ತಾಂತ್ರಿಕಯುಗದಲ್ಲೂ ಕವಿತೆಯನ್ನು ಸಂಗಾತಿಯಂತೆ ಆಪ್ತವಾಗಿ ಪ್ರೀತಿಸುವ ಮನಸುಗಳಿವೆ. ಸಾಹಿತ್ಯದ ಎಲ್ಲಾ ಪ್ರಕಾರಗಳಿಗಿಂತ ಕಾವ್ಯ ಪ್ರಕಾರ ಅತ್ಯಂತ ಸೂಕ್ಷ್ಮ ಸಂವೇದನೆಯನ್ನು ಒಳಗೊಂಡಿದೆ. ಕವಿತೆ ಹೇಗೆ ಆ ಕವಿಯಲ್ಲೂ ಸಹೃದಯನಲ್ಲೂ ಕಾಡುತ್ತಲೇ ಇರುತ್ತದೆ. ಕಾಡುವಿಕೆ ಸೂರ್ತಿ ನೀಡಿದಲ್ಲಿ ಕವಿತಾಶಕ್ತಿ ತಂತಾನೆ ಜಾಗ್ರತೆಗೊಳ್ಳುತ್ತದೆ. ಸಾಹಿತ್ಯದ ಒಲವು ಹೆಚ್ಚಾಗುತ್ತದೆ. ಆಧುನಿಕತೆ, ಜಾಗತೀಕರಣದ ಸೊಂಕು ಗ್ರಾಮೀಣ ಪರಿಸರವನ್ನೆಲ್ಲ ಆವರಿಸಿದರೂ ನಮ್ಮ ಸಂಸ್ಕೃತಿಗೆ ಸಾವಿಲ್ಲ ಎನ್ನುವುದನ್ನು ಹೊನ್ನಾಳಿ ತಾಲೂಕಿನ ಹಿರೇಗೊಣಿಗೆರೆ ಗ್ರಾಮದ ಯುವ ಕವಿ ನಾರಾಯಣಸ್ವಾಮಿ ತಮ್ಮ ಕವಿತೆಗಳಲ್ಲಿ ಸಾಭೀತು ಪಡಿಸಿದ್ದಾರೆ. ಸಂಘಟನೆ ಮತ್ತು ಕವಿಗೋಷ್ಠಿಗಳಲ್ಲಿ ತನ್ನನ್ನೇ ತಾನು ತೊಡಗಿಸಿಕೊಳ್ಳುವ ನಾರಾಯಣಸ್ವಾಮಿ ಸರಳ, ಸಂಪನ್ನತೆ, ವಿನಯಶೀಲತೆಯಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಹಿರೇಗೋಣಿಗೆರೆ ಬಗ್ಗೆ ಹಿರಿದಾದ ಅಭಿಮಾನ, ಕಾಳಜಿ ವ್ಯಕ್ತ ಪಡಿಸುವ ಕವಿ ವೃತ್ತಿಯಿಂದ ಬೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ, ಪ್ರವೃತ್ತಿಯಿಂದ ಕಾವ್ಯವನ್ನು ಓದುವ, ಬರೆಯುವ ಉಮೇದಿಗೆ ಒಗ್ಗಿಕೊಂಡಿರುವುದು ಅಚ್ಚರಿ. ಇವರ ಮೊದಲ ಕವನಸಂಕಲನ “ಮುಂಗಾರಿನ ಮೊದಲ ಹನಿ” ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.