ಎತ್ತಿಕೊಂಡವರ ಕೂಸು

Author : ರವಿಶಂಕರ್ ಎ.ಕೆ (ಅಂಕುರ)

Pages 104

₹ 75.00




Year of Publication: 2017
Published by: ನಿರಂತರ ಪ್ರಕಾಶನ
Address: #165, 8ನೇ ಎ ಕ್ರಾಸ್, 14ನೇ ಎ ಮೇನ್ , ನೆಲಮಹಡಿ, ಆರ್.ಪಿ.ಸಿ. ಲೇಔಟ್ (ಹಂಪಿನಗರ) ವಿಜಯ ನಗರ, ಬೆಂಗಳೂರು 560104
Phone: 9886830331

Synopsys

ಎತ್ತಿಕೊಂಡವರ ಕೂಸು-ರವಿಶಂಕರ ಎ.ಕೆ. ಅವರ ಕವನ ಸಂಕಲನ. ಪ್ರಸ್ತುತ ಸಮಾಜದ ವಾಸ್ತವವನ್ನು ಬಿಂಬಿಸುವ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಇವು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿಯ ಅಭಿವ್ಯಕ್ತಿಗಳಾಗಿವೆ. ಈ ದೃಷ್ಟಿಯಲ್ಲಿ 20ನೇ ಶತಮಾನದ ಆಧುನಿಕ ಕಾವ್ಯದೊಂದಿಗೆ ಇಂದಿನ ಕವಿತೆಗಳನ್ನು ತೌಲನಿಕವಾಗಿ ವಿಶ್ಲೇಷಿಸಲಾಗಿದೆ.  ಹಲವು ಆಯಾಮಗಳ 60 ಕವಿತೆಗಳಿವೆ. ಪ್ರೀತಿ, ಪ್ರೇಮ, ಮಮತೆ, ವಾಸ್ತವದ ಸಮಸ್ಯೆಗಳು, ಯೌವನ. ಬಡತನ, ಹಸಿವು, ನೋವು ಈ ಅಂಶಗಳು ಸಹೃದಯರ ಓದಿಗೆ ಹೊಸ ಅರ್ಥ ಮೂಡಿಸಲೂ ಬಹುದು. ಈ ಸಂಕಲನದ ‘ಅನ್ನದೇಗುಲ’ ಕವಿತೆಯ ಒಳಪದರಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು. ಕವಿತೆಯ ಭಾಷೆ ಸರಳವಾಗಿದ್ದು, ದೇಸಿ ಸೊಗಡಿನ ನವೋದಯ ಕಾವ್ಯದ ಜಾಡಿನಲ್ಲಿ ಮೂಡಿರುವುದನ್ನು ಕಾಣಬಹುದು.

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Excerpt / E-Books

ಅನ್ನ ದೇಗುಲದೊಳಗೆ ನಿನ್ನ ನಾ ಕಾಣುತಿಹೆ ನಿನ್ನೊಳಗೂ ನಾ ಕಾಣಬಹುದೇ! ನನ್ನದೆಯ ಇತಿಹಾಸ ನಿನ್ನೆದೆಗೆ ಮಧುಪ್ರಾಸ ಬಡತನವೆ ಇರಲಿ ಬಾಳಕೊನೆಗೆ

(ಅನ್ನದೇಗುಲ ಕವಿತೆಯ ಸಾಲುಗಳ ಸಾರ)

Reviews

‘ಅನ್ನದೇಗುಲ’ದಲ್ಲಿ ಹೊಸ ಅರ್ಥಗಳ ಹುಡುಕಾಟ 

     ಮನುಷ್ಯನ ಬದುಕನ್ನು ಕಾಲಕಾಲಕ್ಕೆ ಕಥೆಯಾಗಿಸುವಲ್ಲಿ ಸಾಹಿತ್ಯದ ಹಾದಿಯು ಹಿರಿದು. ಈ ನಿಟ್ಟಿನಲ್ಲಿ ಕಾವ್ಯವು ಮೊದಲ ಹೆಜ್ಜೆಯಿಂದಲೂ ಸಾಹಿತ್ಯದ ಸೃಷ್ಟಿಯ ಸಂಗಾತಿಯಾಗೇ ಬೆಳೆದು ಬಂದಿದೆ. ಛಂದಸ್ಸು, ಅಲಂಕಾರಗಳಿಂದ ಸಿಂಗರಿಸಿಕೊಂಡು ಮನಸ್ಸಿಗೆ ಮುದ ನೀಡುವ ಮತ್ತು ಮನಸ್ಸನ್ನು ವಿಸ್ತರಿಸುತ್ತಲೇ ಇರುವ ಪ್ರಕಾರವೇ ಕಾವ್ಯ. ಆಧುನಿಕ ಸಾಹಿತ್ಯದಲ್ಲಿ ಕಾವ್ಯವು ಶಾಸ್ತ್ರೀಯ ಚೌಕಟ್ಟನ್ನು ಮೀರುವುದರ ಜೊತೆಗೆ ಆ ಚೌಕಟ್ಟಿಗೆ ಹೊಸ ದಿಗಂತಗಳನ್ನು ತೋರಿಸುತ್ತ ಸುಂದರ ಪದಪುಂಜಗಳಲ್ಲಿ ರೂಪುಗೊಂಡು ಸಹೃದಯರ ತನುಮನಗಳಿಗೆ ತಂಪೆರೆಯುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಂದಿನ ಯುವ ಕವಿಗಳ ನವನವೀನ ಕವಿತೆಗಳು ಜೀವನ್ಮುಖಿ ಚಿಂತನೆಗಳೊಂದಿಗೆ ರಚನೆಯಾಗುತ್ತಿರುವುದನ್ನು ಕನ್ನಡ ಸಾಹಿತ್ಯದ ಬೆಳವಣಿಗೆಯ ‘ಯುವೋದಯ’ದ ಕಾಲವಾಗಿ ಕಾಣಬಹುದಾಗಿದೆ.
    ಈ ದಿಸೆಯಲ್ಲಿ ಪ್ರಸ್ತುತ ಸಮಾಜದ ವಾಸ್ತವವನ್ನು ಬಿಂಬಿಸುವ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಈ ರಚನೆಗಳು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿಯ ಅಭಿವ್ಯಕ್ತಿಗಳಾಗಿವೆ. ಈ ದೃಷ್ಟಿಯಲ್ಲಿ ಇಪ್ಪತ್ತನೇ ಶತಮಾನದ ಆಧುನಿಕ ಕಾವ್ಯದೊಂದಿಗೆ ಇಂದಿನ ಕವಿತೆಗಳನ್ನು ತೌಲನಿಕವಾಗಿ ವಿಶ್ಲೇಷಿಸಲಾಗಿದೆ. ೨೦೧೭ರಲ್ಲಿ ಪ್ರಕಟಗೊಂಡ ಅಂಕುರ ಅವರ ‘ಎತ್ತಿಕೊಂಡವರ ಕೂಸು’ ಕವನಸಂಕಲನದಲ್ಲಿ ಹಲವು ಆಯಾಮಗಳ ಕವಿತೆಗಳಿವೆ. ಪ್ರೀತಿ, ಪ್ರೇಮ, ಮಮತೆ, ವಾಸ್ತವದ ಸಮಸ್ಯೆಗಳು, ಯೌವನ, ಬಡತನ, ಹಸಿವು, ನೋವು ಈ ಅಂಶಗಳು ಸಹೃದಯರ ಓದಿಗೆ ಹೊಸ ಅರ್ಥ ಮೂಡಿಸಲೂ ಬಹುದು. ಈ ಸಂಕಲನದ ‘ಅನ್ನದೇಗುಲ’ ಕವಿತೆಯ ಒಳಪದರಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು. ಕವಿತೆಯ ಭಾಷೆ ಸರಳವಾಗಿದ್ದು, ದೇಸಿಸೊಗಡಿನ ನವೋದಯ ಕಾವ್ಯದ ಜಾಡಿನಲ್ಲಿ  ಮೂಡಿರುವುದನ್ನು ಕಾಣಬಹುದಾಗಿದೆ.

