‘ಭಾರತೀಯ ಕಾವ್ಯ ಮೀಮಾಂಸೆ’ ಟಿ.ಎಸ್. ಗೋಪಾಲ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು.
ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ...
READ MORE