ವಿಶ್ವನಾಥ ಬಸಪ್ಪ ಅರಬಿಯವರು ನಾಲ್ಕನೇ ಕೃತಿ 'ಅಬಾಬಿಗಳ ಲೋಕದಲ್ಲಿ ವಿಶ್ವ'. ಅಬಾಬಿ ಸಾಹಿತ್ಯ ಪ್ರಕಾರವು ವಿಶೇಷ ಮತ್ತು ಸಮಾಜದ ಜನರನ್ನು ತಲುಪುವ ಸರಳ ಮಾಧ್ಯಮವಾಗಿದೆ. ಈ ನೂತನ ಸಾಹಿತ್ಯದ ಪ್ರಕಾರದಲ್ಲಿ ವಿಶ್ವನಾಥ ಅರಬಿಯವರು ಕೃಷಿ ಮಾಡಿದ್ದು, ಇದು ಕನ್ನಡ ಸಾಹಿತ್ಯ ಲೋಕದಲ್ಲಿಯೇ ಸ್ವರಚಿತ ಎರಡನೇ ಕೃತಿಯಾಗಿದೆ. ಇಲ್ಲಿನ ಅಬಾಬಿಗಳು ನೊಂದವರ ನೋವನ್ನು ಮತ್ತು ಉಳ್ಳವರ ದರ್ಪವನ್ನು ಪರಿಚಯಿಸುತ್ತವೆ. ಅಬಾಬಿ ಸಾಹಿತ್ಯದ ಮೂಲ ಕವಿಗಳಾದ ಷೇಕ್ ಕರೀಮುಲ್ಲಾರವರ ಮನದಾಸೆಯಂತೆಯೇ ಇಲ್ಲಿನ ಅಬಾಬಿಗಳು ರಚನೆಯಾಗಿವೆ. ಈ ಕೃತಿಯೊಳಗಿನ ಅಬಾಬಿಗಳು ಸಮಾಜದಲ್ಲಿ ಉಳ್ಳವರ ದರ್ಪ ಮಣ್ಣಾಗಿ, ಸ್ವಾರ್ಥ ಸತ್ತು ಹೋಗಿ ನೊಂದವರಿಗೆ ಸಾಂತ್ವನ ತಿಳಿಸುವುದರೊಂದಿಗೆ ನವ್ಯತೆಯೆಡೆಗೆ ಕರೆದೊಯ್ಯುತ್ತವೆ.
ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...
READ MOREಅಬಾಬಿಗಳ ವಿಶ್ವ
ಅಬಾಬಿ ಎಂಬುವುದು ಐದು ಸಾಲಿನ ಆಧುನಿಕ ವಚನ ಪ್ರಕಾರ. ಇದು 2020 ನೇ ಇಸವಿಯಲ್ಲಿ ಕವಿ ಷೇಕ್ ಕರೀಮುಲ್ಲಾರವರಿಂದ ಮೊದಲು ತೆಲುಗು ಭಾಷೆಯಲ್ಲಿ ಜನ್ಮ ತಳೆಯಿತು. ಹನ್ನೆರಡನೇ ಶತಮಾನದ ಕನ್ನಡದ ವಚನಗಳಂತೆಯೇ ಅಬಾಬಿಗಳು ಕೂಡಾ ಸರಳವಾಗಿ, ಸರ್ವರಿಗೂ ಅರ್ಥವಾಗುವಂತೆ ಸಮ ಸಮಾಜದ ಸಾಕಾರ, ವ್ಯಕ್ತಿತ್ವದ ವಿಕಸನವನ್ನು ಪ್ರತಿಪಾದಿಸುತ್ತವೆ. ಕನ್ನಡದಲ್ಲಿ ಅಬಾಬಿ ಸಾಹಿತ್ಯ ಪರ್ವ ೨೦೨೧ನೇ ಇಸವಿಯಲ್ಲಿ ಆರಂಭವಾಯಿತು. ಅಂದಿನಿಂದ ಇಲ್ಲಿಯ ತನಕ ಕನ್ನಡದ ಅಬಾಬಿ ಸಾಹಿತ್ಯ ಕ್ಷೇತ್ರದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ನಾನು ಆಸಕ್ತಿಯಿಂದ ಗಮನಿಸುತ್ತಾ ಬಂದಿದ್ದು, ಕನ್ನಡದಲ್ಲಿ ಈ ಅಬಾಬಿ ಕಾವ್ಯ ಪ್ರಕಾರ ತುಂಬಾ ಸೊಂಪಾಗಿ ಬೆಳೆಯುವ ಲಕ್ಷಣಗಳನ್ನು ನಾನು ಗುರುತಿಸಿದ್ದೇನೆ. ಇದಕ್ಕೆ ಕವಿ ಶ್ರೀ ವಿಶ್ವನಾಥ ಅರಬಿಯವರ ಕೊಡುಗೆಯೂ ಕೂಡಾ ಗಣನೀಯವಾದದ್ದು.
