ಕವಿ ಸಿದ್ಧಲಿಂಗಯ್ಯ ಅವರ ಕವಿತೆಗಳ ಸಂಕಲನ. ಈ ಸಂಕಲನದಲ್ಲಿ 40ಕವಿತೆಗಳಿವೆ. ಈ ಕವಿತೆಗಳ ಬಗ್ಗೆ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರು ’ಸಿದ್ದಲಿಂಗಯ್ಯನವರ ಕಾವ್ಯ ಪ್ರಾಮಾಣಿಕವಾದದ್ದೆಂದು ಹೇಳಿದರೆ ಏನೂ ಹೇಳಿದಂತಾಗುವುದಿಲ್ಲ. ಕ್ರಾಂತಿಯಲ್ಲಿ ಹುಟ್ಟಿ ಬರುವ ಕಾವ್ಯಕ್ಕೆ ಪ್ರಾಮಾಣಿಕತೆ ಇರಲೇಬೇಕು. ಕವಿಯ ಸ್ವಾನುಭವ ಪ್ರಾಮಾಣಿಕವಾಗಿದ್ದರೆ ಅದರ ಸಂವಹನಶಕ್ತಿ ಹೆಚ್ಚಾಗುತ್ತದೆ. ಆದರೆ ಸಿದ್ಧಲಿಂಗಯ್ಯನವರ ಕಾವ್ಯ ಇದಕ್ಕೂ ಹೆಚ್ಚಿನ ಉದ್ದೇಶವೊಂದನ್ನು ನೆರವೇರಿಸುತ್ತದೆ. ಈಗಾಗಲೆ ಡಿ.ಆರ್. ನಾಗರಾಜರು ಗುರುತಿಸಿರುವಂತೆ ಸಿದ್ಧಲಿಂಗಯ್ಯನವರ ಕಾವ್ಯ ಒಂದು ಜನಾಂಗವನ್ನು ಕಟ್ಟಿದೆ, ಕೇವಲ ಜೈವಿಕ ಪಾತಳಿಯ ಮೇಲೆ ಜೀವಿಸುತ್ತಿರುವ ಜನಾಂಗಕ್ಕೆ ಒಂದು ಸಾಂಸ್ಕೃತಿಕ ನೆಲೆಯ ಕಟ್ಟಿಕೊಟ್ಟಿದೆ. ಈ ಕಾವ್ಯ ಕೇವಲ ಒಂದು ಜನಾಂಗವನ್ನಲ್ಲ, ವಿಶ್ವದ ಎಲ್ಲ ದಲಿತರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಪಡೆದಿದೆ. ತನ್ನ ವಿರುದ್ಧವಾದದ್ದರ ಬಗ್ಗೆ ಆಕ್ರೋಶವಿದ್ದರೂ, ತನ್ನ ನೋವಿನ ಅಳತೆಯ ಬಗ್ಗೆ ಅಭಿಮಾನವಿದೆ. ಬೇಕೆಂದೆ ಈ ನೋವು ಜೋರಾದ ದನಿಯಲ್ಲಿ ಉತ್ತೇಕ್ಷೆಗಳು ತುಂಬಿರುವ ಭಾಷೆಯಲ್ಲಿ ಅಭಿವ್ಯಕ್ತವಾಗುತ್ತದೆ. ನೋವು ಅಸಹನೀಯವಾಗಿರುವುದರಿಂದ ಧ್ವನಿಗಾಗಲಿ, ಮೆಲುಮಾತಿಗಾಗಲಿ ಇಲ್ಲಿ ಅವಕಾಶವಿಲ್ಲ. ಉಳ್ಳವರ ಸಾಂಸ್ಕೃತಿಕ ಮೌಲ್ಯಗಳನ್ನು ನಿರಾಕರಿಸುವ ಮಟ್ಟಿಗೆ ನೋವು ತೀಕ್ಷ್ಣವಾಗಿದೆ. ಅಮಾನುಷವಾಗುವ ದುಡಿತ, ದಣಿವುಗಳು ಮನುಷ್ಯಮೌಲ್ಯಗಳನ್ನು ತಿರಸ್ಕರಿಸಿದರೆ ಆಶ್ಚರ್ಯವಿಲ್ಲ. ಸಿದ್ದಲಿಂಗಯ್ಯನವರ ಕಾವ್ಯದಲ್ಲಿ ಅಂಥ ಕ್ಷಣಗಳಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...
READ MORE