‘ಮಳೆಯಲ್ಲಿ ಮಳೆಯಾಗಿ’ ಕೃತಿಯು ವಿದುಷಿ ನಂದಿನಿ ನಾರಾಯಣ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಹಿನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ‘ಈ ಕವನ ಸಂಕಲನವು ನಂದಿನಿಯವರ ಸೃಜನಾತ್ಮಕ ಹಾಗೂ ಚಿಂತನಾತ್ಮಕ ನೆಲೆಗಳನ್ನು ಒಳಗೊಂಡಿದೆ. ಸಂಕಲನದ ಹೆಸರೇ ಒಂದು ರೂಪಕವಾಗಿದ್ದು, ಮಳೆಯಲ್ಲಿ ಮಳೆಯಾಗುವುದೆಂದರೆ, ತಾನು ನೋಡುವ ಬಾಹ್ಯ ರೂಪಗಳಲ್ಲಿ ತಾನೇ ಒಂದಾಗುವುದು ಎಂದರ್ಥವಾಗಿದೆ . ಕವಿ ನಂದಿನಿ. ಇಂತಹ ಆಗುವಿಕೆಯೇ ಬಹಿರಂಗವನ್ನು ಅಂತರಂಗವನ್ನಾಗಿಸುವ ಅನುಭವವೆಂದು ಹೇಳಿದ್ದಾರೆ. ಅಂತರಂಗ ಮತ್ತು ಬಹಿರಂಗಗಳನ್ನು ಬೆಸೆಯುವ ಈ ಪ್ರತಿಕ್ರಿಯೆಯು ಬದುಕು ಮತ್ತು ಬರಹಕ್ಕೆ ತನ್ನದೇ ಆದ ಶಕ್ತಿಯನ್ನು ತುಂಬಬಲ್ಲದು. ಹೀಗೆ ಮನದುಂಬಿಕೊಂಡ ಅನುಭವ ಶಕ್ತಿಯನ್ನು ಚಿಂತನೆಯ ಕುಲುಮೆಯಲ್ಲಿ ಕಾಯಿಸಿ, ಕವಿತೆಯ ಆಕೃತಿಯನ್ನಾಗಿಸಿದ್ದಾರೆ. ಇನ್ನೂ ಈ ಕೃತಿಯಲ್ಲಿರುವ ಕೆಲವೊಂದು ಕವಿತೆಗಳ ಅರ್ಥವು ಹೀಗಿದೆ. ‘ನಾನೊಂದು ರಾಗವಲ್ಲಿ’ ಕವಿತೆಯಲ್ಲಿ ಹಾಡದೆ ನಾದವೊಂದು ಹರಿದು ಹೃದಯದಲ್ಲಿ ಭಾವ ಸಂಚಲನವುಂಟು ಮಾಡಿದ ಅನುಭವವನ್ನು ಕೊಳಲಲ್ಲಿ ಕಂಗಳ ಕಂಡೆ ಎನ್ನುತ್ತ ಅಭಿವ್ಯಕ್ತಿಸುವ ರೀತಿ ಆಕರ್ಷಕವಾಗಿದೆ. ‘ಕನಸಲ್ಲಿ ನಾ ಎನ್ನ ಕಂಡೆ’ ಎಂಬ ಸಾಲು ಸಂಕಲನದ ಒಟ್ಟು ಆಶಯವೂ ಆಗಿದೆ. ‘ಧನ್ಯತೆಯಿರಲಿ ಗುರುವೇ’ ಎಂಬ ಕವಿತೆಯು ಗುರುವನ್ನು ಉದ್ದೇಶಿಸಿ ಹೇಳುವ ಮಾತುಗಳನ್ನು ಒಳಗೊಳ್ಳುತ್ತ, ಒಟ್ಟು ಜೀವನ ಮೌಲ್ಯವನ್ನು ಪ್ರತಿನಿಧೀಕರಿಸುತ್ತದೆ. ಪ್ರೇಮಕವನಗಳು ಕೂಡ ಈ ಸಂಕಲನದಲ್ಲಿದ್ದು, ಕೆಲವು ಸರಳ ವಾಚ್ಯಗಳಿದ್ದರೆ, ಇನ್ನು ಕೆಲವು ಧ್ವನಿಶಕ್ತಿಯಿಂದ ಗಮನ ಸೆಳೆಯತ್ತದೆ. ‘ಮರಳಿ ಬಾರದೆ ಮರೆಯಾಗಿರು’, ಎಂಬ ರಚನೆಯು ಒಲವಿನ ಉತ್ತಮ ಕವಿತೆಯಾಗಿದೆ. ಹಾಗೆಯೇ, ‘ವರಿಸೆನ್ನ ಪ್ರೇಮ ಪರಿಯೆ’ ಎಂಬ ರಚನೆಯನ್ನು ಗಮನಿಸಬಹುದು. ‘ಆಕಾಶವು ಹಂದರವಾಗಿ ಸಮ್ಮತಿಸುಹುದು! ನೆಲದ ಹುಲ್ಲು ಆಸನವಾಗಿ ಒಪ್ಪಿಹುದು’ ಎಂಬ ಸಾಲುಗಳು ಸಾಂಕೇತಿಕವಾಗಿ ಚೆನ್ನಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ವಿದುಷಿ ನಂದಿನಿ ನಾರಾಯಣ್ ಅವರು ಜರ್ಮನಿಯಲ್ಲಿ ವಾಸವಿದ್ದಾರೆ. ಶಾಸ್ತ್ರೀಯ ನೃತ್ಯ, ನೃತ್ಯಸಂಯೋಜಕಿ, ಲೇಖಕಿ, ಕವಿ, ವೃತ್ತಿಪರ ಕಾರ್ಯನಿರ್ವಾಹಕರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. , ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ. ರಂಗಮಂಥನದ ಸಂಸ್ಥಾಪಕರಾದ ಅವರಿಗೆ 18ನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ‘ವಿದೂಷಿ’ ಸೇರಿದಂತೆ ನಾಟ್ಯ ಮಯೂರಿ, ನಾಟ್ಯತರಂಗಿಣಿ. ಎಂಬ ಬಿರುದುಗಳು ಲಭಿಸಿವೆ. ಕೃತಿಗಳು: ಮಳೆಯಲ್ಲಿ ಮಳೆಯಾಗಿ (ಕವನ ಸಂಕಲನ), 7 ರೂಮ್ಸ್ (ಕಥಾ ಸಂಕಲನ) ...
READ MORE