‘ಅನ್ನ ದೇಗುಲದೊಳಗೆ
ನಿನ್ನ ನಾ ಕಾಣುತಿಹೆ
ನಿನ್ನೊಳಗೂ ನಾ ಕಾಣಬಹುದೇ!’

    ಇಡೀ ವಿಶ್ವವನ್ನೇ ಒಂದು ‘ಅನ್ನದೇಗುಲ’ವಾಗಿ ನೋಡುವುದಾದಲ್ಲಿ, ಇಲ್ಲಿನ ಎಲ್ಲಾ ಚರಾಚರ ವಸ್ತುಗಳು ನಮ್ಮ ಪಂಚೇಂದ್ರಿಯಗಳ ಹಸಿವಿಗೆ ಆಹಾರವಾಗಿ ಒದಗುವ ಪ್ರಕ್ರಿಯೆ ನಡೆಯುತ್ತಿದೆ. ಈ ಕವಿತೆಯಲ್ಲಿ ಅನ್ನಬ್ರಹ್ಮನನ್ಮೂ, ಪರಬ್ರಹ್ಮನ್ನೂ ಹುಡುಕುವಲ್ಲಿ ಒಂದರೊಳಗೊಂದರ ಇರುವಿಕೆಯ ತತ್ವವನ್ನೂ ಸೃಷ್ಟಿಯ ಜೀವರಾಶಿಗಳಲ್ಲಿ ಮಾನವನ ಜೀವಸಂಬಂಧಗಳ ಬಾಂಧವ್ಯದಲ್ಲಿ ಒಂದಾಗಿ ಬಾಳುವ ಆತ್ಮೀಯ ಪ್ರೀತಿಯನ್ನೂ ಕಾಣಬಹುದು.
    ಜಗತ್ತಿಗೆ ಅನ್ನದ ಹಾದಿಯನ್ನು ತೋರಿಸಿದವಳು ಹೆಣ್ನೇ ಆಗಿದ್ದರೂ ಪರಂಪರಾಗತವಾಗಿ ಅನ್ನಕ್ಕಾಗಿ ದುಡಿಯುತ್ತಿರುವ ಮತ್ತು ಅದನ್ನು ಒದಗಿಸುತ್ತಿರುವ ಜೀವಪೋಷಕನು ಪುರುಷನೇ ಆಗಿದ್ದಾನೆ. ಅದರಿಂದಾಗಿಯೇ ಅನ್ನದೇಗುಲದಲ್ಲಿ ಹೆಣ್ಣು ತನ್ನ ಜೀವಜೊತೆಗಾರನನ್ನು ಕಾಣುವ ಹಂಬಲ ವ್ಯಕ್ತವಾಗಿದೆ.  ‘ನಿನ್ನೊಳಗೂ ನಾ ಕಾಣಬಹುದೇ!’ ಎಂಬುದು ಪ್ರಶ್ನೆಯಾಗಿದ್ದರೂ ಕಾಣುವ ಅರ್ಥ ಸಾಧ್ಯತೆಯು ಈ ಕವಿತೆ ಮುಂದಿನ ಸಾಲುಗಳಲ್ಲಿ ಸಹೃದಯನಿಗೆ ದಕ್ಕುತ್ತದೆ.
ನನ್ನೆದೆಯ ಇತಿಹಾಸ
ನಿನ್ನೆದೆಗೆ ಮಧುಪ್ರಾಸ
ಬಡತನವೆ ಇರಲಿ ಬಾಳಕೊನೆಗೆ’

