ಕವಿ ಸುಶೀಲೇಂದ್ರ ಕುಂದರಗಿ ಅವರು ಕವಿತಾ ಸಂಕಲನ-ಮದ್ಯಾರಾಧನೆ. ಇವು ಅಮಲು ಪದ್ಯಗಳು ಎಂದು ಕವಿಯು ಉಪಶೀರ್ಷಿಕೆ ನೀಡಿದ್ದಾರೆ. ಬದುಕಿನ ಆಕರ್ಷಣೆಗಳಿಂದ ಮನುಷ್ಯ ಹೊರಗುಳಿಯಲಾರ. ಈ ಸತ್ಯದೊಂದಿಗೆ ನಿತ್ಯದ ವಿಷಯ ವಾಸನೆಯ ಅಮಲು ಆತನನ್ನು ತೇಲಿಸುತ್ತದೆ. ಕೆಳಗೆ ಕೆಡಹುತ್ತದೆ. ಭೂವಿಗೆ ಇರುವಂತೆ ಕರ್ಷಣ ಮತ್ತು ಅಪಕರ್ಷಣೆಗಳ ಅಧೀನನಾಗಿ ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿಕೊಳ್ಳುತ್ತಾನೆ. ಇಲ್ಲಿನ ಪದ್ಯಗಳಿಗೆ ಬಂಧ ಬಂಧುರಗಳಿಲ್ಲ. ಮುಕ್ತಕಗಳಂತೆ ತೋರುತ್ತವೆ. ಓದುಗನನ್ನು ಹಿಡಿದಿಟ್ಟು ಚಿಂತನೆಗೂ ಹಚ್ಚುತ್ತವೆ. ಹೀಗಾಗಿ ಇಲ್ಲಿ ಪ್ರಯೋಗಿಸಿದ ‘ಮದ್ಯ’ ಬದುಕಿನ ಸೆಳೆತದ ಅಮಲಾಗಿ ಸಾಂಕೇತಿಸುತ್ತದೆ.
ಸಂಯುಕ್ತ ಕರ್ನಾಟಕ ದಿನಪತ್ರಿಕೆ ವಿಶ್ರಾಂತ ಸಂಪಾದಕ ಮನೋಜ ಪಾಟೀಲ ಈ ಕೃತಿಯ ಕುರಿತು ‘ಬದುಕೆಂಬ ಮಧುಶಾಲೆಯಲ್ಲಿ ಮದ್ಯ ಕುಡಿದು ಹೋದವರ ಲೆಕ್ಕವಿಲ್ಲ ನಾ ಕುಡಿಯುವ ಮದ್ಯ ಹೊಸದೇನೂ ಅಲ್ಲ ಹೊಸ ರಸಿಕನೆದೆಗೆ ನನ್ನ ನಶೆಯ ತೊದಲು ಹಿಂದಿನವರು ಕುಡಿದಿಟ್ಟ ಎಂಜಲು ಈ ಮಧು ಬಟ್ಟಲು ಕನಸು, ಭಾವನೆ ಮತ್ತು ಅಮಲು ಇವಗಳಿಂದ ಆವೃತವಾದ ಭಾವನೆಗಳ ಸುಕೋಮಲ ಸ್ಪರ್ಶದಿಂದ ಸುಖ ಪಡೆವ ಮನುಷ್ಯನೇ ಇಲ್ಲ. ಯಾಕೆಂದರೆ, ಅವನ ಮನಸ್ಸೇ ಅವನ ಸ್ನೇಹಿತ ಮತ್ತು ವೈರಿ. ಆದುದರಿಂದಲೇ, ಕೊರೆವ ಚಳಿಯಲ್ಲಿ ಅವನ ಹೃದಯ ಕೆಂಡದ ಓಕುಳಿಯಾಡಬಲ್ಲದು. ಧಗಧಗಿಸುವ ಜ್ವಾಲೆಗಳಲ್ಲಿ ಹಿಮಬಂಡೆಗಳಡಿ ಕಣ್ಣೆವೆ ಮುಚ್ಚಿಕೊಂಡು ಮಲಗಬಹುದು. ಸುಶೀಲೇಂದ್ರರ ಮದ್ಯಾರಾಧನೆ ಅಪ್ಪಟ ಕುಡುಕರ ಹಸಿ ಹಸಿ ಭಾವನೆಗಳನ್ನು ಕೆದಕುವ ಕೆರಳಿಸುವ ಸ್ವೇಚ್ಛಾಚಾರದ ಸಮರವೇದಿಕೆಯಾಗಿಲ್ಲ. ಬದಲಾಗಿ, ಅಮಲು ಎಂಬ ಚೌಕಟ್ಟಿನಲ್ಲಿ ಪಾದರಕ್ಷೆ ಹೊರಬಿಟ್ಟು ಪೂಜನೀಯ ಸ್ಥಳದಲ್ಲಿ ಪ್ರವೇಶಿಸುವ ಹಾಗೇ, ನನ್ನತನ ಹೊರಗಿಟ್ಟು ಮದ್ಯಾರಾಧನೆಯಲ್ಲಿ ಪ್ರವೇಶಿಸಿದರೆ ಈ ಅಮಲಿನ ಹನಿಗಳು ಅರ್ಥವಾಗುತ್ತವೆ. ಅಮಲೇರಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ..
