಬಿಡುವ ತೀಕ್ಷ್ಣ ಭರ್ಚಿ ಸ್ವರೂಪದ ಚಿಂತನೆಗಳು ಇಲ್ಲಿಯ ಕವಿತೆಗಳಲ್ಲಿ ಹರಳು ಗಟ್ಟಿರುವುದನ್ನು ಗಮನಿಸಬಹುದು. ಹೆಣ್ಣೊಂದು ನಾನಾ ಬಗೆಯಲ್ಲಿ ಕಣ್ಣು ತುಂಬಬಹುದು. ಅಂಗಾಗ ಭೋಗದ ಆಹಾರವಾಗಿ ಕಾಣುವ ಕಣ್ಣುಗಳಿಗೆ ಪೆಟ್ಟುಕೊಟ್ಟು, ಹೆಣ್ಣನ್ನು ಜೀವಿಯಾಗಿ ನೋಡಿಸುವ ಕೆಲವು ಸಾರ್ಥಕ ಕವಿತೆಗಳು ಇಲ್ಲಿವೆ.  ಹಳತಾದ ಹೆಜ್ಜೆ, ಹಾದಿಗಳ ಬಿಟ್ಟು ಹೊಸ ನಡಿಗೆಗೆ ಹಾತೊರೆಯುವ ಸಂಕಲನದ ಕವಿತೆಗಳು ಕಾಲದ ಒಳದನಿಯಾಗುವ ಪ್ರಯತ್ನವಾಗಿವೆ ಎಂದು ತಿಳಿಸಿದ್ದಾರೆಮಹಿಳೆಯ ದಿಟ್ಟ ಹೋರಾಟದ ಹಾದಿಯನ್ನು ಈ ಕವನದ ಸಾಲು ಗಳಲ್ಲಿ ವಿವರಿಸಲಾಗಿದೆ.ಸಮಸ್ಯಗಳ ಗಂಭೀರತೆಯನ್ನು ಮನಮುಟ್ಟುವ ಶೈಲಿಯಲ್ಲಿ ವಿವರಿಸಲಾಗಿದೆ.ಮಮತಾ ಅರಸೀಕೆರೆ ಕವನಗಳಲ್ಲಿ 'ಗುಂಜು ಗುಂಜಾದ ಭಾವನೆಗಳಿಗೆ ಪ್ರತೀಕಗಳ ರೂಪು ಕೊಡುವ ಸೃಜನಶೀಲತೆ ಇದೆ' ಎಂದಿದ್ದಾರೆ ಕವಿ ಚಂಪಾ.  

 

About the Author

ಬಿ.ಎ. ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು.  ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ.  ...

READ MORE

Related Books