    ಸ್ತ್ರೀ ಒಲವಿನ ಚೈತನ್ಯ ಪುರುಷನ ಜೀವನಾಕಾಂಕ್ಷೆಗೆ ಪ್ರೇರಣೆ.  ಆಕೆ ತನ್ನ ಇರುವಿಕೆ, ಸದ್ಗುಣ, ವ್ಯಕ್ತಿತ್ವ, ನಡವಳಿಕೆ, ಪ್ರೀತಿ-ಪ್ರೇಮ, ವಾತ್ಸಲ್ಯ, ಅನುರಾಗ ಎಲ್ಲವೂ ನಿನಗೆ ಮಧುವಂತೆ ಸಿಹಿ ನೀಡಲಿ, ಬಾಳು ಹಿತಕರವಾಗಿರಲಿ ಎನ್ನುವ ಆಶಯ ವ್ಯಕ್ತಪಡಿಸಿರುವುದನ್ನು ಕಾಣಬಹುದು. ನಮ್ಮ ಒಲವಿನ ಬದುಕಿನಲಿ ಬಡತನವೇ ಬಂದರೂ ಸರಿ ಇಬ್ಬರಲ್ಲೂ ಮಮತೆ, ಕರುಣೆ, ಕಾಳಜಿ, ಸ್ನೇಹ, ಬಾಂಧವ್ಯಗಳು ಚೈತ್ರಕಾಲದಂತೆ ಸದಾ ಹಚ್ಚಹಸಿರಾಗಿರಲಿ, ಜೀವನಪೂರ್ಣ ಪ್ರೇಮ ಬಂಧುರತೆ ಉಳಿಯಲಿ ಎನ್ನುವುದಾಗಿದೆ.
ಎಲ್ಲ ದೇವರನಿಲ್ಲಿ
ಆಯ್ದು ಹುಡುಕುತಲಿರುವೆ
ನನ್ನ ಜೀವದ ದೇವ ನೀನೆ ಇಲ್ಲಿ..’

    ತಾನು ನಿತ್ಯ ನಿರ್ವಹಿಸುವ ಕಾಯಕದಲ್ಲಿ ಹೆಣ್ಣು ತನ್ನ ಅನ್ನಬ್ರಹ್ಮನನ್ನು ಹುಡುಕುತ್ತಿದ್ದಾಳೆ.  ಅಕ್ಕಿ ಆರಿಸುವ, ಭತ್ತ ಕುಟ್ಟುವ, ರಾಗಿ ಬೀಸುವ, ಪೈರು ನೆಡುವ, ಕಳೆ ತೆಗೆದು ಹಸನುಗೊಳಿಸುವ ಎಲ್ಲಾ ಸಂದರ್ಭಗಳಲ್ಲಿ ತನ್ನವನನ್ನೇ ದೇವರಂತೆ ಕಾಣುತ್ತಿದ್ದಾಳೆ. ಹೆಣ್ಣು ಪರಂಪರಾಗತವಾಗಿ ಪತಿಯೇ ಪರದೈವವೆಂದು ನಂಬಿರುವ ಸಂಸ್ಕೃತಿಯನ್ನು ಕಾಣಬಹುದು.
‘ಕುರುಡೆಂಬ ಕತ್ತಲೆಗೆ
ಬರಡು ಬೀಜವ ಬಿತ್ತಿ
ಇದು ಜೀವದೆರಡು ಸೊಲ್ಲು
ಕೇಳು ಇಲ್ಲಿ...’

    ಅಜ್ಞಾನವೆಂಬ ಅಂಧಕಾರದಲ್ಲಿರುವವರಿಗೆ ವ್ಯರ್ಥ ಚಿಂತನೆಗಳನ್ನು ತುಂಬುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಈ ಸಾಲುಗಳು ಸೂಚಿಸುತ್ತವೆ. ವಾಸ್ತವವನ್ನು ಗಮನಿಸುವುದಾದರೆ ಇದರಿಂದ ಜನರ ಜೀವನವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆ. ಇಂದು ವ್ಯಕ್ತಿ ಸ್ವಾತಂತ್ರ‍್ಯ, ಅಭಿವ್ಯಕ್ತಿ ಸ್ವಾತಂತ್ರ‍್ಯ ಎಂದೆಲ್ಲಾ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು, ಅನುಪಯುಕ್ತವಾದ ವಿಚಾರಗಳನ್ನು ಬಿತ್ತುವುದರಿಂದ ಯಾವ ಪ್ರಯೋಜವಾಗುತ್ತಿದೆ? ಮತ್ತೊಂದು ರೀತಿಯಲ್ಲಿ ವೈಯಕ್ತಿಕ ಬದುಕನ್ನು ಆದರಿಸಿ ಸ್ವಾರ್ಥದ ಆಸೆ ಆಮಿಷಗಳನ್ನು ಈಡೇರಿಸಿಕೊಳ್ಳುವಲ್ಲಿ ಹೆಣ್ಣು-ಗಂಡು ತಮ್ಮ ಕುಟುಂಬಗಳನ್ನು ಅಧಃಪತನಕ್ಕೆ ತಳ್ಳುತ್ತಿರುವುದು ಕಾಣಸಿಗುತ್ತದೆ. ಮಕ್ಕಳ ಭವಿಷ್ಯಕ್ಕೆ ಮಾದರಿಯಾಗಬೇಕಾದ ತಂದೆ-ತಾಯಿಯರೇ ಕಂಟಕರಾದರೆ ಅವರ ಜೀವನವನ್ನು ರೂಪಿಸುವುದಾದರೂ ಯಾರು? ಎಂದು ಯೋಚಿಸಿದಾಗ ಸೋಲುತ್ತಿರುವ ಕುಟುಂಬ ಜೀವನವನ್ನು ಮತ್ತೆ ಕಟ್ಟುವ ಜವಾಬ್ದಾರಿ ಮತ್ತು ಸಮಾಜದ ಅನೇಕ ಸಮಸ್ಯೆಗಳಿಗೆ ತೃಪ್ತಿ ಬದುಕನ್ನು ಕಲಿಸುವ ಸಾಹಿತ್ಯ ನಿರ್ಮಾಣದ ಅಗತ್ಯ ಇದೆ ಎನಿಸುತ್ತದೆ. ಜನಪ್ರಿಯತೆಯ ಹಿಂದೆ ಬಿದ್ದ ಬರಹಗಳು ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ನೀಡುತ್ತವೆ? ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಮಕ್ಕಳನ್ನು ಬರಡು ಬೀಜಗಳನ್ನಾಗಿ ತಯಾರು ಮಾಡುತ್ತಿವೆ. ಇಂತಹ ಸಂದಿಗ್ಧತೆಯನ್ನು ಎದುರಿಸುತ್ತಿರುವ ಸಮಾಜಕ್ಕೆ ತಮ್ಮಷ್ಟಕ್ಕೆ ತಾವು ನಿರಂತರ ದುಡಿದು ಬದುಕುತ್ತಿರುವ ಎರಡು ಜೀವಗಳ ಬದುಕಿನ ಅನುಭವದ ಸೊಲ್ಲು ಅರ್ಥಪೂರ್ಣ ಬದುಕಿಗೊಂದು ತತ್ವವನ್ನು ಈ ಕವಿತೆ ಧ್ವನಿಸುತ್ತದೆ.
‘ನಾ ನಿನಗೆ ನೀ ನನಗೆ
ನಿನ್ನಾಗೆ ನನ್ನ ನಗೆ
ಇರಲಿ ಬಿಡು ಬೆವರೂಟ ಈ ಬಾಳ ಪದಿಗೆ!’

