'ಒಂದು ಆದಿಮ ಪ್ರೇಮ' ನಂದಿನಿ ಹೆದ್ದುರ್ಗ ಅವರ ಕವನಸಂಕಲನವಾಗಿದೆ. ಕೃತಿಯಲ್ಲಿನ ಸಾರವನ್ನು ಕವಯಿತ್ರಿ ಹೀಗೆ ಕಟ್ಟಿಕೊಟ್ಟಿದ್ದಾರೆ; ಮಣ್ಣು ಉಸಿರಾಡುತ್ತಿದೆ. ಲೋಕಕ್ಕೆ ಕೇಳುವುದಿಲ್ಲ. ಬಿಸಿಲು ಉರಿಯುತ್ತಿದೆ. ಸದ್ದಿನ ಹಂಗಿಲ್ಲ. ಮರಗಳು ಮಳೆ ಬೆಳೆಯ ಕುರಿತು ಮಾತಾಡುತ್ತಿವೆ. ಅವುಗಳ ಭಾಷೆ ಶಬ್ದವಾಗುವುದಿಲ್ಲ. ಅಂಗಳದಲ್ಲಿ ಅರಳಿದ ಹೂಗಳು ಇಂದಿನ ಭಂಗ ಮುಗಿಯಿತೆಂದು ಒಂದೇ ದಿನದ ಆಯಸ್ಸೆಂದೂ ನಿಟ್ಟುಸುರಿಟ್ಟಿವೆ. ಇಲ್ಲಿ ಕೂತಿರುವ ನನಗೇ ಅದು ಕೇಳಿಲ್ಲ. ಊರ ಮಂದಿಗೆ ಉಂಡು ಒಂದಿಷ್ಟು ಹೊತ್ತು ಕಣ್ಣು ಹಚ್ಚುವ ಆಸೆ. ನಿದ್ದೆಗೂ ಸದ್ದಿಗೂ ಎಂತದಾ ನೆಂಟಸ್ತಿಕೆ? ಹಳದಿಕೊಕ್ಕಿನ ಬೆಡಗಿಯು ಗುಲಾಬಿ ಪಾದದ ಒಡೆಯನೂ ರೆಕ್ಕೆಯನ್ನು ಹಪ್ಪೆ ಮಾಡಿ ನೆಲದ ಕಾವಿಗೆ ಒಡಲು ತಾಕಿಸಿ ಮುದ ಪಡೆಯುತ್ತಿವೆ. ಅದೋ.. ಆ ಮಾಡಿನ ಕೊನೆಯಲ್ಲಿ ಕುಂತು ಅತ್ತಿಂದಿತ್ತ ಹಾರುತ್ತಿರುವ ಅವಳು ಬೆದೆಗೆ ಬಂದಿರುವುದು ತಿಳಿದಿದ್ದರೂ ಸೂರ್ಯ ನಡುನೆತ್ತಿಯಲ್ಲಿದ್ದಾಗ ಒಲಿಸಿಕೊಳ್ಳುವಾಟದಲ್ಲಿ ಇವನಿಗೆ ಖುಷಿಯಿಲ್ಲ. ಅವಳಿಗೂ ಮನಸ್ಸಿಲ್ಲ.ಲೋಕಕ್ಕೆ ಪ್ರಿಯವಾಗಿದೆ ಈ ಮೌನ. ಹೆಸರೇ... ನಾನು ಮತ್ತು ನೀನು ಈ ಜಗದ ಮುಖ್ಯ ಪ್ರಾಣ ದೇವರು.. ಎಂದಿದ್ದಾರೆ.
ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ. ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ. ...
READ MORE