ಕವಯತ್ರಿ ಶ್ರೀದೇವಿ ಕೆರೆಮನಿ ಅವರ ಕವನ ಸಂಕಲನ-ಮೈ ಮುಚ್ಚಲೊಂದು ತುಂಡು ಬಟ್ಟೆ. ಇದು ಈ ಕವಯತ್ರಿಯ 7ನೇ ಕವನ ಸಂಕಲನ. ಈ ಕವನ ಸಂಕಲನ ಕುರಿತು ಸ್ವತಃ ಕವಯತ್ರಿ ‘ಈ ಬದುಕು ನಿಜಕ್ಕೂ ವಿಸ್ಮಯದ ತವರು. ಅದರೊಳಗೆ ಕವಿತೆ ಮಿಳಿತವಾಗಿಬಿಟ್ಟರಂತೂ ಅದೊಂದು ಅದ್ಭುತ ಪ್ರಪಂಚವೇ ಸರಿ. ಈ ಕವಿತೆ ನನಗೆ ಏನೆಲ್ಲವನ್ನೂ ಕೊಟ್ಟಿದೆ, ನಾಲ್ಕು ಜನರಲ್ಲಿ ಹೆಮ್ಮೆಯಿಂದ ತಲೆ ಎತ್ತುವುದನ್ನು ಕಲಿಸಿದೆ, ಹೇಗೆ ವಿನೀತಳಾಗಬೇಕು ಎಂಬುದನ್ನೂ ತಿಳಿಸಿದೆ, ನನ್ನತನವನ್ನು ಕಾಯ್ದುಕೊಳ್ಳುವುದನ್ನೂ ಇದು ನನಗೆ ರೂಢಿ ಮಾಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಅರ್ಥಮಾಡಿಕೊಳ್ಳುವುದನ್ನು ಹೇಳಿಕೊಟ್ಟಿದೆ. ಕವಿತೆ ಎಂದರೆ ನನ್ನ ಪಾಲಿಗೆ ಗುರು, ತಪ್ಪಿದರೆ ಕಿವಿ ಹಿಡಿದು ದಂಡಿಸುವ ಶಿಕ್ಷಕ, ಕೈ ಹಿಡಿದು ನಡೆಸುವ ನನ್ನೊಳಗಿನ ಚೇತನವೇ ಆಗಿಬಿಟ್ಟಿರುವಾಗ ನಾನು ಕವಿತೆಯ ಬಗ್ಗೆ ಮತ್ತೇನನ್ನು ಹೇಳಲು ಸಾಧ್ಯ.?’ ಎಂದು ಹೇಳಿದ್ದಾರೆ.
ಅಲ್ಲದೇ, ‘ಏಳು ಕವನ ಸಂಕಲನಗಳಾದ ಮೇಲಾದರೂ ಕವಿತೆಯಲ್ಲೊಂದು ಗಾಂಭೀರ್ಯತೆ ಬರಬೇಕು ಎಂದು ನೀವೇನಾದರೂ ಆಶಿಸುವುದೇ ಆದರೆ ದಯವಿಟ್ಟು ಕ್ಷಮಿಸಿಬಿಡಿ. ಯಾರಿಗೂ ಅರ್ಥವಾಗದ ಗಂಭೀರ ಕವಿತೆಗಳನ್ನು ಬರೆದು, ಮೂಗು ಮೇಲೇರಿಸಿ ಗಂಟು ಮುಖ ಹಾಕಿ ಕುಳಿತುಕೊಳ್ಳುವುದರಲ್ಲಿ ನನಗೆ ಯಾವ ನಂಬಿಕೆಯೂ ಇಲ್ಲ. ಯಾಕೆಂದರೆ ಶ್ರೇಷ್ಠ ಕವಿಗಳೆಂದು ಹೊಗಳಿಸಿಕೊಂಡ ಗುಂಪಿನ ನಡುವೆ ಆತ್ಮವಿಶ್ವಾಸದಿಂದ ಮಾತನಾಡುವಂತೆ, ತಲೆಯ ಮೇಲೆ ಬುಟ್ಟಿ ಹೊತ್ತು ಮನೆಮನೆಗೆ ಮೀನು ಮಾರಲು ಬರುವ ಮಂಕಾಳಿಯೊಂದಿಗೂ ನಾನು ಸಲೀಸಾಗಿ ಬೆರೆಯಬಲ್ಲೆ. ಸಂತೆಯಲ್ಲಿ ಬೀದಿ ಬದಿಗೆ ತರಕಾರಿ ಮಾರಲು ಕುಳಿತುಕೊಳ್ಳುವ ಹೆಂಗಸೊಂದಿಗೆ ಕುಕ್ಕುರುಗಾಲಿನಲ್ಲಿ ಕುಳಿತು ಹರಟೆಹೊಡೆಯಬಲ್ಲೆ. ರಸ್ತೆಯಂಚಿನ ಪೆಟ್ಟಿಗೆಯಂಗಡಿಯ ಎದುರು ನಿಂತು ಚಹಾ ಕುಡಿಯುವಂತಹ ಚಿಕ್ಕ ಪುಟ್ಟ ಸಂತೋಷದಲ್ಲೇ ಬದುಕಿನ ಖುಷಿ ಇದೆ ಎಂದು ನಂಬಿಕೊಂಡವಳು ನಾನು. ಹೀಗಾಗಿ ನನ್ನ ಕವಿತೆಗಳೂ ನಿಮಗೆ ಯಾವ ಮೇಲರಿಮೆ ಇಲ್ಲದ, ರೂಪಕಗಳ ಹಂಗನ್ನು ಅತಿಯಾಗಿ ಹೊತ್ತುಕೊಳ್ಳದ ಸೀದಾ ಸಾದ ಕವಿತೆಗಳೆನಿಸಿದರೆ ನಾನೇನೂ ಮಾಡಲಾರೆ.’ ಎಂದೂ ಅವರು ತಮ್ಮ ಕವನಗಳ ಸ್ವರೂಪವನ್ನು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹಿರೇಗುತ್ತಿ ಮೂಲದ ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...
READ MORE