    ಕೂಡಿ ಬಾಳಿದರೆ ಸ್ವರ್ಗ ಎನ್ನುವಂತೆ, ಇಬ್ಬರೂ ಒಂದಾಗಿ ಬಾಳುವ ಜೀವನ ಪಯಣದಲಿ ನಿನ್ನ ಪ್ರೀತಿಧಾರೆಯಲ್ಲಿಯೇ ನನ್ನ ಸಂತೋಷ ಅಡಗಿದೆ. ನೀ ನನಗೆ, ನಾ ನಿನಗೆ....ಎನ್ನುವಲ್ಲಿ ಜೀವನದ ಎಲ್ಲ ಕಷ್ಟ-ಸುಖ, ಸೋಲು-ಗೆಲುವುಗಳು ಒಂದೇ ರೀತಿ ಸ್ಪರ್ಶಿಸಿ, ಸ್ಪಂದಿಸಿ ಒಳಗೊಳ್ಳುವಿಕೆ ಹಾಗು ಆತ್ಯಂತಿಕ ಪ್ರೇಮದ ಎಲ್ಲೆ ಮೀರಿದ ಅರ್ಧನಾರೀಶ್ವರ ತತ್ವದಂತೆ ತಮ್ಮ ಒಲವಿನ ದಾಂಪತ್ಯದಲ್ಲಿ ಸಮತೆಯ ಹರವು ಜೀವದನಿಯಾಗಿ, ಕಾವ್ಯದನಿಯಾಗಿ ಈ ಕವಿತೆಯಲ್ಲಿ ಹೊಮ್ಮಿರುವುದನ್ನು ಕಾಣಬಹುದು.
    ತೌಲನಿಕವಾಗಿ ಗಮನಿಸಬಹುದಾದ ‘ಅನ್ನದೇಗುಲ' ಕವಿತೆಯಲ್ಲಿ ಈ ಹೊಸ ಶತಮಾನದ ಕವಿತೆಯ ವಸ್ತು, ಭಾಷೆ, ಆಶಯಗಳೆಲ್ಲವೂ ನವೋದಯ ಕವಿತೆಗಳೊಂದಿಗೆ ಅನುಸಂಧಾನವಾಗುವಲ್ಲಿ ಮತ್ತೆ ಮತ್ತೆ ಭಾರತೀಯ ಸಂಸ್ಕೃತಿಯ ಮನೋಭೂಮಿಕೆಯನ್ನು ಕಾಣಿಸುವ ಪ್ರಯತ್ನ ಮಾಡಲಾಗಿದೆ. ಬೇಂದ್ರೆಯವರ ಸಾಮಾಜಿಕ ಪ್ರಜ್ಞೆಯನ್ನು ಬಿಂಬಿಸುವ ಕವನಗಳಲ್ಲಿ ಅನ್ನ ಮತ್ತು ಹಸಿವಿನ ಕುರಿತಾದ ವೈಚಾರಿಕ ಚಿಂತನೆಗಳಿವೆ. ಬೇಂದ್ರೆಯವರು ರಚಿಸಿರುವ ‘ಅನ್ನಾವತಾರ’, ‘ಅನ್ನಯಜ್ಞ’, ‘ತುತ್ತಿನ ಚೀಲ’ ಕವಿತೆಗಳಲ್ಲಿ ಭಿನ್ನವಾದ ಆಯಾಮಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ತೆರೆದಿಡುವ ಪರಿ ಕಾಣಬಹುದು.  ಅನ್ನ ಮತ್ತು ಹಸಿವಿನ ಕುರಿತು ‘ವಿಚಾರಮಂಜರಿ’ಯಲ್ಲಿ ಬೇಂದ್ರೆಯವರೇ ಹೀಗೆ ಹೇಳಿದ್ದಾರೆ: “ಅನ್ನ ಮತ್ತು ಹಸಿವು ಇವಕ್ಕೆ ‘ಅರ್ಥ’ ಮತ್ತು ‘ಕಾಮ’ ಎಂಬ ದೊಡ್ಢ ಹೆಸರುಗಳಿವೆ. ಅನ್ನ-ಹಸಿವುಗಳ ತೊಡಕನ್ನು ತೊಡಕಿಲ್ಲದೆ ಬಿಡಿಸುವ ಪ್ರಯೋಗಕ್ಕೆ ‘ಧರ್ಮ’ ಎಂದು ಹೆಸರು. ಪಾರ್ಥಿವ ಅನ್ನವಷ್ಟೇ ಅನ್ನವಲ್ಲ. ನೀರಿಲ್ಲದೆ ಮನುಷ್ಯ ಬಾಳಲಾರನು. ಬೆಳಕಿಲ್ಲದಿದ್ದರೆ ಬಾಡಿಹೋಗುವನು. ಗಾಳಿಯಿಲ್ಲದಿದ್ದರೆ ಉಸಿರಡಗಿಹೋಗುವನು. ನಿಜವಾಗಿಯೂ ಮನುಷ್ಯನು ಕ್ಷಣ ಕ್ಷಣಕ್ಕೂ ಬಾಳುವುದು ಈ ನಾಲ್ಕರಿಂದಲೂ ಅಹುದು. ಗಾಳಿ-ಬೆಳಕು-ನೀರು ಇವೂ ಅನ್ನಗಳೇ. ನಮ್ಮ ಬಾಳು-ಸಾವುಗಳೆರಡೂ ಈ ಮಹಾಭೂತಗಳ ಅಧೀನವಾಗಿವೆ..; ಮಾನವನ ಅನ್ನದಿಂದ ಅವನ ಮನವನ್ನು ಅಳೆಯ ಬೇಕಾಗಿದೆ. ಮನುಷ್ಯನ ಮೈಯು ಅನ್ನದ ಪರಿಣಾಮ. ಅದೇಕೆ ಮೈ ಕೂಡ ಅನ್ನವಲ್ಲವೆ? ಅಂತೆಯೇ ಜನರ ಮೈಗಳನ್ನೂ ಆಳಿ ಅನ್ನವನ್ನು ಅಧೀನದಲ್ಲಿಟ್ಟುಕೊಳ್ಳಲು ಶಕ್ತಿ ಮದೋನ್ಮತ್ತರು ಹವಣಿಸುವುದುಂಟು.  ಅವಷ್ಟೇ ಸ್ವತಂತ್ರವಾದರೆ ಸಾಲದು.  ಮಾನವರ ಮೈಗಳು ಪರಾಧೀನ ಉಳಿದಿರುವವರೆಗೆ ಅನ್ನದ ಇನ್ನೊಂದು ಕಗ್ಗಂಟು ಬಿಡಿಸಲಾಗದು.”1
ಅಂಕುರ ಅವರ ‘ಅನ್ನದೇಗುಲ' ಕವಿತೆ ಬೇಂದ್ರೆ ಅವರ ‘ನಾದಲೀಲೆ' ಕವನ ಸಂಕಲನದ ‘ನಾನು ಬಡವಿ' ಕವಿತೆಯ ಸಾಲುಗಳನ್ನು ನೆನಪಿಸುತ್ತದೆ.
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು!’

