ವಿದ್ಯಾರಶ್ಮಿ ಪೆಲತ್ತಡ್ಕ ಅವರ ಈ ಸಂಕಲನದ ಎಲ್ಲ ಕವಿತೆಗಳಿಗೂ ಒಬ್ಬಳೇ ನಾಯಕಿ-ಹೆಣ್ಣು. ಸಾಮಾನ್ಯ ಹೆಣ್ಣು. ಹಾಗಾಗಿ ಇಲ್ಲಿ ಒಬ್ಬಳ ಆತ್ಮಕಥನ ಇನ್ನಾರದೋ ಚರಿತ್ರೆಯಾಗುತ್ತದೆ. ಪ್ರತಿಯೊಬ್ಬಳ ಮುಖವೂ ಕನ್ನಡಿಯಾಗಿ ತನ್ನ ಓರಗೆಯವರ ದುಃಖ ದುಮ್ಮಾನಗಳನ್ನು ಪ್ರತಿಬಿಂಬಿಸುತ್ತದೆ.
ಹೆಣ್ಣಿನ ಸ್ವಾತಂತ್ರ್ಯದ ಅಭೀಪ್ಸೆ ಈ ಕವಿತೆಗಳಲ್ಲಿ ಪ್ರಕಟವಾಗುವ ಬಗೆ ವಿಶಿಷ್ಟವಾಗಿದೆ. ತಾಯಿ, ಮಗಳು, ಅಕ್ಕ, ತಂಗಿ, ಅತ್ತೆ, ಸೊಸೆ, ಪತ್ನಿ, ಗೆಳತಿ-ಸಮಾಜ ಮನ್ನಿಸುವ ಹೆಣ್ಣಿನ ಎಲ್ಲ ಪಾತ್ರಗಳೂ ಗಂಡಿನ ಜೊತೆಗೆ ಒಂದಲ್ಲ ಒಂದು ಸಂಬಂಧವನ್ನು ಸೂಚಿಸುತ್ತವೆ. ಅವು ಪರಸ್ಪರ ಪ್ರೀತಿಯ ನಂಟನ್ನು ಮಾತ್ರ ಬಯಸುವ ಸಂಬಂಧಗಳಲ್ಲ. ಈ ಸಂಬಂಧಗಳೆಲ್ಲವೂ ಕೆಲವು ನಿರ್ದಿಷ್ಟ ಕರ್ತವ್ಯ ಮತ್ತು ಕಟ್ಟುಪಾಡುಗಳನ್ನು ಹೆಣ್ಣಿಗೆ ವಿಧಿಸುವಂತಹವು.
ಲೋಕರೂಢಿಯಲ್ಲಿ ಹೆಣ್ಣು ತನ್ನತನವನ್ನು ಗುರುತಿಸಿಕೊಳ್ಳುವುದೇ ಗಂಡಿನ ಜೊತೆ ತನ್ನ ಸಂಬಂಧದ ಮೂಲಕ. ಹೆಣ್ಣನ್ನು ನಿರ್ವಚಿಸುವ ಈ ಲೋಕರೂಢಿಯನ್ನು ಕವಯಿತ್ರಿ ಧಿಕ್ಕರಿಸುತ್ತಾರೆ. ‘ಖಾಲಿ ಹಣೆ ಕಂಡರೇಕೆ ಅಂಜುವೆ ಎಲೆ ಗಂಡೆ, ನನ್ನೊಳಗೆ ನೀ ಇಲ್ಲವಾಗುವ ಕ್ಷಣ ಭಯಪಡು’ ಎಂಬ ಗಂಡಿನ ಜೊತೆ ಸಂಬಂಧ ಏರ್ಪಡುವ ಎಲ್ಲ ಪಾತ್ರಗಳನ್ನು ಹೆಣ್ಣಾಗಿ ತಾನು ನಿರ್ವಹಿಸಿದರೂ ಆ ಪಾತ್ರಗಳ ಹೊರತಾಗಿಯೂ ತನ್ನ ದೇಹ ಆತ್ಮಗಳಿಗೆ ಸ್ವಾಯತ್ತ ಅಸ್ತಿತ್ವವಿದೆ ಎಂಬುದು ಈ ಕವಿತೆಗಳ ಹೆಣ್ಣಿನ ಸ್ವಗತ.
ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ. ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ. ...
READ MORE