ಕವಿ ಸುಶೀಲೇಂದ್ರ ಕುಂದರಗಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದವರು. ಅಭಿನಯ, ರಂಗನಿರ್ದೇಶನ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಮದ್ಯಾರಾಧನೆ (ಅಮಲು ಪದ್ಯಗಳು) ...
READ MORE‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸುಶೀಲೇಂದ್ರ ಕುಂದರಗಿ
ಸೂಕ್ಷ್ಮ ಸಂವೇದನೆಯ ಮನುಷ್ಯರಷ್ಟೇ ಅಲ್ಲ ; ಸೂಕ್ಷ್ಮ ಕವಿಯೂ ಹೌದು .
ಮೊನ್ನೆ ಪುಸ್ತಕದಲ್ಲಿ ಮುಳುಗಿದ್ದಾಗ ಇವರ "ಮದ್ಯಾರಾಧನೆ " ಸಿಕ್ಕಿತು. ಹೌದು ಸಂಕಲನದ ತುಂಬಾ " ಅಮಲಿ " ನದೇ ಕವಿತೆಗಳು .
ಬದುಕೆಂಬ ಮಧುಶಾಲೆಯಲ್ಲಿ
ಮದ್ಯ ಕುಡಿದು ಹೋದವರ ಲೆಕ್ಕವಿಲ್ಲ
ನಾ ಕಡಿದ ಮದ್ಯ ಹೊಸದೇನೂ ಅಲ್ಲ
ಹೊಸ ರಸಿಕನೆದೆಗೆ ನನ್ನ ನಶೆಯ ತೊದಲು
ಹಿಂದಿನವರು ಕುಡಿದಿಟ್ಟ ಎಂಜಲು
ಈ ಮಧು ಬಟ್ಟಲು. ಎಂದು ಸಮಸ್ತ ಕುಡುಕರಿಗೆ ಈ ಪುಸ್ತಕವನ್ನು ಕವಿ
ಅರ್ಪಿಸಿರುವರು. " ಪದಾರ್ಥ ಪ್ರಪಂಚದಿಂದ ಪಾರಮಾರ್ಥದೆಡೆಗೆ....." ಎಂದು ನಾಡಿನ ಸೂಕ್ಷ್ಮ ಸಂವೇದನೆಯ ಬರಹಗಾರ ಶ್ರೀಧರ ಬಳಗಾರ ಈ ಪುಸ್ತಕಕೆ ಮುನ್ನುಡಿ ಬರೆಯುತ್ತಾ....... "ಮದ್ಯಪಾನವನ್ನು ವರ್ಜಿತ ಸಾಮಾಜಿಕ ವ್ಯಸನದಂತೆ ತಿಳಿಯದೇ ಅದರಿಂದ ಪಡೆದ ಅನುಭವವನ್ನು ಜೀವನದ ಹಲವು ಭಾವನಾತ್ಮಕ ಕ್ಷಣಗಳೊಂದಿಗೆ ಅನುಸಂಧಾನ ಗೊಳಿಸುತ್ತಾ ಅದಕ್ಕೊಂದು ತಾತ್ವಿಕ ರೂಪ ಕೊಡುವ ಪ್ರಯತ್ನ ಕವಿಯದಾಗಿದೆ. ನಿಶೆಗೊಳಗಾದವರ ಅನುಭವದಲ್ಲಿ ಲೋಕಸತ್ಯ ದರ್ಶನ ಸಾಧ್ಯವೆಂಬ ಈ ಪದ್ಯಗಳ ನಿರೂಪಕನದು. ಒಮ್ಮೊಮ್ಮೆ ಕುಡುಕರು, ಹುಚ್ಚರು ಬೀದಿ ಪ್ರವಾದಿಗಳಂತೆ ಅಸಾಧಾರಣ ಲೋಕೋತ್ತರವನ್ನು ಸಹಜವಾಗಿ ನುಡಿಯುವದುಂಟು .ಕುಡಿತದ ಅಮಲಿನ ಸ್ವಗತದಲ್ಲಿ ಕಾಲಾತೀತ ದಾರ್ಶನಿಕರಂತೆ ಕಂಡರೂ ಆಶ್ಚರ್ಯವಿಲ್ಲ. ಕುಂದರಗಿಯವರ ಕವನಗಳನ್ನು ಓದುತ್ತಿರುವಾಗ ಬ್ರೆಕ್ಟನ ನಾಟಕ ವೊಂದರ ವಿಲಕ್ಷಣ ಪಾತ್ರವಾದ ಪುಂಟಿಲನ ನೆನಪಾಗುವದು " ಎಂದಿರುವರು.
