ನಿನ್ನ ಪ್ರೀತಿಯ ನೆರಳಿನಲ್ಲಿ- ಲೇಖಕಿ ಎನ್.ಆರ್.ರೂಪಶ್ರೀ ಅವರ ಲೇಖನ ಸಂಕಲನ. ಈಗಾಗಲೇ ಹಲವು ಕೃತಿಗಳನ್ನು ಪ್ರಕಟಿಸಿರುವ ರೂಪಶ್ರೀ ಅವರು ಲೇಖನ ಸಂಕಲನವಾದ 'ನಿನ್ನ ಪ್ರೀತಿಯ ನೆರಳಿನಲ್ಲಿ' ಕೃತಿಯನ್ನು ಪ್ರೀತಿಯಿಂದ ಪ್ರಕಟಿಸಿದ್ದಾರೆ. ಜನಿಸಿದ ಮೇಲೆ ಬದುಕು ಅನಿವಾರ್ಯ. ವೃತ್ತಿ ಹಾಗೂ ವಿವಾಹೇತರ ಸಂಸ್ಕಾರಗಳು ಮಾನವನ ಬದುಕಿನ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತವೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿದೆ. ನಿರಾಸೆ, ಅಶಾಂತಿ ಹಾಗೂ ಮಾನಸಿಕ ಯಾತನೆಗಳು ಹೆಣ್ಣಿನ ಬಾಳಿಗೆ ಸಿಗುವ ಪ್ರತಿಫಲಗಳು, ವ್ಯಕ್ತವಾಗದ ಪ್ರೀತಿ, ಬದಲಾಗುವ ವ್ಯಕ್ತಿಯ ವರ್ತನೆಗಳು ಈ ಎಲ್ಲ ಅಭಿಪ್ರಾಯಗಳನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಜೊತೆಗೆ ಹೋರಾಟಕ್ಕೆ ಹೊರಡುವ ಮಹಿಳೆಯ ದಿಟ್ಟತನವೂ ಕಾಣಬರುತ್ತದೆ. ನೂಪುರವಿಲ್ಲದ ಕಾಲ್ಗಳು ಹಾಕುವ ಹೆಜ್ಜೆಯಲ್ಲಿ ಗೆಜ್ಜೆಯ ನಾದ ಕೇಳಿ ಬರುವುದಿಲ್ಲವಾದರೂ, ಆ ಬರಿಗಾಲ್ಗಳ ಹೆಜ್ಜೆಯಲ್ಲಿ ಗೆಜ್ಜೆಯ ನಾದ ಕೇಳುವ ಪ್ರಯತ್ನ ಮಹಿಳೆಯದಾಗಬೇಕೆಂದು ರೂಪಶ್ರೀಯವರು ತಮ್ಮ ಕೃತಿಯಲ್ಲಿ ಒತ್ತಿ ಹೇಳಿದ್ದಾರೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ ದೊರೆತಿದೆ.
ಎನ್. ಆರ್. ರೂಪಶ್ರೀ ಅವರು 1980ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಿಸಿದರು. ಶಿರಸಿಯ ಎಮ್.ಎಮ್.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿಶ್ವವಿದ್ಯಾನಿಲಯದ ಚಿನ್ನದ ಪದಕದೊಂದಿಗೆ ಪದವಿಗಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಅವರು ಪ್ರಸ್ತುತ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಫ್ರೌಢಶಾಲೆಯ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ರೂಪಶ್ರೀ ಅವರು 2006ರಲ್ಲಿ 'ಜ್ಞಾನ ಜ್ಯೋತಿ' ಆಧ್ಯಾತ್ಮಿಕ ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದರು. 2008ರಲ್ಲಿ 'ಮೌನಕಾಲ' ಕವನ ಸಂಕಲನ ಪ್ರಕಟಿಸಿದ್ದರು. 2010ರಲ್ಲಿ 'ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು' ಕಥಾಸಂಕಲನ ಪ್ರಕಟಿಸಿದ್ದರು. ...
READ MORE