ವಿಜಯ್ ಸ್ವಾರ್ಥಿ ಮತ್ತೇರ್ ಅವರ ಕವಿತೆಗಳ ಸಂಕಲನ ಚಪ್ಪಲಿಗಂಟಿದ ಮುಳ್ಳು. ಚುಚ್ಚಿನೋವೀವ ಮುಳ್ಳನ್ನೆ ಹೂವಾಗರಳಿಸುವ, ದುಃಖದ ಹನಿಗಳನ್ನೆ ಕಲಾತ್ಮಕ ಕಾಣ್ಕೆಯಾಗಿ ಹೊಳೆಸುವ ರಸವಿದ್ಯೆ ಚಾರ್ಲಿ ಚಾಪ್ಲಿನ್‌ಗೆ, ಪ್ಯಾಬ್ಲೊ ನೆರುಡಾಗೆ ಒಲಿದಿದ್ದಂತೆ ಇವರಿಗು ಮೆಲ್ಲಗೆ ಒಲಿವ ಸೂಚನೆ ಕಾಣ್ಸತ್ತೆ. ಈ ಕವಿತೆಗಳ ಮಾರ್ಮಿಕ ಭಾಷೆ ಫಳಫಳಿಸೊ ಭಾವಮಿಂಚು ರೂಪಕ ಸಂಕೇತ ಶಬ್ದ ಸಾಲುಗಳು ಓದುಗರ ಮನಸ್ಸಿಗೆ ಚೂಪಾಗಿ ನಾಟುತ್ತವೆ. ಸೋಲಿನ ಭಯವಿರಲಿ ನಿನಗೆ ಆದರೆ ಎಂದೆಂದಿಗೂ ಎದೆಗುಂದಬೇಡ ಎಂದು ಆತ್ಮವಿಶ್ವಾಸದ ಹದ ರೂಢಿಸಿಕೊಳ್ವ ಕೆಚ್ಚು ಮತ್ತು ಎಚ್ಚರವಿದೆ ಈ ಹೊಸಕವಿಯಲ್ಲಿ. ನಾನಿನ್ನೂ ಕವಿಯಾಗಿಲ್ಲ ಅನ್ನುವ ವಿಜಯ್ ಸ್ವಾರ್ಥಿ ಈ ವಯಸ್ಸಿಗಾಗಲೆ ಕಂಡಿರುವ ಮನುಷ್ಯ ರೂಪಗಳು, ನಮ್ಮ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಪ್ರಕೃತಿಯಂತೆ ಕವಿಯ ಮನಸು ವಿಪುಲರೂಪ ಧಾರಿಣಿ ಎಂಬಸಾಲನ್ನ ಪರೋಕ್ಷ ನೆನಪಿಸುವಂತಿವೆ ಎಂದು ಬಿದರಹಳ್ಳಿ ನರಸಿಂಹಮೂರ್ತಿ ಮುನ್ನುಡಿಯ ಮಾತುಗಳಲ್ಲಿ ಬರೆದಿದ್ದಾರೆ.
ಸುನಂದಮ್ಮ ಮತ್ತೇರ್, ಹಾಲೇಶಪ್ಪ ಮತ್ತೇರ್ ಇವರ ದ್ವಿತೀಯ ಪುತ್ರನಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮುಕ್ತೇನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಇವರು ಕತೆ, ಕವಿತೆ, ಕಾದಂಬರಿ ಹಾಗೂ ಸಾಹಿತ್ಯದ ಇತರ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗಳಾದ ಬಿದರಹಳ್ಳಿ ನರಸಿಂಹಮೂರ್ತಿಯವರ ಮಾರ್ಗದರ್ಶನದಲ್ಲಿ ಅನಿಮಿಷ ಪ್ರಕಾಶನದ ಮೂಲಕ ತಮ್ಮ ಚೊಚ್ಚಲ ಕವನ ಸಂಕಲನ "ಚಪ್ಪಲಿಗಂಟಿದ ಮುಳ್ಳು" ಕೃತಿಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ...
READ MORE