ಬಟ್ಟ ಬಯಲಲಿ ನಿಂತು

Author : ಶಶಿಕಲಾ ವೀರಯ್ಯಸ್ವಾಮಿ

Pages 120

₹ 50.00




Year of Publication: 2006
Published by: ತನು ಮನು ಪ್ರಕಾಶನ
Address: ತನು ಮನು ಪ್ರಕಾಶನ, ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023
Phone: 9448056562

Synopsys

‘ಬಟ್ಟ ಬಯಲಲಿ ನಿಂತು’ ಶಶಿಕಲಾ ವೀರಯ್ಯಸ್ವಾಮಿಯವರ ಕವನಸಂಕಲನವಾಗಿದೆ. ಕೃತಿಯಲ್ಲಿ ಶಶಿಕಲಾ ವೀರಯ್ಯಸ್ವಾಮಿಯವರ ನಿವೇದನೆ ಬರಹ ಹೀಗಿದೆ: ಈ ಕಾವ್ಯ ವಾಹಿನಿಯಲ್ಲಿ ಸ್ತ್ರೀ ಸಂವೇದನೆಯು ಒಂದು ಪ್ರಧಾನ ಸೆಲೆಯಾಗಿರುವುದನ್ನು ಗಮನಿಸಬಹುದು. ಎಪ್ಪತ್ತರ ದಶಕದಲ್ಲಿ ನಾವು ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಕಾವ್ಯಕೃಷಿಯಲ್ಲಿ ತೊಡಗಿಕೊಂಡಿದ್ದೆವು. ಈಗ ಎಣಿಕೆಗೆ ಸಿಗದಷ್ಟು ಸೋದರಿಯರು ಬರೆಯುತ್ತಿರುವುದು ಸ್ವಾಗತಾರ್ಹ. ಕವಿಯ ಅಂತಃಸತ್ವವನ್ನು ಬದುಕು ಕದಲಿಸದೇ ಹೋದರೆ ಅಲ್ಲಿ ಕಾವ್ಯ ಅರಳುವುದಿಲ್ಲ. ಒಂದು ಕಾಲದಲ್ಲಿ ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೆ. ಬಂಡಾಯದ ಕವನಗಳು ಹುಟ್ಟಿದ್ದು ಹಾಗೆ. ಆದರೂ ನನ್ನ ಕಾವ್ಯದ ಸ್ಥಾಯೀಭಾವ ವಿಷಾದ ಅನ್ನಿಸಿದ್ದಿದೆ. ಅದಕ್ಕೆ ನನ್ನ ವಯುಕ್ತಿಕ ಬದುಕಿನ ಘಾತಗಳು ಕಾರಣವಾಗಿರಬಹುದು. ಜತೆಗೇ ಛಲಕ್ಕೆ ಬಿದ್ದು ಗುದ್ದಾಡುವ, ಅನಿವಾರ ಸಂಕಟಗಳನ್ನು ಸಹಿಸುವ, ಆರ್ತರ ಯಾತನೆಯಲ್ಲಿ ಪಾಲ್ಗೊಳ್ಳುವ ಒಂದು ಆಯಾಮವೂ ನನ್ನ ಕಾವ್ಯಕ್ಕೆ ಒದಗಿ ಬಂದದ್ದಿದೆ. ಬಹು ಮುಖ್ಯವಾಗಿ ನಾನು ಸ್ತ್ರೀ ವಾದಿ. ಆದರೆ ಪುರುಷದ್ವೇಷಿಯಲ್ಲ. ಸಂಯಮ ನನ್ನ ಶಕ್ತಿ ; ಜೀವನಪ್ರೀತಿ ನನ್ನ ಚೈತನ್ಯ. ಇವೆರಡೂ ನನ್ನ ಕಾವ್ಯನದಿಯ ದಡಗಳು. ಪರ್ಶಿಯನ್ ಕಾವ್ಯಲೋಕದ ಮಹಾಕವಿ, ಚಿಂತಕ, ಉಮರ ಖಯ್ಯಾಮ, ಸಿರಿಯಾ ದೇಶದ ಸುಪ್ರಸಿದ್ಧ ಕವಿ ಖಲೀಲ್ ಗಿಬ್ರಾನ ಮತ್ತು ಮಿರ್ಜಾಗಾಲಿಬ್, ವಚನಕಾರರು, ಸೂಫಿಸಂತರು ಇವರೆಲ್ಲ ನನ್ನ ಪ್ರೀತಿಯ ಕವಿಗಳು. ಬದುಕನ್ನು ಹೊಸದೃಷ್ಟಿಕೋನದಿಂದ ನೋಡಲು ಕಲಿಸಿದವರು. ಲೋಕನಿಂದಿತರನ್ನು, ದುಃಖಿತರನ್ನು, ಆರ್ತರನ್ನು