ಈ ಸಾಲುಗಳಲ್ಲಿನ ಕಾವ್ಯದನಿ ‘ಅನ್ನದೇಗುಲ’ ಕವಿತೆಯಲ್ಲೂ ಕಾಣಬಹುದು.
‘ನನ್ನೆದೆಯ ಇತಿಹಾಸ
ನಿನ್ನೆದೆಗೆ ಮಧುಪ್ರಾಸ
ಬಡತನವೆ ಇರಲಿ ಬಾಳ ಕೊನೆಗೆ’

    ಈ ಎರಡೂ ಕವಿತೆಗಳಲ್ಲಿನ ಬಹಳ ಮುಖ್ಯವಾದ ಸಾಮ್ಯತೆ ಎಂದರೆ ಪರಕಾಯ ಪ್ರವೇಶ ಮಾಡಿ ಕಾವ್ಯ ರಚಿಸಿರುವುದು. ಇಲ್ಲಿನ ಕವಿಗಳು ಒಬ್ಬ ಹೆಣ್ಣಾಗಿ ತನ್ನ ಆಂತರ್ಯದ ಒಲವನ್ನು ವ್ಯಕ್ತಪಡಿಸಿರುವುದು ಮಹತ್ವದ್ದಾಗಿದೆ. ಬೇಂದ್ರೆ ಅವರ ಕವಿತೆಯಲ್ಲಿ ಎರಡು ಬಡಜೀವಗಳು ತಮ್ಮ ಬದುಕಿಗೆ ಒಲವೇ ಆಧಾರ ಎಂದರೆ, ಅಂಕುರ ಅವರ ಕವಿತೆಯಲ್ಲಿ ತಮ್ಮ ಒಲವಿನ ಬದುಕಿನಲ್ಲಿ ಬಡತನವೇ ಬಂದರೂ ನಾವೊಂದೆ ಎಂಬ ಭಾವನೆ ಸೂಚಿತವಾಗಿದೆ. ಈ ಕವಿತೆಯ ಆಶಯದ ಅಂಶಗಳಲ್ಲೂ ಸಾಮ್ಯತೆ ಇದ್ದು ದಾಂಪತ್ಯದ ಹೊಂದಾಣಿಕೆ ಡಿ.ವಿ.ಜಿ. ಅವರ ಮಾತಿನಂತೆ ‘ಮಾವಾಗಿ ಬೇವಾಗಿ ಸಂಸಾರ ವನದಿ'  ಸಾಗಿ-ತೂಗಿ ಬಾಳುವಿಕೆ ನಡೆಸಲು ಅನನ್ಯವಾದ ಒಲವಿನ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಈ ಕವಿತೆಗಳು ಧ್ವನಿಸುತ್ತವೆ.
    ಕವಿ ಕೆ.ಎಸ್.ನ. ಅವರ ‘ಮೈಸೂರು ಮಲ್ಲಿಗೆ' ಕವನ ಸಂಕಲನದ ‘ನಿನ್ನೊಲುಮೆಯಿಂದಲೇ' ಕವಿತೆಯ ಸಾಲುಗಳನ್ನು ಗಮನಿಸುವುದಾದರೆ ‘ನಿನ್ನ ಕಿರು ನಗೆಯಿಂದ ನಗೆಯಿಂದ ಎತ್ತರದ ಮನೆ ನನ್ನ ಬದುಕೇ? ಚಂದ್ರನಲಿ ಚಿತ್ರಸಿದ ಚೆಲುವಿನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೆ?’ ಈ ಕವಿತೆಯ ಅಂತಃಸತ್ವವನ್ನು ಗಮನಿಸಿದಾಗ ಗಂಡು ತನ್ನ ಬದುಕನ್ನು ಕಾಣುವುದು ಹೆಂಡತಿಯ ಒಲುಮೆಯಿಂದಲೇ ಎಂದು ಹೇಳಿರುವುದನ್ನು ‘ಅನ್ನದೇಗುಲ' ಕವಿತೆಯ ಸಾಲುಗಳಲ್ಲೂ ಕಾಣಬಹುದು.
‘ಎಲ್ಲ ದೇವರನಿಲ್ಲಿ
ಆಯ್ದು ಹುಡುಕುತಲಿರುವೆ
ನನ್ನ ಜೀವದ ದೇವ ನೀನೆ ಇಲ್ಲಿ..’

