'ಮಾನವೀಯತೆಯ ಮಾತು' ಪಾಲಾಕ್ಷಪ್ಪ ಎಸ್.ಎನ್ ಅವರ ಕೃತಿ. ಹದವಾದ ಭೂಮಿಗೆ ಬೀಳುವ ಬೀಜಗಳಂತೆ ಅವರ ಕವಿತೆಗಳು ಯಾವ ಪ್ರಯಾಸವೂ ಇಲ್ಲದೆ ಅಂತರಾಳಕ್ಕೆ ಇಳಿಯುತ್ತ ಹೋಗುತ್ತವೆ. ಮೊದಲ ಮಳೆ ಹನಿಗೆ ಭೂಮಿ ಅರಳುವಂತೆ ಇಲ್ಲಿನ ಕವಿತೆಗಳು ಮನವನ್ನು ಅರಳಿಸುತ್ತವೆ. ತಮ್ಮ ಶಿಕ್ಷಕ ವೃತ್ತಿಯನ್ನು ಅವರು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇಲ್ಲಿನ ಕೆಲವು ಕವಿತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಮಕ್ಕಳಿಗೆ ತಿಳಿ ಹೇಳಲಿಚ್ಛಿಸುವ ವೈಜ್ಞಾನಿಕ ಸಂಗತಿಗಳನ್ನೂ ಅವರು ಕವಿತೆಯ ಶೀಶೆಯೊಳಗೆ ತುಂಬಿ ಆಕರ್ಷಕಗೊಳಿಸಿ, ಮುಂದಿಡುತ್ತಾರೆ. ಅಷ್ಟೆ ಅಲ್ಲ, ವೈಯಕ್ತಿಕ ಬದುಕಿನಲ್ಲಿಯೂ ಅವರು ಎಷ್ಟು ಸೂಕ್ಷ್ಮ ಜೀವಿ ಎನ್ನುವುದನ್ನೂ ಅವರ ಕವಿತೆಗಳು ಅರಿವಿಗೆ ತರುತ್ತವೆ. ಇದಕ್ಕೆ ಅಮ್ಮ, ಅಪ್ಪ, ಮಗನೆಂಬ ಮಿತ್ರ, ಮಗಳು ಕವಿತೆಗಳು ನಿದರ್ಶನ.
ಪಾಲಾಕ್ಷಪ್ಪ ಎಸ್.ಎನ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿಯವರು . ಪ್ರಸ್ತುತ್ತ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ವಾಸ. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕ. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದ ಬಿ.ಎ. ಮತ್ತು ಎಂ.ಎ. ಪದವಿ (ಇತಿಹಾಸ), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇಡಿ. ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಿಂದ ಎಂ.ಎ. (ಕನ್ನಡ) ಮತ್ತು ಎಂ.ಇಡಿ. ಪದವಿ ಪಡೆದಿದ್ದಾರೆ. ಓದುವುದು, ಬರೆಯುವುದು, ಆಶುಭಾಷಣ, ನಾಟಕಾಭಿನಯ, ಪ್ರವಾಸ ಮುಂತಾದವುಗಳು ಹವ್ಯಾಸವಾಗಿದೆ. ಪ್ರಶಸ್ತಿ- ಕಾವ್ಯಶ್ರೀ ಪುರಸ್ಕಾರ (2017), ಉತ್ತಮ ಪ್ರೌಢಶಾಲಾ ಶಿಕ್ಷಕ ಪುರಸ್ಕಾರ (2019) ಕೃತಿಗಳು: ಮಾನವೀಯತೆಯ ಮಾತು ...
READ MORE