ಕವಿ ಸಮುದ್ಯತಾ ವೆಂಕಟರಾಮು ಅವರ ಕವನ ಸಂಕಲನ ಭಾನುಮತಿಯ ಮುತ್ತುಗಳು. ಇಲ್ಲಿ ತೊಂಬತ್ತಕ್ಕೂ ಹೆಚ್ಚು ಕವಿತೆಗಳಿವೆ. ರಾಧೆ, ಗೌರಿ, ಭಾನುಮತಿ, ದಾಕ್ಷಾಯಣಿ, ಯಶೋಧರೆ, ಗೋಪಿಕೆಯರ ಮೂಲಕ ಹೊಸತನ್ನು ಹೇಳುವ, ಹೊಳೆಯಿಸುವ ಪ್ರಯತ್ನವನ್ನು ಸಮುದ್ಯತಾ ಅವರು ಮಾಡಿದ್ದಾರೆ. ಮೊದಲ ಸಂಕಲನದ ಮುಗ್ಧತೆ ಇಲ್ಲಿದೆ. ಜೊತೆಗೆ ಜೀವನಾನುಭವ ಮತ್ತು ಓದಿನಿಂದ ದೊರೆತ ಪ್ರಬುದ್ಧತೆ ಈ ಕೃತಿಯಲ್ಲಿ ಕಾಣಸಿಗುವುದು ವಿಶೇಷ.
ಟಿ.ಪಿ. ಅಶೋಕ ಅವರು ಮುನ್ನುಡಿಯ ಮಾತುಗಳಲ್ಲಿ ‘ಇಲ್ಲಿನ ಕವಿತೆಗಳು ಉದಯೋನ್ಮುಖ ಕವಿಯೊಬ್ಬಳ ತೊದಲು ನುಡಿಗಳಲ್ಲ. ಕಾವ್ಯ-ಸಂಗೀತಗಳ ಸತತ ಅಭ್ಯಾಸ ಮತ್ತು ಪ್ರಯೋಗಗಳಿಂದ ಸಂಸ್ಕಾರ ಪಡೆದ ಹಾಗೂ ತುಂಬು ಸಂಸಾರ ನಡೆಸುತ್ತಿರುವ ಗೃಹಿಣಿಯೊಬ್ಬಳ ಗಾಢವಾದ ಜೀವನಾನುಭವಗಳಿಂದ ಮಾಗಿದ ಮನಸ್ಸಿನ ಉಕ್ತಿಗಳು. ಸಮುದ್ಯತಾ ಅವರಿಗೆ ಕಾವ್ಯವೆಂದರೇನು ಎಂಬುದು ಗೊತ್ತಿದೆ. ಹಾಗೆಯೇ ಯಾವುದು ಕಾವ್ಯವಾಗಲಾರದು ಎಂಬ ಎಚ್ಚರವೂ ಇದೆ…ಎಲ್ಲವನ್ನೂ ತೂಗಿಸಿಕೊಂಡು, ಸಮತೋಲನಗೊಳಿಸಿಕೊಂಡು ಕಾವ್ಯ ಕಟ್ಟುವುದು ಮತ್ತು ಬದುಕನ್ನು ಕಟ್ಟಿಕೊಳ್ಳುವುದು ಸಮುದ್ಯತಾ ಅವರ ಪ್ರಧಾನ ಹಂಬಲವೆಂದು ತೋರುತ್ತದೆ. ಕಾವ್ಯದಲ್ಲಿ ಭಾವ-ಭಾಷೆಗಳು, ಭಾವುಕತೆ-ಬೌದ್ಧಿಕತೆಗಳು ಜೊತೆಗೂಡಬೇಕು. ಅಭಿವ್ಯಕ್ತಿಯ ಸಫಲತೆಗೆ ಓದುಗನ ಸಹಭಾಗಿತ್ವವೂ ಬೇಕು. ಸಂಸಾರ ಮಧುರವಾಗಿರಲು ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಇದೊಂದು ಯಾಂತ್ರಿಕ ಸಮೀಕರಣವಲ್ಲ ಎಂಬುದು ಕವಿಗೆ ಚೆನ್ನಾಗಿ ಗೊತ್ತಿದೆ. ಒಟ್ಟಾಗಿ ಹೆಜ್ಜೆ ಹಾಕುವ ಅಗತ್ಯ-ಅನಿವಾರ್ಯತೆ ಮತ್ತು ಅದರ ಕಷ್ಟಗಳನ್ನು ಒಟ್ಟಿಗೇ ಗಮನಿಸುವ ವ್ಯವಧಾನ ಅವರಿಗಿದೆ. ಹೀಗಾಗಿ ಸಮುದ್ಯತಾ ಅವರ ಕವಿತೆಗಳು ಕೇವಲ ಭಾವದಲ್ಲಿ ಸ್ರವಿಸುವುದಿಲ್ಲ. ಅವುಗಳಲ್ಲಿ ಚಿಂತನೆಯ, ಧ್ಯಾನದ ಆಯಾಮಗಳೂ ಒಂದು ಹದದಲ್ಲಿ ಕರಗಿಕೊಂಡಿವೆ…ಮುಖ್ಯವಾದ ಮಾತೆಂದರೆ ಸಮುದ್ಯತಾ ಅವರ ಕವಿತೆಗಳು ಈಗಾಗಲೇ ಖಚಿತವಾಗಿರುವ ಸತ್ಯಗಳ ಏಕಮುಖ ಮಂಡನೆಗಳಲ್ಲ. ಕಾವ್ಯಸ್ವರೂಪವನ್ನೂ, ಜೀವನದ ಸ್ವರೂಪವನ್ನೂ ಅನುಭವದಲ್ಲಿ, ಪ್ರಯೋಗದಲ್ಲಿ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು. ಅವರ ಕಾವ್ಯದ ಸಫಲತೆ-ಅಸಫಲತೆಗಳಿಗಿಂತ ನಮಗೆ ತಟ್ಟುವುದು ಅದರ ಹಿಂದಿನ ಆರ್ತತೆ ಮತ್ತು ವಿಸ್ಮಯ ಎಂಬುದಾಗಿ ಹೇಳಿದ್ದಾರೆ.
ಸಾಗರ ಸಮೀಪದ ಶೆಡ್ತೀಗೆರೆ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಸಮುದ್ಯತಾ ವೆಂಕಟರಾಮು ಅವರು ಕೃಷಿ ಕುಟುಂಬದ ಗೃಹಿಣಿ. ಬಿ.ಎ ಪದವಿ ಪಡೆದಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತರು, ಹವ್ಯಾಸವಾಗಿ ಗಮಕ ವಾಚನ ಕಲೆಯನ್ನು ಅಭ್ಯಾಸಮಾಡಿದವರು. ರಾಜ್ಯಾದ್ಯಂತ ಹಲವಾರು ಗಮಕ ಕಾರ್ಯಕ್ರಮಗಳನ್ನು ನೀಡದ ಅನುಭವ ಇವರಿಗಿದೆ. ‘Forever Forty ಕರ್ನಲ್ ವಸಂತ್’ (ಸುಭಾಷಿಣಿ ವಸಂತ್ ಮತ್ತು ವೀಣಾ ಪ್ರಸಾದ್) ಎಂಬ ಇಂಗ್ಲಿಷ್ ಪುಸ್ತಕದ ಭಾವಾನುವಾದವನ್ನು ಇವರು ಮಾಡಿದ್ದು, ಪ್ರಕಟಗೊಂಡಿದೆ. ಕೃತಿಗಳು: ಭಾನುಮತಿಯ ಮುತ್ತುಗಳು ...
READ MORE