‘ರತ್ನ ಸಂಪುಟ’ ಕೃತಿಯು ಕನ್ನಡ ಭಾವಗೀತೆಗಳ ಸಂಕಲನವಾಗಿದೆ. ಪು.ತಿ. ನರಸಿಂಹಾಚಾರ್, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಪ್ರಭುಶಂಕರ, ಹಾ.ಮಾ ನಾಯಕ, ಕೆ.ಎಸ್. ನಿಸಾರ್ ಅಹಮದ್, ಕೆ.ಟ. ವೀರಪ್ಪ(ನಿರ್ವಾಹಕರು) ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಯನ್ನು ನಿರೂಪಿಸುವಲ್ಲಿ ಪ್ರಸಾರಾಂಗವು ಪ್ರಕಟಿಸಿದ(1980) ಸುವರ್ಣ ಸಂಪುಟದ್ದು ಒಂದು ಪ್ರಮುಖಪಾತ್ರ ಎಂದರೆ ತಪ್ಪಾಗಲಾರದು. ಅದು 119 ಜನ ಕವಿಗಳ ಒಟ್ಟು 261 ಕವಿತೆಗಳ ಸಂಕಲನವಾಗಿದ್ದು, ಓದುಗ ರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಅಲ್ಲಿಂದ ಮುಂದಕ್ಕೆ ಆಗಿರುವ ನವೋತ್ತರ, ದಲಿತ, ಬಂಡಾಯ ಮೊದಲಾದ ಹಲವು ಪ್ರಕಾರಗಳ ಕಾವ್ಯದ ಬೆಳವಣಿಗೆಯನ್ನು ಬಿಂಬಿಸುವಂತೆ ಈಗ ರತ್ನ ಸಂಪುಟವನ್ನು ಸಿದ್ಧಪಡಿಸಲಾಗಿದೆ. 105 ಜನ ಕವಿ ಕವಯಿತ್ರಿಯರ 198 ಕವಿತೆಗಳು ಇಲ್ಲಿ ಸೇರ್ಪಡೆಗೊಂಡಿವೆ. ವಸ್ತುವೈವಿಧ್ಯ, ಛಂದೋವಿಲಾಸ, ಅರ್ಥದ ಹರಹು ಭಾಷೆಯ ಹೊಸತನ, ಇವುಗಳಿಂದ ಕೂಡಿದ ಈಚಿನ ಕನ್ನಡ ಕವಿತೆಯ ಸೌಂದರ್ಯ ಈ ರಚನೆಗಳಲ್ಲಿ ಪ್ರಾತಿನಿಧಿಕವಾಗಿ ಸುವ್ಯಕ್ತವಾಗಿದೆ.