`ಸಹಿ ಹಾಕಲು ನೀ ಬೇಕಿದೆ' ಶುಭಕೀರ್ತನಾ ಆಚಾರ್ಯ ಅವರ ಕವನಸಂಕಲನವಾಗಿದೆ. ಕೃತಿ ಕುರಿತು ಹಿರಿಯ ಕವಿ ದೊಡ್ಡರಂಗೇಗೌಡ ಅವರು ಹೀಗೆ ಹೇಳುತ್ತಾರೆ; ಕವಿತೆ ಯಾವತ್ತೂ ಕವಿಯ ಸ್ವಂತ ಅನುಭವದ ಪರಿಧಿಯಿಂದ ಪುಟಿದೇಳುವ ಜೊತೆ ಜೊತೆಗೆ ಅಂದದಿನ ಸಾಮಾಜಿಕ ನೆಲೆಗಳಿಗೂ ಬೆಲೆ ಕಟ್ಟುವ ಗೌಪ್ಯ ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. ಕಾಲ್ಪನಿಕ ಮತ್ತು ವಾಸ್ತವಿಕ ಎಂಬ ಎರಡೂ ಸ್ತರಗಳಲ್ಲಿ ಕವಿಯ ಕಾವ್ಯಾಭಿವ್ಯಕ್ತಿ ಪ್ರಕಟವಾಗುತ್ತದೆ. ಕಾವ್ಯಕ್ಕೆ ಶಬ್ದ ಮತ್ತು ಅರ್ಥ ಎರಡೂ ಹೆಣಿಗೆ ಮುಖ್ಯ. ಅವುಗಳು ಒಂದರ ಒಳಗೆ ಮತ್ತೊಂದು ತಳುಕು ಹಾಕಿಕೊಂಡೇ ಇರುತ್ತವೆ. ಕಾವ್ಯದ ಲಾಕ್ಷಣಿಕಾರರ ಪ್ರಕಾರ -ರಸಾನಂದ ನೀಡಲಾರದ್ದು ಕವಿತೆ ಆಗಲಾರದು! ಕವಿ ತನ್ನ ಕವಿತೆಯಲ್ಲಿ ಒಂದು ಪದ ಬಿತ್ತಿ, ಹಲವು ಹನ್ನೊಂದು ಪದಗಳ ಹೊರಡಿಸಬಲ್ಲ ಮಾಂತ್ರಿಕ! ಉದಾಹರಣೆಗೆ ನಾವು ಬೇಂದ್ರೆ, ಕುವೆಂಪು ಪದ್ಯಗಳನ್ನೇ ಚರ್ಚಿಸಬಹುದು. (ಈ ನಿಟ್ಟಿನಲ್ಲಿ ವ್ಯಾಖ್ಯಾನಕ್ಕೆ ಸಾಗಿದರೆ ಪ್ರತ್ಯೇಕ ಪ್ರಬಂಧವನ್ನೇ ಮಂಡಿಸಬೇಕಾಗುತ್ತದೆ; ಇಲ್ಲಿ ಅದರ ಔಚಿತ್ಯವಿಲ್ಲ!) ಕವಿ ನಾದಬ್ರಹ್ಮನೂ ಹೌದು; ನಾದಲೋಲನೂ ಹೌದು! ಕವಿ ಶಬ್ದಗಳಿಗೆ ಹೊಸ ಆಯಾಮ ನೀಡಬಲ್ಲ ಸೃಷ್ಟಿಕರ್ತ. ಕವಿಗೆ ಭಾವವೂ ಬೇಕು. ಸ್ಪಂದನವೂ ಬೇಕು. ವಾಸ್ತವವಾಗಿ ಕವಿಗೆ ಜೀವನದ ಸ್ಫೂರ್ತಿಯೂ ಕಾವ್ಯದ ಉಗಮದ ಮೂಲ ಇಂಧನ! ಬಾಳಿನವಳು- ಬೀಳುಗಳೇ ಕಾವ್ಯಾವಿಷ್ಕಾರದ ನೈಜ ಕಾರಣ! ಈ ಎಲ್ಲ ಕ್ರಿಯೆ ಹಾಗೂ ಪ್ರಕ್ರಿಯೆ ಸೃಜನಶೀಲತೆಯ ಅಂತಃಕರಣವಾಗುತ್ತದೆ. ಜೀವನಾನುಭವದ ಜೊತೆ ಜೊತೆಗೆ ಸಮಾನಾಂತರವಾಗಿ ಸಾಗುವ ಸೃಷ್ಟಿಕ್ರಿಯೆಯ ವಿಷಯದ ಅನುಸಂಧಾನ; ಹೂರಣದ ಪ್ರೇರಣೆಯಿಂದ ಅಭಿವ್ಯಕ್ತಿಯ ಅನಾವರಣ! ಇಂದು ಎಲ್ಲರನ್ನೂ ಕಾಡುವುದು ಬದುಕಿನ ಸೂಕ್ಷ್ಮತೆಗಳು. ಅವುಗಳೇ ಕವಿಯೊಳಗಿನ ಅಂತಃಕರಣದ ಕುದಿತದಲ್ಲಿ ಕುದಿ ಕುದಿದು ಕಾವ್ಯದ ಸಂರಚನೆಯ ಓಘವಾಗಿ ಮೂಡಿ ಮೈ ತಳೆದು ಕಾವ್ಯವೆನಿಸಿಕೊಳ್ಳುತ್ತದೆ.