ಸುಶೀಲೇಂದ್ರ ಕುಂದರಗಿಯವರ ಕೆಲ ಮತ್ತಿನ ಕವನಗಳ ಸಾಲು ಇಂತಿದೆ.
(೧) ಮಧು ಕುಡಿಯುವದಕ್ಕೂ
ಕುಡಿಸುವದಕ್ಕೂ ಪಾಪ ಪುಣ್ಯದ
ಲೆಕ್ಕಾಚಾರವಿದೆ ಸಂಪ್ರದಾಯಿಗಳಲ್ಲಿ
ಕುಡಿಸಿದವ ಪಾಪಿ
ಕುಡಿದವ ಪುಣ್ಯವಂತ.
(೨) ಕವಿ ಬರೆವ ಕಾವ್ಯ
ನಾ ಕುಡಿವ ಮದ್ಯ
ಎರಡೂ ಒಂದೇ
ಕಾವ್ಯ ರಸಿಕರೆದೆಯಲ್ಲಿ
ತೊನೆದಾಡುತ್ತದೆ
ಮದ್ಯ ಸವಿದವರನ್ನೇ
ತೂಗೂತ್ತದೆ.
(೩) ಕುಡಿಸಿ ಆಡಿಸಿ ಹಾಡಿಸಿ ಮೈದಡವಿ
ಭಲಗಿಸುವ ಇವಳು ನನ್ನವಳು
ಎಂದುಕೊಂಡೆ
ಮಧುಶಾಲೆಯಲ್ಲಿ
ನನ್ನಂಥ ಅದೆಷ್ಟೋ ಮಧುಕರರನ್ನು
ಈಕೆ ರಮಿಸುವದೂ ಕಂಡೆ.
(೪) ನನ್ನಂಥ ಕುಡುಕರಿಂದ
ಅದೆಷ್ಟೋ ಕುಟುಂಬಗಳು ಮಣ್ಣುಪಾಲು
ಎಂಬೀ ಆರೋಪ
ಹಸೀ ಸುಳ್ಳು ಗೆಳೆಯಾ
ತನ್ನ ಮೇಲೆ ತನಗಿರದ ನಂಬಿಕೆ
ಯಿಂದ ಹಾಳಾದವು ಅವೆಲ್ಲ
ಬಿಟ್ಟು ಬದುಕುವ ಛಾತಿ ಇಲ್ಲದ
ಧೈರ್ಯದಿಂದ.
(೫)ಬದುಕಿನ ಕಾವ್ಯ ಕಟ್ಟುವುದು
ಮಧುಶಾಲೆಯಲ್ಲಿ
ಗೆಳೆಯಾ
ದಿನದ ದುಡಿತದ ಕಾವು ಸುರಿಸಿ
ಒತ್ತರಿಸಿಟ್ಟ
ದುಃಖ ದುಮ್ಮಾನ ಹನಿದು
ಗುಟುಕರಿಸುವ ಎಂಜಲು
ಮಧುಬಟ್ಟಲಿನ
ಒಡಲಿನಲ್ಲಿ
ಮೊಳಕೆಯಾಗಿ.