'ಅಬಾಬಿಗಳ ಲೋಕದಲ್ಲಿ ವಿಶ್ವ'- ವಿಶ್ವನಾಥ ಅರಬಿ ಅವರ ಮೊದಲ ಅಬಾಬಿ ಸಂಕಲನ. ತಮ್ಮ ಮೊದಲ ಸಂಕಲನದಲ್ಲೇ ಅರ್ಥಪೂರ್ಣವಾದ ಅಬಾಬಿಗಳನ್ನು ಓದುಗರಿಗೆ ನೀಡುವ ಮೂಲಕ ಅಬಾಬಿ ಪ್ರೀಯರಿಗೆ ಒಂದೊಳ್ಳೆಯ ಕಾಣಿಕೆ ನೀಡಿದ್ದಾರೆ. ಬಹಳ ಕಡಿಮೆ ಪದಗಳಲ್ಲಿ ಐದೇ ಸಾಲುಗಳಲ್ಲಿ ಓದುಗರ ಎದೆಗೆ ನಾಟುವಂತೆ ಯಾವುದೇ ವಿಷಯವನ್ನು ಅಬಾಬಿಯ ರೂಪದಲ್ಲಿ ಚಿತ್ರಿಸುವುದು ಒಂದು ವಿಶಿಷ್ಟವಾದ ಕಲೆ. ಇದಕ್ಕೆ ಪಾಂಡಿತ್ಯಕ್ಕಿಂತಲೂ ಹೃದಯವಂತಿಕೆ ಅತ್ಯಗತ್ಯ. ಈ ಕೃತಿಯನ್ನು ಪೂರ್ತಿಯಾಗಿ ಓದಿದ ನಂತರ ವಿಶ್ವನಾಥ ಅವರಿಗೆ ಅಬಾಬಿಗಳ ಕಲೆ ಚೆನ್ನಾಗಿ ಸಿದ್ಧಿಸಿದೆಯೆಂದು ನನಗೆ ಮನವರಿಕೆಯಾಗಿದೆ.
ಈ ಸಂಕಲನದಲ್ಲಿ ಒಟ್ಟು ೨೭೯ ಅಬಾಬಿಗಳಿವೆ. ಎಲ್ಲಾ ಅಬಾಬಿಗಳು ನಿಜವಾಗಿಯೂ ಅರ್ಥಗಭಿ೯ತವಾಗಿವೆ. ಆತ್ಮಾವಲೋಕನ, ಆಶಾವಾದ, ಭ್ರಷ್ಟ ವ್ಯವಸ್ಥೆಯ ವಿರುದ್ಧದ ಅಸಮಾಧಾನ, ಆಕ್ರೋಶ, ದೇಶಪ್ರೇಮ ಇತ್ಯಾದಿ ವಿಷಯಗಳನ್ನು ಇಲ್ಲಿನ ಅಬಾಬಿಗಳು ಒಳಗೊಂಡಿವೆ. ಒಟ್ಟಾರೆ ಈ ಸಂಕಲನ ಯಾರಾದರೂ ಹೊಸದಾಗಿ ಅಬಾಬಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮುಂಚೆ ಅಧ್ಯಯನಕ್ಕೆ ಯೋಗ್ಯವಾದುದ್ದಾಗಿದೆ.