    ಈ ಸಾಲುಗಳಲ್ಲಿನ ಹೆಣ್ಣುಮನದ ಸಹಜ ಒಲವು, ಮತ್ತು ಗಂಡುಮನದ ಸಹಜ ಒಲವು ಒಂದೇ ಆಗಿವೆ. ಇಬ್ಬರ ಆಂತರ್ಯದಲ್ಲಿ ಒಂದೇ ಭಾವನೆ ಇದ್ದು ಇಬ್ಬರೂ ಪಡೆವ ಭಾಗ್ಯಗಳು ಒಬ್ಬರಿಂದ ಒಬ್ಬರಿಗೆ ಜೀವನ ಸಾರ್ಥಕಗೊಳಿಸುವ ‘love is life' ಎನ್ನುವ ಜೀವನ ಪ್ರೀತಿಯನ್ನು ಸಾರುತ್ತಿವೆ.

    ಆಧುನೀಕರಣ ಮತ್ತು ವಸಾಹತುಶಾಹಿಯ ಪ್ರಭಾವ ಜನಜೀವನದ ಮೇಲೆ ಅನೇಕ ರೀತಿಯಲ್ಲಿ ಪ್ರಭಾವ ಬೀರಿದವು.  ಅದರ ಪರಿಣಾಮದಿಂದ ಬದುಕು ಕಟ್ಟುವ ಮತ್ತು ಸಾಹಿತ್ಯ ಕಟ್ಟುವ ಕ್ರಮಗಳೆರಡೂ ಏಕಕಾಲದಲ್ಲಿ ಬದಲಾವಣೆಗೊಳ್ಳುತ್ತಾ ಬಂದು ಮೂಲದ ಬದುಕಿನ ಗುರುತುಗಳು ಇತಿಹಾಸವಾಗುತ್ತಿವೆ. ಇಂತಹ ಆಧುನಿಕ ಸಂದರ್ಭಗಳಲ್ಲಿ ಕಾಲದೇಶಕ್ಕೂ ನಿಲ್ಲುವ ಹಳ್ಳಿಯ ಪರಿಸರದ ಪರಿಣಾಮದಿಂದ ಹುಟ್ಟಿದ ದೇಸೀತನದ ನೈಜ ಮತ್ತು ಸಹಜವಾದ ಜೀವಂತಿಕೆ ಹರಿಯುವಿಕೆಯನ್ನು ಕವಿ ಅಂಕುರ ಅವರು ಕವಿತೆಗಳಲ್ಲಿ ಒಡಮೂಡಿಸಿದ್ದಾರೆ.  ಗ್ರಾಮೀಣ ಯುವ ಮನಸ್ಸುಗಳ ತಲ್ಲಣಗಳು, ಬದುಕಿನ ತುಡಿತ, ರೈತನ ದುಡಿಮೆ, ಬಡತನ ತಂದೊಡ್ಡಿದ ಸಂಕಷ್ಟಗಳು, ಹೀಗೆ ಅನೇಕ ವಿಚಾರಗಳ ಚಿಂತನೆಗಳಗೆ ಕಾವ್ಯದ ಎರಕಹೊಯ್ಯುವಲ್ಲಿ ಕನ್ನಡತನವಿದೆ. ಈ ಕನ್ನಡತನವನ್ನು ಕಾಯ್ದಿಡುವಲ್ಲಿ ಈ ಕವಿತೆಗಳು ಯಶಸ್ವಿಯಾಗಿವೆ ಎನ್ನಬಹುದು.
ಅಂಕುರ ಅವರ ‘ಎತ್ತಿಕೊಂಡವರ ಕೂಸು' ಕವನಸಂಕಲನದ ‘ಈ ಹೆಂಗಸರು ಹೀಗೆ' ಎನ್ನುವ ಕವಿತೆಯಲ್ಲಿ ಹಸಿವು ಮತ್ತು ಅನ್ನವನ್ನು ಭಿನ್ನವಾದ ಸ್ವರೂಪದಲ್ಲಿ ಕಾಣಬಹುದು.
‘ದುಡಿಯುತ್ತಾ ರೋಗದಲಿ
ಹಸಿವಿಗೆ ಅನ್ನದಾಟವನಾಡಿ
ಅರಿಷಡ್ವರ್ಗಗಳ ರುಚಿಯನರ್ತನಕೆ
ಮಾಂಸ ಮನುಷ್ಯತನಗಳಿಗೆ
ನಿತ್ಯ ಮೈಲಿಗೆಯಾಗಿ...’

