ಸನಾವುಲ್ಲಾ ನವಿಲೇಖಾಳ್ ಅವರ 'ಪಂಜು' ಕೃತಿಯು ಕವನ ಸಂಕಲನವಾಗಿದೆ. ಕಾವ್ಯ ಕೃಷಿಯ ಒಲವು, ನಿಲುವುಗಳ ಬಗ್ಗೆ ಸ್ಪಷ್ಟ ಕಣ್ಣೋಟವಿರುವುದನ್ನು ಈ ಸಂಕಲನದ ಕೆಲವು ಕವನಗಳು ಖಾತರಿಪಡಿಸುತ್ತವೆ. ‘ನನ್ನಕವಿತೆ' ಎಂಬ ರಚನೆಯಲ್ಲಿ ಅಮ್ಮ, ಅಪ್ಪ ಮತ್ತು ಬಾಲ್ಯದ ವಿವರಗಳ ಮೂಲಕ ತಮ್ಮ ಕವಿತೆಯ ಆಶಯವನ್ನು ತಮಗೆ ತಾವೇ ಗುರುತಿಸಿಕೊಂಡಿದ್ದಾರೆ. ಕವಿ 'ಅಮ್ಮನ ಅಳುವ ಗಂಟಲ ಜೋಗುಳ', 'ಅಪ್ಪನ ಉಂಗು ಹರಿದ ಚಪ್ಪಲಿ’, ಇಲ್ಲಿ ಬರುವ ಅಮ್ಮ ಮತ್ತು ಅಪ್ಪ, ಕವಿತೆ ಮೂಲಕ ಎಲ್ಲರ ಬಡ ಬದುಕಿನ ರೂಪಕವೂ ಆಗುತ್ತಾರೆ. 'ಧ್ಯಾನ' ಎಂಬ ಕವನದಲ್ಲಿ ‘ಉಸಿರುಗಟ್ಟಿದ ಜೀವಗಳಿಗೆ ಉಸಿರು ತುಂಬಿದ ಬುದ್ಧನೆಂಬ ಬೆಳಕನ್ನು ಧ್ಯಾನಿಸುತ್ತೇನೆ' ಎನ್ನುವ ಸಂಕಲ್ಪ ಮತ್ತು ‘ನನ್ನಕವಿತೆ' ಯ ಆಶಯಗಳನ್ನು ಒಟ್ಟಿಗೆ ಇಟ್ಟು ಅವಲೋಕಿಸಿದಾಗ ಕವಿ ಸನಾವುಲ್ಲಾ ನವಿಲೇಹಾಳ ಅವರ ಸಾಮಾಜಿಕ ಕಾಳಜಿಯ ನೋಟ, ಮನವರಿಕೆಯಾಗುತ್ತದೆ. ಹಾಗೆ ಸಾಮಾಜಿಕ ಕಾಳಜಿಯ ಹೃದಯವನ್ನು ಜೀವ ಶಕ್ತಿಯಾಗಿಸಿಕೊಂಡ ಈ ಕವಿ ಜಾತಿವಾದ, ಧಾರ್ಮಿಕ ಮೂಲಭೂತವಾದಗಳ ವಿರೋಧಿ ಇವರ ಕವನಗಳಲ್ಲಿ ಇರುವುದು ಮಾನವೀಯ ಹೃದಯ, ಈ ಹೃದಯದಿಂದಲೇ ಪ್ರೀತಿ ಪ್ರೇಮದ ನಿವೇದನೆಗಳೂ ಹುಟ್ಟಿ ಬಂದಿವೆ. ಅಂತರ್ಮುಖಿಯಾಗುತ್ತಲೇ ಸಮಾಜಮುಖಿಯಾಗುವ ಪ್ರಾಮಾಣಿಕ ಪ್ರಯತ್ನಗಳೂ ಇಲ್ಲಿ ರೂಪುಗೊಂಡಿವೆ. ಈ ಸಂಕಲನದಲ್ಲಿ ಅತಿವೃಷ್ಟಿ' 'ಅಪ್ಪನ ಗೋರಿ, ಮುಂದೆ ಹೆಡೆಮುರಿಕಟ್ಟಿ, ಪಂಜು ಹಿಡಿದು ಬಂದವರು', 'ಅಂಜಿಕೆ', 'ಧ್ಯಾನ', 'ಅರಿವಿನ ಹಣತೆ' ಯಂತಹ ಗಮನಾರ್ಹ ಕವನಗಳನ್ನು ಕಟ್ಟಿರುವ ಸನಾವುಲ್ಲಾ ನವಿಲೇಖಾಳ್ ಅವರು ಬೆಳೆಯುವ ಭರವಸೆಯ ''ಹೆಜ್ಜೆ ಗುರುತು' ಮೂಡಿಸಿದ್ದಾರೆ.
ಕವಿ ಸನಾವುಲ್ಲಾ ನವಿಲೇಹಾಳ್ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದವರು. ಮಂಗಳೂರಿನ ಮುಸ್ಲಿಂ ಲೇಖಕರ ಸಂಘ ಕೊಡಮಾಡುವ ಮುಸ್ಲಿಂ ಲೇಖಕ ಪ್ರಶಸ್ತಿ ಲಭಿಸಿದೆ. ತನ್ನೂರಿನಲ್ಲಿ ಸ್ವಂತದ ಗ್ರಂಥಾಲಯವನ್ನು ತೆರೆದಿದ್ದು,ಕನ್ನಡ ಸಾಹಿತ್ಯ ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಓದಲು ಉಚಿತವಾಗಿ ಪುಸ್ತಕಗಳನ್ನು ಒದಗಿಸುತ್ತಿದ್ದಾರೆ. ಕೃತಿಗಳು: ಒಂಟಿ ಮರದ ಕೆಳಗೆ (ಕವನ ಸಂಕಲನ) ...
READ MORE