‘ಮನಸ್ಸು ತುಂಬೋ ಮಾತು’ ಸ್ಟ್ಯಾನಿ ಲೋಪಿಸ್ ಕಾರ್ಗಲ್ ಅವರ ರಚನೆಯ ಕವನ ಸಂಕಲನವಾಗಿದೆ. 'ಮನಸ್ಸು ತುಂಬೋ ಮಾತು' ಎಪ್ಪತ್ತೊಂದು ಛಂದೋಬದ್ಧ ಭಾಷಿಕ ರಚನೆಗಳ ಸಂಗ್ರಹ, ಕಣ್ಣಿಗೆ ಕಾಣದಿರುವ ಸರ್ವಶಕ್ತನನ್ನು ಸಂಬೋಧಿಸುವ, ಆವಾಯಿಸಿಕೊಳ್ಳುವ, ಆರಾಧಿಸುವ, ವಿನಂತಿಸುವ, ಸಮರ್ಪಿಸಿಕೊಳ್ಳುವ, ಭಾವವೇ ಪ್ರಧಾನವಾಗಿರುವ ನಿವೇದನೆಗಳು ಗಾಢ ಭಕ್ತಿಯ ಮನಸೊಂದರ ಆರ್ತತೆಗಳು, ಆವೇಗ ಉದ್ವೇಗಗಳು ಕವನದಲ್ಲಿ ವ್ಯಕ್ತವಾಗುತ್ತವೆ. ಜಾತಿ, ಮತ, ಪಂಥ, ಧರ್ಮ ಮುಂತಾದವುಗಳನ್ನು ಮೀರಿದ ಅನನ್ಯತೆಯೊಂದು ಇವನ್ನು ಓದಿದಾಗ ಅನುಭವಕ್ಕೆ ಬರುತ್ತದೆ. 'ಮನಸ್ಸು ತುಂಬೋ ಮಾತು' ಶೀರ್ಷಿಕೆ ಸಾರ್ಥಕವಾಗುತ್ತದೆ. ನಂತರದಲ್ಲಿ ಕಾಣಸಿಗುವ 'ಹಕ್ಕಿಯ ಹುಲ್ಲಿನರಮನೆ...' ಬದುಕಿನಲ್ಲಿ ವಿಶ್ವವ್ಯಾಪಕವಾದ ಸಾರ್ವಭೌಮ ಶಕ್ತಿಯೊಂದನ್ನು ಗುರುತಿಸಿ ಗೌರವಿಸುವ ಮನೋಧರ್ಮವನ್ನೇ ಮುಗ್ಧ ಮನಸ್ಸಿನಿಂದ ಚಿತ್ರಿಸುತ್ತದೆ. ಸರಳವಾಗಿ ಬದುಕಿನ ದಾರಿಯನ್ನು ತೋರಿಸಿ ಕೊಡುವ ಈ ಕವನವನ್ನು ಮತ್ತೆ ಮತ್ತೆ ಓದಬೇಕೆನಿಸಿದರೆ ಆಶ್ಚರ್ಯವಿಲ್ಲ! ಬೇಡದ ಗರ್ಭವನ್ನು ಭ್ರೂಣದಲ್ಲಿಯೇ ಹೊಸಕಿ ಹಾಕುವ ತಾಯಂದಿರ ಕ್ರೂರ ಮನಸ್ಥಿತಿಯನ್ನು ದಯನೀಯವಾಗಿ ಪ್ರಶ್ನಿಸುವ ನನ್ನನ್ನು ಕೊಲ್ಲುವೆ ಏಕಮ್ಮ?' ಕವನ ವಸ್ತುವಿನಿಂದ ಮಾತ್ರವಲ್ಲ ಅದರ ತಂತ್ರದಿಂದಲೂ ಗಮನ ಸೆಳೆಯುತ್ತದೆ.
ಸ್ಟ್ಯಾನಿ ಲೋಪಿಸ್ ಕಾರ್ಗಲ್- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ 11-01-1990ರಲ್ಲಿ ಜನಿಸಿದರು. ತಂದೆ ಜೋಸೆಫ್ ಲೋಪಿಸ್, ತಾಯಿ ಸೌರೀನ್ ಲೋಪಿಸ್. ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಗಲ್ ನಲ್ಲಿ, ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದರು. ಎಂ.ಎ ಹಾಗೂ ಬಿಇಡಿ ಪದವೀಧರರು. ಸಾಗರದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಹಲವು ಕಥೆ,ಕವನ, ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳು ಭದ್ರಾವತಿ ಆಕಾಶವಾಣಿಯಿಂದ ಪ್ರಸಾರವಾಗಿದೆ.'ಮನದ ಕೂಗು' ಕವನ ಸಂಕಲನ , 'ದುಡುಕಿದ ಜೀವ' ಕಥಾಸಂಕಲನ. 'ಹಾಡು-ಪಾಡು' ಸಾಮಾಜಿಕ ಭಾವಗೀತೆಗಳ ಧ್ವನಿಸುರುಳಿಯೂ ಬಿಡುಗಡೆಯಾಗಿದೆ. ' ...
READ MORE