    ಸಹಜ ಬಾಳ್ವೆ ಎಂಬುದು ಮಹಿಳೆಯರಿಗೆ ದಕ್ಕದ ಸನ್ನಿವೇಶಗಳಲ್ಲಿ ಅವಳನ್ನು ಬಾಳಿಸಿದ್ದು ಕೇವಲ ಪುರುಷನ ಸ್ವಾರ್ಥಕ್ಕಾಗಿ ಎಂಬುದನ್ನು ಕವಿತೆ ಸೂಚಿಸುತ್ತದೆ. ಹೆಣ್ಣು ತನ್ನ ಅನ್ನದ ಹಸಿವು ನೀಗಿಸಿಕೊಳ್ಳುವಲ್ಲಿ ತಾನು ನಿರ್ವಹಿಸುವ ಎಲ್ಲಾ ಕ್ರಿಯೆಗಳು ಅನ್ನದಾಟಗಳಾಗಿವೆ ಎಂದಿದ್ದಾರೆ. ಪರಂಪರೆಯಿAದಲೂ ತನ್ನ ಪಾಲಿಗೆ ಅಧೀನತೆಯನ್ನು ತಂದೊಡ್ಡಿದ ವ್ಯವಸ್ಥೆಯಲ್ಲಿ ಮಹಿಳೆಗೆ ಈ ಸ್ಥಿತಿ ಒದಗಿದೆ. ತನ್ನ ಒಡಲನ್ನು ಮಾರಿ ಇನ್ನೊಬ್ಬರ ಹಸಿವು ಹಿಂಗಿಸುತ್ತಾ ತನ್ನ ಆಹಾರವನ್ನು ಒದಗಿಸಿಕೊಳ್ಳುತ್ತಿದ್ದಾಳೆ.
‘ಹೆಣ್ಣೂ ಗಂಡಾಗುವ ಗಂಡೂ ಹೆಣ್ಣಾಗುವ
ಹಳ್ಳಿಯೊಳಗಿನ ನಂಬಿಕೆ-ಆಸೆ-ಪ್ರಮಾಣದಲಿ
ಅಸ್ಥಿ-ಆಸ್ಥಿಗಳ ನಿತ್ಯಕರ್ಮ
ಇವರಳತೆಗೆ ಸಿಗದ ಬದುಕಿನಾ ನೆರಳು
ಇವರನ್ನು ನುಂಗಿದರೂ
ಇವರು ಈ ಬದುಕಿನುದ್ದಕ್ಕೂ
ಚಾಚಿಕೊಂಡ ತಾಯಿ ಬೇರು.’