ನಮ್ಮಿಂದ ಆಕಸ್ಮಿಕವಾಗಿ ದೂರಾದರೂ ತಮ್ಮ ಗಾಂಭೀರ್ಯ , ಮಾನವೀಯ ಅನುಕಂಪದಿಂದ
ನಮ್ಮೆದೆಗೆ ಹತ್ತಿರವಾದ ಆಕಾಶವಾಣಿಯ ಅನಿಲ ದೇಸಾಯಿಯವರು, ಸ್ವಾನುಭವದ ಮೂಸೆಯಲ್ಲಿ ಕಂಡ ಖಯ್ಯಾಮ್ " ಎಂದು ಈ ಪುಸ್ತಕಕ್ಕೆ ಒಳನುಡಿ ಬರೆಯುತ್ತಾ , " ಈ ಪದ್ಯಗಳು ಓದಲು ಅತ್ಯಂತ ಆಕರ್ಷಣೀಯ ವಾಗಿಯೂ ಸರಳ ಸಹಜತೆಯನ್ನು ಒಳಗೊಂಡಿದ್ದರೂ ಅವುಗಳ ಅಂತರಾಳದಲ್ಲಿ ಅಡಗಿರುವ ಅರ್ಥ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ.ಸುಶೀಲೇಂದ್ರ ಅವರು ಭಾಷೆಯನ್ನು ಬಹಳಪೂರಕವಾಗಿ ಬಳಸಿಕೊಳ್ಳುತ್ತ ಮೂಲ ಕಾವ್ಯದ ಗಂಭೀರತೆಯನ್ನು ಕಾಪಾಡಿಕೊಳ್ಳುವದರಲ್ಲಿ ಯಶಸ್ವಯಾಗಿದ್ದಾರೆ. ಈ ಪದ್ಯಗಳು ಓದುಗರನ್ನು ಹಿಡಿದಿಟ್ಟು ಕೊಳ್ಳುತ್ತಾ ಉಮರ್ ಖಯ್ಯಾಮರ ಚಿಂತನೆಗಳನ್ನು ಅನಾವರಣಗೊಳಿಸುತ್ತದೆ ಎಂದಿರುವರು.
ಲೇಖಕ ತಮ್ಮ " ಮದ್ಯಾರಾಧನೆ " ಯಲ್ಲಿ "ನನ್ನ ನಶೆಯ ತೊದಲು " ಎನ್ನುತ್ತಾ , " ಇದು ಬಂಡಾಯವಲ್ಲ ; ಬಂಡುಣಿಗರ ಬಂಡು. ಬಂಡಾಯಗಾರರಿಗೆ ಬಂಡಾಯದ ಧೋರಣೆಯ ಧಾರಕ ಶಕ್ತಿಯೂ ಅಲ್ಲ; ಆದರೂ ಇದು ಅಮಲು " ಎಂದಿರುವರು .
ಬಾಗಲಕೋಟೆಯ ಕುಂದರಗಿಯ " ಸಾಂಖ್ಯಾಯನ ಪ್ರಕಾಶನ " ಪ್ರಕಟಿಸಿದ ಈ ಪುಸ್ತಕದಲ್ಲಿ ಮೇಲಿನಂತಹ ೧೦೮ ಅಮಲು ಪದ್ಯಗಳಿವೆ . ಕುಡುಕರ ಈ ಕವನದಲ್ಲಿ ಇಂದಿನ ಅಸ್ವಸ್ಥ ಸಾಮಾಜಿಕ ರೀತಿ, ದಾರಿ ತಪ್ಪಿದ ನಡೆ ನುಡಿ , ಜನ ಸಾಮಾನ್ಯರ ದೈನಂದಿನ ಬದುಕು, ಗಂಡು ಹೆಣ್ಣಿನ ನವಿರಾದ ಪ್ರೀತಿ , ಬಡವನ ಕಹಿ ಬದುಕು ಎಲ್ಲವೂ ಅಮಲಿನಲ್ಲೇ ಅಡಕವಾಗಿರುತ್ತದೆ . ಈ ಕುಡಿತದ ಅಮಲಿನಲ್ಲಿ ತೊದಲು ನುಡಿಗಳಿಲ್ಲ, ಜಿಗಿದಾಟ - ತೂರಾಟ- ಆಕ್ರೋಶ ಅಸೂಹೆಗಳಿಲ್ಲ. ಕುಡಿತದ ಅಮಲಿನ ಈ ಎಲ್ಲಾ ಸಾಲುಗಳೂ ನಿತ್ಯ ಸತ್ಯಗಳೇ . ಪತ್ರಕರ್ತ ನಾದರೂ ಇವರ ಸಾಲುಗಳು ಶುಷ್ಕ ವರದಿಗಳಾಗದೇ ಸೃಜನ ಶೀಲತೆಯಿಂದ ಮೈದಳೆಯಲಿ ಎಂದು ಹಾರೈಸುತ್ತಾ ಇವರ ಹೊಸ ಕವಿತೆಯ ಸಾಲುಗಳಿಗೆ ಕಾಯುತ್ತಾ ಶುಭಕೋರುವೆನು .
- ಪ್ರಕಾಶ ಕಡಮೆ