‘ಉಸಿರ ಬದುವಿನ ಗುಂಟ’ ಕೃತಿಯು ಹೇಮಾ ಪಟ್ಟಣಶೆಟ್ಟಿ ಅವರ ಕವನ ಸಂಕಲನವಾಗಿದೆ. ಕೃತಿಗೆ ಪ್ರಸ್ತಾವನೆ ಬರೆದಿರುವ ಜಿ.ಎಸ್ ಆಮೂರ ಅವರು, ಬದಲಾದ ಸಾಮಾಜಿಕ ಸಂದರ್ಭದಲ್ಲಿ ಉಳಿದ ಕ್ಷೇತ್ರಗಳಲ್ಲಿದ್ದಂತೆ ಸಾಹಿತ್ಯದ ಕ್ಷೇತ್ರದಲ್ಲಿಯೂ ಮಹಿಳೆ ಆತ್ಮನಿರ್ಭರತೆಯ ನೆಲೆಯಿಂದ ಬರೆಯುತ್ತಿರುವುದು ಆಶ್ಚರ್ಯವನ್ನು ಹುಟ್ಟಿಸುವುದಿಲ್ಲ. ಆದರೆ ಹೇಮಾರಲ್ಲಿ ಆತ್ಮನಿರ್ಭರತೆ ಒಂದು ವೈಯಕ್ತಿಕ ಆದರ್ಶ ಹಾಗೂ ಸಾಧನೆಯಾಗಿ ಕಾಣಿಸಿಕೊಂಡಿದೆ. ಉದಾಹರಣೆಗೆ, ವಿರಹೋತ್ಸವದ 'ಸಂಕಲ್ಪ' ಹಾಗೂ 'ಹತ್ತರಲಿ ಹನ್ನೊಂದಾಗಿ' ಕವಿತೆಗಳ ಈ ಸಾಲುಗಳು : “ಏನು ಬಂದರು ದಾಟಿ ನನ್ನ ಹಾಡನೆ ಹಾಡಿ ಪಟ್ಟ ಪಾಡನೆ ಮಾಡಿ ಹಾಡಿನ ಗಾಡಿ ಸರಿಯುತ್ತ ಹರಿಯುತ್ತ ಹೊರಟ ತೊರೆ, ನಾನು ” “......ಒಲ್ಲೆ ಬಾಳಲು ಒಲ್ಲೆ ಸಾಯಲೊಲ್ಲೆ ಹತ್ತರಲಿ ಹನ್ನೊಂದಾಗಿ ದೇವ ಬರುವ ತನಕ " ಈ ಆತ್ಮನಿರ್ಭರತೆಯ ಭಾವ ಹೇಮಾರ ಕಾವ್ಯದಲ್ಲಿ ಎಷ್ಟು ನಿರಂತರವಾಗಿದೆಯೆನ್ನುವುದಕ್ಕೆ ಈ ಸಂಗ್ರಹದ 'ಬಟ್ಟೆ' ಕವಿತೆಯನ್ನು ನೋಡಬಹುದು.
“ಬೇಕಿಲ್ಲ ನಿಮ್ಮ ಆಸರಗೋಲು ಎದುರಿಗಿದೆ ಗುರಿ ಹಿಡಿದ ಬಟ್ಟೆ ಬಿಡದೆ ಸಾಗುವುದಕ್ಕೆ ನನಗೆ ನಾನೇ ಬಟ್ಟೆ.” ಹೇಮಾರ ವ್ಯಕ್ತಿತ್ವದಲ್ಲಿ ಆತ್ಮನಿರ್ಭರತೆಯೊಡನೆ ಆತ್ಮವಿಮರ್ಶೆಯ ಗುಣವೂ ಇರುವುದರಿಂದ ಅಪರೀಕ್ಷಿತ ಸತ್ಯವೆನಿಸುವುದಿಲ್ಲ. ಹೊಸ ಹಾಡು ಸಂಗ್ರಹಕ್ಕೆ ಸೇರಿದ 'ಸಂಪಾದನೆ' ಹಾಗೂ ಸದ್ಯದ ಸಂಗ್ರಹದಲ್ಲಿರುವ 'ತಲ್ಲಣ'ಗಳಂಥ ಕವಿತೆಗಳಲ್ಲಿ ಆತ್ಮಪರೀಕ್ಷೆಯ ಕ್ಷಣಗಳನ್ನೂ ಗುರುತಿಸಬಹುದು. “ಅರ್ಥವಾಗಿದೆ. ಈಗ ನನ್ನ ಗಳಿಕೆಯ ಸಂಪಾದನೆ .........ಗಹಗಹಿಸಿ ನಗುತಿರುವ ಬರಿ ಶೂನ್ಯ” “ಗಳಿಕೆಯೇ ಕಳೆಯುವಿಕೆಯಾಗಿ ಎಲ್ಲಿರುವೆ ಏನಾದ ಬರಿ ತಾಯಿ ಪಳೆಯುಳಿಕೆ ?" ಆದರೆ ಹೇಮಾರಲ್ಲಿ ಇವು ಸ್ಥಾಯಿ ಭಾವಗಳಲ್ಲ. ’ಶೂನ್ಯ’ ಎಂದಾಗಲೂ ಅದರಲ್ಲಿ ಅವರು ‘ಆಕಾಶ ಆ ಭೂಮಿ ಸಾಗರವನ್ನು ಅದುಮಿಟ್ಟ ಬಿಂದು’ವನ್ನೇ ಕಾಣುತ್ತಾರೆ ಎಂದಿದ್ದಾರೆ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE