ನೀಲ ಆಕಾಶ

Author : ನಾ. ಮೊಗಸಾಲೆ

Pages 960

₹ 750.00




Year of Publication: 2020
Published by: ಸ್ನೇಹ ಎಂಟರ್ ಪ್ರೈಸೆಸ್ 
Address: ನಂ. 138, 2ನೇ ಮಹಡಿ, 7ನೇ ‘c' ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು - 560104
Phone: 9900701666

Synopsys

ಹಿರಿಯ ಲೇಖಕ ನಾ. ಮೊಗಸಾಲೆ ಅವರ ಸಮಗ್ರ ಕವನಗಳ ಸಂಕಲನ ‘ನೀಲ ಆಕಾಶ’. ಕೃತಿಗೆ ಬೆನ್ನುಡಿ ಬರೆದಿರುವ ಟಿ. ಯಲ್ಲಪ್ಪ ಅವರು “ಮೊಗಸಾಲೆಯವರ ಕಾವ್ಯ ಶೋಧಿಸ ಹೊರಟ ಮತ್ತೊಂದು ಪ್ರಧಾನ ತಾತ್ವಿಕತೆ ಅಥವಾ ಚಿಂತನೆ ಎಂದರೆ ಅದು ದೈವದ ಹುಡುಕಾಟ. ಅವರಿಗೆ ಕಾವ್ಯದ ಹುಡುಕಾಟ, ದೈವದ ಹುಡುಕಾಟ ಎರಡೂ ಬೇರೆ ಬೇರೆ ಅಲ್ಲ. ಆದರೆ, ಅವರ ದೈವದ ಹುಡುಕಾಟದ ಮೂಲ ಸಾಂಸ್ಥಿಕ ಧರ್ಮದ ನೆಲೆಯಿಂದ ಹೊರಡುವ ಆಸ್ತಿಕತೆ ಅಲ್ಲ ಎಂಬುದನ್ನು ಮರೆಯಬಾರದು. ಹಾಗೆಂದು ಅವರದು ಸಾಂಸ್ಥಿಕ ನೆಲೆಯ ದೈವವನ್ನು ಸಂಪೂರ್ಣವಾಗಿ ಧಿಕ್ಕರಿಸುವ ನಾಸ್ತಿಕತೆಯೂ ಅಲ್ಲ. ದೈವ ಮತ್ತು ಕಾವ್ಯ ಎರಡನ್ನೂ ಅವರು ಮಾನವೀಯ ನೆಲೆಯಲ್ಲಿ ಶೋಧಿಸಿ ಮಾನವೀಯಗೊಳಿಸುವ ಅಥವಾ ಮಾನವೀಕರಿಸುವ ಉದಾತ್ತ ನೆಲೆ” ಎಂದು ಪ್ರಶಂಸಿಸಿದ್ದಾರೆ.

ಮೊಗಸಾಲೆ ಅವರ ’ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಇನ್ನಷ್ಟು ಹೊಸ ಕವಿತೆಗಳು’ ಈ ಎಲ್ಲ ಕವನ ಸಂಕಲನಗಳ ಕವಿತೆಗಳನ್ನು ಇಲ್ಲಿ ದಾಖಲಿಸಲಾಗಿದೆ.

 

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Reviews

ಡಾ.ನಾ ಮೊಗಸಾಲೆ ಅವರ ಸಮಗ್ರ ಕಾವ್ಯ ‘ನೀಲ ಆಕಾಶ’

ಲೋಕದ ವಾಸ್ತವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನು ಶೋಧಿಸುತ್ತವೆ, ಅನುಕ್ಷಣದ ಸಾತತ್ಯವನ್ನು ಒಳಗು ಮಾಡಿಕೊಂಡು ತಾತ್ವಿಕ ಸೌಂದರ್ಯಾನುಸಂಧಾನ ಮಾಡುತ್ತವೆ. ಪರ೦ಪರೆಯೊಂದಿಗೆ ಕಸಿ ಮಾಡಿಕೊಂಡು ಹೊಸ ಬೇರುಗಳನ್ನು ಸೃಷ್ಟಿಸುತ್ತವೆ. ಭೌತಿಕ ಜಗತ್ತಿನ ಪ್ರತಿಯೊಂದು ಗೋಚರ ವಸ್ತುಗಳು ಕಾವ್ಯದ ನೆಲೆಯನ್ನು ಪಡೆಯುತ್ತವೆ. ಇದರೊಂದಿಗೆ ಮನುಷ್ಯರ ಲೋಕವೂ ಅಷ್ಟೇ ತದಾತ್ಮತ ಪಡೆದುಕೊಳ್ಳುತ್ತದೆ. ಬದಲಾಗುವ ಬದುಕಿನ ಪರಿಣಾಮಗಳು ಇವರ ಕಾವ್ಯವನ್ನು ಕಂಗೆಡಿಸುವದಿಲ್ಲ. ಸಿನಿಕತೆಯನ್ನು ಹುಟ್ಟಿಸುವದಿಲ್ಲ. ಒಂದು ತನ್ಮಯತೆಯ ಸಂವಾದವನ್ನು ಹುಟ್ಟುಹಾಕುತ್ತವೆ. ಬದುಕಿನ ಒಳತಿರುಳನ್ನು ಮನಗಾಣಿಸುತ್ತವೆ. ಈ ನಡುವೆ ಆಕಸ್ಮಿಕವಾಗಿ ಸೀತಾಪುರದ ಲೂಸಿ ಬಾಯಿ ಮೊನ್ನೆ ಇದಿರು ಸಿಕ್ಕಿ ಹೇಳಿದಳು: 'ಕುಪ್ಪಣ್ಣ ಸತ್ತರಂತಲ್ಲ: ಸತ್ತರೇನಂತೆ ಈಗ ನೋಡಿದರೆ ನೀವಿದ್ದೀರಲ್ಲ ಅವರಾಗಿ! ಇರುವ ಲೋಕವೇ ಅವರಿಗೆ ಸತ್ಯವಾದುದು. ಯಾವುದು ಅನುಭವಕ್ಕೆ ದಕ್ಕುತ್ತದೆ, ನಿಲ್ಲುತ್ತದೆ ಅದೇ ಮುಖ್ಯ ಅದು ಚರಿತ್ರೆ, ಪುರಾಣ, ದೇವರು, ನಂಬಿಕೆ, ದೈವ, ಸಂಬಂಧ ಯಾವುದೇ ಆಗಲಿ ಜೀವದೊಂದಿಗೆ ಮಿಡಿಯಬೇಕು. ನಿಜ ಎನ್ನುವುದು ಇರುವುದೇ ಇಲ್ಲ ಇಲ್ಲಿ ಧರ್ಮ ದೇವರು ಕ್ಷಾಮ ಡಾಮರು ಮುಷ್ಕರ ಮುಕ್ತ ಕಾಮದಲ್ಲಿ ಎಲ್ಲವೂ ಸೇರಿ ಹೂ, ಹಣ್ಣು, ಕಾಯಿ, ಎಲೆ, ಬೆಟ್ಟ, ಬಂಡೆ, ನೀರು, ಆಕಾಶ, ಮಳೆ, ಬೆಳೆ, ಅನ್ನ, ಆಹಾರ, ಪಾನೀಯ, ಹೊಲಗದ್ದೆ, ತೋಟ ಎಂದು ಬೇರೆ ಬೇರೆ ಬಗೆಯಲ್ಲಿ ಕವಿತೆಗಳು ರೂಪ ತಳೆಯುತ್ತವೆ. ರೂಪ ತಾಳಿ ಕೂಡ ತಮ್ಮ ಮೂಲ ನೆಲೆಯನ್ನು ಮರೆಯದ ಉಪಮಾನ, ಉಪಮೇಯವನ್ನು ಮೀರಿ ತಾನೇ ಒಂದು ಕಾವ್ಯವಾಗುವ ವಿಸ್ಮಯ ಈ ಸಂಕಲನದಲ್ಲಿದೆ. ಮೊಗಸಾಲೆಯವರ ಪ್ರತಿಭೆ ಸದ್ದಿಲ್ಲದೆ ಪೌಢವಾಗುವ, ಪರಿಣತವಾಗುವ, ಊರ್ಧ್ವಗಾಮಿಯಾಗುವ, ಕನಸನ್ನು ನನಸಾಗಿಸಿಕೊಳ್ಳುವ ಮಾಂತ್ರಿಕತೆಯನ್ನು ಪಡೆಯುವ ಅದ್ಭುತವನ್ನು ಇವರ ಕಾವ್ಯದಲ್ಲಿ ಕಾಣುತ್ತೇವೆ.

 ಕವಿ ಪರಿಚಿತವಾದದನ್ನು ಅಪರಿತವಾದ ಕೋನದಲ್ಲಿ ಕಾಣಿಸಿಕೊಡುವ, ಓದುಗರ ಅರಿವನ್ನು ಹೊಸತು ಮಾಡುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಅನುಭವನಿಷ್ಠತೆಯ ಕೇವಲ ಭಾಷೆಯ ತಾನಃ ಉರುವಲಾಗಿ, ತಾನೇ ಬೆಂಕಿಯಾಗಿ, ತಾನೇ ಸುಟ್ಟುಕೊಂಡು ತನಗಾಗಿ ನುಡಿದ ಮಾತು ಮಣ್ಯವಿದ್ದವರಿಗೆ ಬೆಳಕು ತೋರುವ ಮಾತಾಗುತ್ತದೆ. ಇಂತಹ ಅನೇಕ ಕಾವ್ಯ ಜೀವಗಳು ಈ ಸಂಕಲನದಲ್ಲಿವೆ. ಲೌಕಿಕ ಅಲೌಕಿಕದ ನಡುವಿನ ಬದುಕಿನ ವಿನ್ಯಾಸವನ್ನು ಇವರ ಕವಿತೆಗಳು ಹುಡುಕುತ್ತಾ ಹೋಗುತ್ತವೆ. ಲೌಕಿಕವಾಗಿ ಕಾಣುವ ದೈನಂದಿನ ಬದುಕಿನ ಚಟುವಟಿಕೆಗಳು ಕವಿಗೆ ಅರಿವಿನ ಅಂಗಳವನ್ನು ಒದಗಿಸಿವೆ, ಅಲ್ಲಿ ಕಾಣುವ ಜೀವನ ವಿನ್ಯಾಸಗಳು ಅಲೌಕಿಕದ ಚಿಂತನೆಯನ್ನು ಹುಟ್ಟಿಸುತ್ತವೆ.

ಇಲ್ಲಿನ ಹಲವು ಪದ್ಯಗಳು ಬಿಡಿ ಬಿಡಿ ರಚನೆಗಳಂತೆ ಕಂಡರೂ ಅವುಗಳಲ್ಲಿ ಒಳಸಂಬಂಧದ ಸೆಲೆಯಾಗಿ ತಾತ್ವಿಕ ಚಿಂತನೆ ವಿಸ್ತರಿಸಿಕೊಂಡಿದೆ. ಒಂದು ಪದ್ಯದಲ್ಲಿ ತಾತ್ವಿಕ ಚಿಂತನೆಯೂ ಬೀಜ ರೂಪ ಪಡೆದರೆ ಇನ್ನೊಂದು ಪದ್ಯದಲ್ಲಿ ಭೂಮಿಕೆಯ ಧಾತು ಕಾಣುತ್ತದೆ. ಮತ್ತೊಂದರಲ್ಲಿ ಬೀಜದ ಅಂಕುರ. ಹೀಗೆ ಅದೊಂದು ಪರಿಯಲ್ಲಿ ಜಿಜ್ಞಾಸೆಯ ವೃಕ್ಷ ಮೈತಳೆದಂತೆ ಇವರ ಕವಿತೆಗಳ ಸೃಷ್ಟಿ  ಇದೆ.

ಇವರ ಕಾವ್ಯದಲ್ಲಿ ಶಬ್ದಗಳು ದಾರ್ಶನಿಕ ಸ್ಥಿತಿಯನ್ನು ಪಡೆಯುತ್ತವೆ. ಪ್ರಕೃತಿಯ ಅನೇಕ ರೂಪಕಗಳು ಕವಿತೆಯಲ್ಲಿ ಬರುತ್ತವೆ. ಅವೆಲ್ಲವೂ ಬದುಕಿನ ಲಯದೊಂದಿಗೆ ಸೇರಿಕೊಳ್ಳುತ್ತವೆ. ಮನುಷ್ಯನ ಕೇಡುಗಳನ್ನು ಶೋಧಿಸುತ್ತಲೇ ಮಾನವೀಯಗೊಳಿಸುವ ತುಡಿತ ಕಾವ್ಯದಲ್ಲಿದೆ. ಆಕಾಶ ಮತ್ತು ನೆಲದ ನಡುವಿನ ನಂಟು, ದಂದುಗ ಇವರ ಕಾವ್ಯದ ಬನಿಯಾಗಿದೆ. ನೀಲ ಆಕಾಶ ವಿಸ್ತಾರವಾದ, ವಿಹಂಗಮವಾದ, ನಿರೋಹದ ಕಣೋಟಕ್ಕೆ ನಿಲುಕದ ಮನಸ್ಸಿನ ಹಲವು ಸ್ಮರಗಳ ಆನ್ವೇಷಣೆಯ ರೂಪಕವಾಗಿ ಬರುತ್ತದೆ.

(ಕೃಪೆ : ಪುಸ್ತಕ ಲೋಕ, ಹಳೆಮನೆ ರಾಜಶೇಖರ)

Related Books