ಯಾವುದೇ ವಿಷಯದ ಗೆಲುವಿನಲ್ಲಿ ಸಹನೆಯ ಪಾತ್ರ ತುಂಬಾ ದೊಡ್ಡದು. ಸಾಮಾನ್ಯವಾಗಿ ಒಂದೆರೆಡು ಪ್ರಯತ್ನಗಳಲ್ಲಿ ಸೋತ ಕೂಡಲೇ ಕೈಚೆಲ್ಲಿ ಬಿಡುವುದನ್ನು ಅನೇಕರ ವಿಷಯದಲ್ಲಿ ಕಾಣಬಹುದು. ಆದರೆ ಸಹನೆಯಿಂದ ಶ್ರಮ ವಹಿಸಿ ಮರಳಿ ಮರಳಿ ಯತ್ನ ಮಾಡಿದರೆ ಏನಾದರೂ ಸಾಧಿಸಬಹುದು. ಕವಿಗಳು ಇದೇ ವಿಷಯವನ್ನು ಅಬಾಬಿಯಲ್ಲಿ ಹೀಗೆ ಚಿತ್ರಿಸಿದ್ದಾರೆ.
"ಸಹನೆಯೊಂದಿಲ್ಲದ ಕಾರಣ
ಸೋಲುವರು ಈ ಜನ
ತಾಳ್ಮೆಯಿಂದಿರು
ವಿಶ್ವ
ವಿಜಯವಿದು ನಿನ್ನದೆ"
ಇಂದು ಭಕ್ತಿ, ಆಧ್ಯಾತ್ಮ ಗಳು ವ್ಯಾಪಾರದ ಸರಕುಗಳಾಗಿವೆ. ಈಗ ಒಳ್ಳೆಯ ಗುರು ಸಿಗುವುದು ಕಷ್ಟವಾಗಿದೆ. ಇದರಿಂದ ಗುರಿ ಮುಟ್ಟುವುದೂ ಕಷ್ಟವೇ ಆಗಿದೆ. ಆದ್ದರಿಂದ, "ಅರಿವೇ ಗುರು"ವೆಂಬ ಮಾತು ಆಧ್ಯಾತ್ಮ ಜಿಜ್ಞಾಸೆಯುಳ್ಳವರಿಗೆ ದಾರಿದೀಪ ಎನ್ನಬಹುದು. ಇದೇ ವಿಷಯಕ್ಕೆ ಸಂಬಂಧಿಸಿದ ಈ ಅಬಾಬಿಯನ್ನು ಓದಿ ನೋಡಿ, ಎಷ್ಟು ಚೆನ್ನಾಗಿದೆ.
"ಪರಿಶುದ್ಧ ಮನದೊಳಗೆ
ಶುದ್ಧಾತ್ಮದ ಪರಿಧಿಯೊಳಗೆ
ವಾಸವಾಗಿಹನು ಜಗದೊಡೆಯ
ವಿಶ್ವ
ಗುರುತಿಸುವವರಾರೋ?"
ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡದ ಸಮಕಾಲೀನ ಕವಿ ಕವಯಿತ್ರಿಯರನ್ನು ಪ್ರೋತ್ಸಾಹಿಸಬೇಕೆಂದು ಎಲ್ಲಾ ಕನ್ನಡದ ಮನಸ್ಸುಗಳನ್ನು ಕೇಳಿಕೊಳ್ಳುತ್ತೇನೆ. ಕವಿ ವಿಶ್ವನಾಥ ಅರಬ್ಬಿ ಅವರಿಗೆ ಶುಭವಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ.
ಇಂತಿ ನಿಮ್ಮವ
ಧನಪಾಲ ನಾಗರಾಜಪ್ಪ