    ಹಳ್ಳಿ ಸ್ವಚ್ಛಂದ ಜೀವನ ಶೈಲಿಯನ್ನು ಹೊಂದಿದೆ.  ಈ ಹಸನಾದ ಬದುಕಿನುದ್ದಕ್ಕೂ ಕಾಯ್ದಿರುವ ಅಂಶಗಳನ್ನು ಗಮನಿಸಿದರೆ ಆ ಜನರ ಸರಳವಾದ ನಂಬಿಕೆಗಳು ಆಣೆ-ಪ್ರಮಾಣಗಳು. ಈ ಪ್ರಮಾಣಗಳ ಮೂಲಕ ಬಿಕ್ಕಟ್ಟುಗಳನ್ನು ಸುಲಭವಾಗಿ ಬಗೆಹರಿಸಿದ ಪರಿ ಹೆಣ್ಣನ್ನು ಗಂಡಿನೊಂದಿಗೆ ಸಾಮರಸ್ಯದಿಂದ ಬೆಸೆಯಲು ಸಾಧ್ಯವಾಗಿದೆ. ಈ ರೀತಿಯಲ್ಲಿ ರೂಪುಗೊಂಡ ಹೆಣ್ಣುಗಳು ತಮ್ಮ ಬದುಕಿನುದ್ದಕ್ಕೂ ಕುರುಡು ನಂಬಿಕೆಗಳಲ್ಲಿ ಜೀವನ ಸವೆಸಿದ್ದಾರೆನ್ನಬಹುದು. ಅದೇ ಬದುಕು ತಮ್ಮನ್ನು ನುಂಗಿದರೂ ಮರವನ್ನು ರಕ್ಷಿಸುವ ತಾಯಿಬೇರಿನಂತೆ ಇಡೀ ಮನುಕುಲದ ಉದ್ದಕ್ಕೂ ತಮ್ಮ ಜೀವಂತಿಕೆಯನ್ನು ಚಾಚುತ್ತಾ ಮಹತ್ತರ ಜವಾಬ್ದಾರಿ ಹೊತ್ತು ದುಡಿಯುವ ತಾಯಿಬೇರುಗಳೇ ಆಗಿದ್ದಾರೆ ಎಂಬುದನ್ನು ಈ ಕವಿತೆಯಲ್ಲಿ ಗಮನಿಸಬಹುದಾಗಿದೆ.
    ಹಸಿವು-ಅನ್ನದ ಸಮಸ್ಯೆಗಳೂ ಇಲ್ಲಿಯವರೆಗೂ ಹಾಗೆಯೇ ಉಳಿದಿರುವುದರಿಂದ ಈ ಕಾವ್ಯದ ವಿಶ್ಲೇಷಣೆಯೊಂದಿಗೆ ಪ್ರಸ್ತುತ ಸಂದರ್ಭದ ಆಹಾರದ ಮಹತ್ವವನ್ನು ಅರಿಯಬೇಕಾದ ಅಗತ್ಯವಿದೆ. ಇಪ್ಪತ್ತನೇ ಶತಮಾನದವರೆಗೂ ಬದುಕಿಗಾಗಿ ಅನ್ನವನ್ನು ಗಳಿಸುವ ಇಂಗಿತಗಳು ಭಿನ್ನವಾಗಿದ್ದವು. ಆಹಾರದ ಉತ್ಪಾದನೆ ಮೂಲ ಕೃಷಿಯಾಗಿದ್ದು, ಅದನ್ನು ಎಲ್ಲರೂ ಪಡೆಯುವ ಮೂಲಗಳು ಭಿನ್ನವಾದವು. ವ್ಯಾಪಾರ, ಕೊಡುಕೊಳ್ಳುವಿಕೆ ಹಾದಿಗಳು ಉಳ್ಳವರ ಜೀವನಕ್ರಮದ್ದಾಗಿದೆ. ಒಂದೊತ್ತಿನ ಊಟಕ್ಕೆ ಬೇಡುವುದು ಇಂದಿಗೂ ವ್ಯವಸ್ಥೆ ಕಾಪಾಡಿಕೊಂಡು ಬಂದಿರುವ ಸ್ಥಿತಿಯನ್ನು ಬಡವರ ಬವಣೆಯಲ್ಲಿ ಕಾಣಬಹುದು. ಜನತೆಯ ಬದುಕಿನುದ್ದಕ್ಕೂ ಒತ್ತಾಸೆಯಾಗಿ ಬಂದ್ದದ್ದು ನಮ್ಮ ಆಹಾರ ಸಂಸ್ಕೃತಿ. ಭಾರತೀಯ ಸಂಸ್ಕೃತಿಯ ಭಾಗವಾದ ಹಬ್ಬ, ಜಾತ್ರೆಗಳು, ಸಮಾರಾಧನೆಗಳು, ಅನ್ನವನ್ನು ಸವಿಯುವ ಮತ್ತು ಜನಾಂಗವನ್ನು ಬೆಸೆಯುವ ಚಿಂತನೆಗಳಿಂದ ಹುಟ್ಟಿಕೊಂಡು ನಡೆಯುತ್ತಿದ್ದವು. ಅಂತಹ ಒತ್ತಾಸೆಗಳು ಬದಲಾಗಿ ಇಂದಿಗೂ ಅವು ಜನಾಂಗೀಯ ಗುರುತ್ವದಲ್ಲಿಯೂ ನಡೆಯುತ್ತಿವೆ. ಒಟ್ಟಾರೆಯಾಗಿ ಅನ್ನಕ್ಕಾಗಿ ಸಂಭ್ರಮವೂ, ಸಂಭ್ರಮಗಳಿಂದ ಅನ್ನದಾಸೋಹವು ನಡೆಯುತ್ತಿದೆ. ಆದರೆ ಪ್ರಾಣಧಾತುವಾದ ಅನ್ನದ ಮಹತ್ವ ಮರೆತು ಸಾಗುತ್ತಿರುವುದು ದುರಂತವಾಗಿದೆ.  ಶ್ರೀಮಂತ ವರ್ಗದವರು ಸಮಾರಂಭಗಳಲ್ಲಿ ಆಹಾರವನ್ನು ಚರಂಡಿಗೆ ಸುರಿಯುವಲ್ಲಿ ರೈತ ಶ್ರಮವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಇಂದು ಅನ್ನವನ್ನು ಸವಿಯುವ ಕ್ರಮಗಳು ಕೂಡ ಭಿನ್ನವಾಗಿವೆ. ಕೇವಲ ಜಿಹ್ವಾದಾಹವನ್ನು ಇಂಗಿಸುವಲ್ಲಿ ಅನೇಕ ರುಚಿಗಳಲ್ಲಿ, ಬಗೆಬಗೆಯ ತಿನಿಸುಗಳು ಫಾಸ್ಟ್ ಫುಡ್‌ಗಳಾಗಿ ಮಾರ್ಪಟ್ಟಿವೆ. ಅದನ್ನು ತೃಪ್ತಿಯಿಂದ ಸವಿಯುವ ಕಾಲವನ್ನು ಕೂಡ ಕಳೆದುಕೊಳ್ಳುತ್ತಿರುವ ಸ್ಥಿತಿಗೆ ಬಂದು ತಲುಪಿರುವುದನ್ನು ಕಾಣಬಹುದಾಗಿದೆ. ಬೇಂದ್ರೆ ಅವರು ಹೇಳಿದ ಶ್ರಮಪರಿಹಾರತತ್ವವನ್ನು ಇಂದು ಕಾಣಲಾಗದು. ಅನ್ನವನ್ನು ಮಾತ್ರೆಗಳಾಗಿ ಸ್ವೀಕರಿಸುವ ಹಂತಕ್ಕೆ ಬಂದಿದ್ದು ಉಳ್ಳವರಿಗೆ ಆಹಾರದ ಮಹತ್ವ ಮರೆತಂತಾಗಿದೆ. ಇನ್ನೊಂದೆಡೆ ‘ಅನ್ನಬ್ರಹ್ಮ' ಎಂದುಕೊಂಡವರ ಪಾಲಿಗೆ ಅನ್ನ ದಕ್ಕದೆ ಇರುವುದನ್ನು ಕಾಣಬಹುದಾಗಿದೆ. ಈ ತಾರತಮ್ಯದ ಸಮಾಜದಲ್ಲಿ ತನ್ನ ಒಡಲೊಣಗಿಸಿಕೊಂಡು ಅನ್ನವನ್ನು ವೃದ್ಧಿಸುವ ಸಲುವಾಗಿ ಭೂಮಿಗೆ ಸುರಿದ ಬೀಜ ಕೈಗೆ ಸಿಗದಂತಾಗಿದೆ.  ನಿರಂತರವಾಗಿ ದುಡಿಯುವ ಕೈಗಳು ನಿಶ್ಚಲವಾಗುತ್ತಿವೆ. ಇಂತಹ ಸಂದಿಗ್ಧತೆಗಳನ್ನು ಸುಧಾರಿಸುವಲ್ಲಿ ಸಾಹಿತ್ಯ ನಮ್ಮನ್ನು ಮತ್ತೆ ಎಚ್ಚರಿಸಬೇಕಾಗಿದೆ. ಬದುಕಿಗಾಗಿ ಮರುಚಿಂತನೆಗಳು ಹುಟ್ಟಬೇಕಾಗಿದೆ.

ಪರಾಮರ್ಶನ ಕೃತಿಗಳು :
೧.    ಬೇಂದ್ರೆ ಕಾವ್ಯ, ೨೧೦೮, ಡಾ.ಜಿ.ಕೃಷ್ಣಪ್ಪ,  ಪ್ರಸಾರಂಗ, ಮಾನಸ ಗಂಗೋತ್ರಿ, ಮೈಸೂರು.
೨.    ಎತ್ತಿಕೊಂಡವರ ಕೂಸು, ೨೦೧೭, ಅಂಕುರ, ನಿರಂತರ ಪ್ರಕಾಶನ, ಬೆಂಗಳೂರು
 

Related Books