ಅಪ್ಪಿಕೊಳ್ಳಲು ಕಲಿಸಿದ ಕವಿಗಳು. ಕಾವ್ಯಕ್ಕೆ ಮೂಲದ್ರವ್ಯ ಈ ಅಂತಃಕರಣ ಎಂಬುದು ನನ್ನ ಬಲವಾದ ನಂಬಿಕೆ. ಎಲ್ಲ ಕವಿಗಳ ನಂಬಿಕೆಯೂ ಹೌದು. ಆದ್ದರಿಂದಲೇ ಹೆಚ್ಚು ತುಳಿತಕ್ಕೆ ಒಳಗಾದ ಸ್ತ್ರೀ ಜಗತ್ತು ನನ್ನ ಕಾವ್ಯದ ಮೂಲಸೆಲೆ. ಆದಿಯ ಕಾಲದಲ್ಲಿ ಪ್ರಚಲಿತವಾಗಿದ್ದ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯು ಕ್ರಮೇಣ ಸುವ್ಯವಸ್ಥಿತವಾಗಿ ನಾಶವಾದ ನಂತರ ಮಹಿಳಾಲೋಕವನ್ನು ಜಗತ್ತು ತುಂಬಾ ಹೀನಾಯವಾಗಿ ನಡೆಸಿಕೊಂಡಿದೆ. ಯಾರೇ ಅಪರಾಧ ಮಾಡಿರಲಿ ಕಟಕಟೆಯಲ್ಲಿ ನಿಲ್ಲಬೇಕಾದವಳು ಹೆಣ್ಣೆ ' ಎಂಬಂಥ ಕಟುವಾಸ್ತವವನ್ನು ನಾವು ತಳ್ಳಿ ಹಾಕುವಂತೆಯೇ ಇಲ್ಲ. ಆಧುನಿಕ ಕಾಲದಲ್ಲೂ ಕೂಡ ಕೂದಲೆಳೆಯಿಂದ ಕತ್ತು ಕೊಯ್ಯುವ ನಯಗಾರಿಕೆಯನ್ನು ನಿರಂತರವಾಗಿ ಹೆಣ್ಣಿನ ಮೇಲೆ ಜಾರಿ ಇಡಲಾಗಿದೆ. ಕೌಟುಂಬಿಕ ವ್ಯವಸ್ಥೆ, ಮಾನವೀಯ ಸಂಬಂಧಗಳು ಛಿದ್ರಗೊಳ್ಳುತ್ತಿವೆ. ಕುಟುಂಬದ ಚಿತ್ರ ತೆಗೆದರೆ ಅಲ್ಲಿ 'ಗಂಡ, ಹೆಂಡತಿ, ಮಕ್ಕಳು ಅಷ್ಟೇ ಇರುತ್ತಾರೆ. ಅತ್ತೆ, ಮಾವ, ಭಾವ, ನಾದಿನಿ, ಎಲ್ಲ ಈ ಚಿತ್ರದ ಚೌಕಟ್ಟಿನ ಗೆರೆಯಾಚೆ ಇರುತ್ತಾರೆ. ಸಾಮಾಜಿಕ ಸ್ತರದಲ್ಲಿ 'ಸರ್ವೆಜನಾಃ ಸುಖಿನೋ ಭವಂತು' ಮಾಯವಾಗಿ ನಾವಿಬ್ಬರು ಅಥವಾ ನಮಗೊಬ್ಬರು ಎಂಬುದೇ ನಿಚ್ಚಳ ಸತ್ಯವಾಗಿದೆ. ಮನುಷ್ಯರ ಮಧ್ಯೆ ಪರಸ್ಪರ ಗೌರವ, ಸೌಹಾರ್ದತೆಗಳು ಕ್ಷೀಣಿಸುತ್ತಿವೆ. ಇನ್ನೊಂದೆಡೆಗೆ ರಾಜಕಾರಣದ ಅರಾಜಕತೆ, ಅಧಿಕಾರದ ಅಟ್ಟಹಾಸ, ಉಳ್ಳವರ ದೌರ್ಜನ್ಯ, ಧನಬಲದ ದುಷ್ಟತನ ಇವೆಲ್ಲಾ ಇಂದು ಸಾಮಾಜಿಕ ಬದುಕನ್ನು ಕಲುಷಿತಗೊಳಿಸಿವೆ. ಶ್ರೀ ಸಾಮಾನ್ಯನ ಬದುಕು ಕಂಗೆಟ್ಟಿದೆ. ಈ ದುಷ್ಟಶಕ್ತಿಗಳನ್ನು ಸದೆಬಡೆಯುವ ಶಕ್ತಮಾಧ್ಯಮವಾಗಿ ಕಾವ್ಯ ರೂಪುಗೊಳ್ಳಬೇಕು. ಲೋಕದಲ್ಲಿ ಜೀವನ ಪ್ರೀತಿಯನ್ನು ಹೋರಾಟದ ಮನೋಧರ್ಮವನ್ನು ಸಮಸಮವಾಗಿ ಉದ್ದೀಪಿಸುವ ತಾಕತ್ತನ್ನು ಕಾವ್ಯ ಗರ್ಭಿಕರಿಸಿಕೊಂಡಿರಬೇಕು. ಈ ನೆಲೆಯಲ್ಲಿ ನನ್ನ ಕಾವ್ಯ ಅಲ್ಪಮಟ್ಟಿಗಾದರೂ ತತ್ವರವಾಗಿದೆ ಎಂಬುದು ನನ್ನ ಸಮಾಧಾನ," ಎಂದು ಅವರು ತಿಳಿಸಿದ್ದಾರೆ. 

Related Books