ತೇಲಿ ಬಿಟ್ಟ ಹೂ ಅನುಪಮ ಅವರ ಮೊದಲ ಕವನ ಸಂಕಲನ. ಈ ಪುಸ್ತಕಕ್ಕೆ ಜಿ.ಕೆ. ರವೀಂದ್ರ ಕುಮಾರ್ ಅವರು ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ. ರಮ್ಯತೆ, ಅಂತಃಕರಣ, ಪ್ರೀತಿಯ ಪಾರಮ್ಯಗಳೆಲ್ಲದರ ಹಿಂದೆ ಒಂದು ಅಸಹಾಯ ಬದುಕಿನ ತೊಳಲಾಟ ಸಂಕಲನದ ಕವನಗಳ ಹಿಂದಿದೆ. ನಾವು ಗಮನಿಸುವ ಸಂಗತಿಗಳ ಹಿಂದಿರುವ ಗಮನಿಸದ ಮುಖಗಳತ್ತ ಅವರ ಕಳಕಳಿ, ಅನೇಕ ಕವನಗಳಲ್ಲಿ ಅದನ್ನು ಹಿಡಿದಿಟ್ಟಿದ್ದಾರೆ. ಹೀಗೆ ಹಿಡಿದಿಟ್ಟ ಮಾತ್ರಕ್ಕೆ ಕವಿಚೆಯಾಗದ ಮಿತಿಯ ಸಂದರ್ಭಗಳಲ್ಲೂ ಅದನ್ನು ಅವರು ಶ್ರದ್ಧೆಯಿಂದ ಮಾಡಿದ್ದಾರೆ. ನೆಲ ಮುಗಿಲ ಸೇತುವೆ ಎಂಬ ಕವನದಲ್ಲಿ ಅನುಪಮಾ ಏಣಿಯೊಂದನ್ನು ಪ್ರತಿಮೆಯಾಗಿ ಬಳಸಿದ್ದಾರೆ. ಎರಡು ಕಾಲಿನ ಏಣಿಯು ಹತ್ತುವವನ ಭಾರ ಹೊತ್ತು ನಿಂತಲ್ಲೇ ನಿಂತು ಅವನನ್ನು ಎತ್ತರಕ್ಕೇರಿಸುತ್ತದೆ. ಅಲ್ಲಿ ಅನುಪಮಾ ನೆಲಕ್ಕೆ ಅಂಟುವ ಏಣಿ ಮತ್ತು ಅಂಟಿತೊಳ್ಳದ ಮನುಷ್ಯನತ್ತ ವಿಸಂಗತ ನೋಟ ಹರಿಸುತ್ತಾರೆ. ತರುವಾಯ ಇನ್ನೊಬ್ಬರನ್ನು ಏರಿಸುವ ಮೆಟ್ಟಿಲೇ ತನಗೆ ಅಡ್ಡಗಾಲಾಗುವ ಏಣಿಯ ಸ್ಥಿತಿಯತ್ತ ಮರುಕದಿಂದ ನೋಡುತ್ತಾರೆ. ಇನ್ನೊಂದೆಡೆ ಒಂದು ಚಪ್ಪಲಿಯು ಹರಿದು ಹೋದರೆ ಇನ್ನೊಂದು ಚಪ್ಪಲಿಯನ್ನೂ ಬಿಸುಟಲೇಬೇಕಾದುದ್ದನ್ನು ಹೇಳುವ ಮೂಲಕ ಅವಲಂಬನೆಯ ಅರ್ಥಪೂರ್ಣತೆ ಮತ್ತು ಅರ್ಥಹೀನತೆಯತ್ತ ಬೊಟ್ಟು ಮಾಡುತ್ತಾರೆ. ಈ ನೆಲೆಯಲ್ಲಿ ಹೂ ಮಾರುವ ಹುಡುಗ, ದನಗಾಹಿ ಹುಡುಗ, ಆಟಗಾರ, ನಿಸ್ವಾರ್ಥ, ಸಾಂತ್ವನ, ಜೀವಶಿಲೆ ಮುಂತಾದ ಕವನಗಳನ್ನು ನೋಡಬಹುದಾಗಿದೆ.
ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಜನನ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಬಿ ಎ ಪದವಿ ಪಡೆದಿದ್ದಾರೆ. ಪ್ರಸ್ತುತ ಆಕಾಶವಾಣಿ ವಿವಿಧಭಾರತಿ ಬೆಂಗಳೂರು 102.9 ಎಫ್ ಎಮ್ ಅಲ್ಲಿ ಸಾಂದರ್ಭಿಕ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸ್ತವ್ಯ. ತೇಲಿ ಬಿಟ್ಟ ಹೂ ಇವರ ಮೊದಲ ಕವನ ಸಂಕಲನ. ...
READ MORE