ವಿನಾಯಕ ಕಾವ್ಯನಾಮದ ವಿ.ಕೆ. ಗೋಕಾಕ ಅವರ ಕವನಗಳ ಸಂಕಲನ-ದ್ಯಾವಾಪೃಥಿವೀ. ಈ ಸಂಕಲನದಲ್ಲಿ ನೀರದ ಹಾಗೂ ಇಳಾಗೀತ ಎಂಬ ಎರಡು ಪೂರಕ ಭಾಗಗಳಿವೆ. ನೆಲದಲ್ಲಿ ನಿಂತು ಆಕಾಶವನ್ನು ಕಂಡ ಪರಿ ’ನೀರದ'ದಲ್ಲಿದೆ. ಆಕಾಶದಿಂದ ನೆಲದತ್ತ ಹಾಯಿಸಿದ ದೃಷ್ಟಿ 'ಇಳಾಗೀತ'ದಲ್ಲಿ ಕಂಡು ಬರುತ್ತದೆ. ವಿನಾಯಕರ ನೋಟ 'ದ್ಯಾವಾಪೃಥಿವೀ'ಯಲ್ಲಿ ಭೂಮ್ಯಾಕಾಶಗಳನ್ನು ತಬ್ಬಿಕೊಂಡಿದೆ. ‘ನೀರದ’ದಲ್ಲಿ 598 ಸಾಲುಗಳು ಹಾಗೂ ‘ಇಳಾಗೀತ’ದಲ್ಲಿ 541 ಸಾಲುಗಳಿವೆ. ಈ ಕೃತಿಯು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದೆ.
ಈ ಕಾವ್ಯದಲ್ಲಿ, ಆಂಗ್ಲ ಕವಿ ಷೆಲ್ಲಿಯ ಕಲ್ಪನೆಯೊಂದಿಗೆ ಅರವಿಂದ ಮಹರ್ಷಿಗಳ ಯೋಗದರ್ಶನ ಸೇರಿಕೊಂಡು ತನ್ನ ಪ್ರಭಾವ ಬೀರಿರುವುದು ಸ್ಪಷ್ಟ ವಾಗುತ್ತದೆ. ಪೌರ್ವಾತ್ಯ ಪಾಶ್ಚಾತ್ಯಗಳ ಸಾಮರಸ್ಯವನ್ನು ಸಾಧಿಸುವ ಪ್ರಯತ್ನವನ್ನು 'ದ್ಯಾವಾಪೃಥಿವೀ'ಯಲ್ಲಿ ವಿನಾಯಕರು ಮಾಡಿದ್ದಾರೆ. ಈ ಕೃತಿಯ ಉದ್ದಕ್ಕೂ ಕವಿಯ ಕಲ್ಪನಾ ವಿಲಾಸ, ಚಿಂತನಪರತೆ, ಪುರಾಣ ಪರಿಜ್ಞಾನ, ಆಧ್ಯಾತ್ಮಿಕ ಶ್ರದ್ಧೆ, ವೈಜ್ಞಾನಿಕ ದೃಷ್ಟಿ-ಇವೆಲ್ಲ ವೇದ್ಯವಾಗುತ್ತದೆ.
ವರಕವಿ ದ.ರಾ. ಬೇಂದ್ರೆ ಅವರು ಕೃತಿಗೆ ಮುನ್ನುಡಿ ಬರೆದು ‘ವಿನಾಯಕರ ‘ನೀರದ’ ಬಹುರೂಪಿಯಾಗಿ ಚಿತ್ತರಂಜನೆ ಮಾಡುವನಲ್ಲದೇ, ನಾರದನಂತೆ ದಿವ್ಯ ಸಂದೇಶದ ಧ್ವನಿಯನ್ನೂ ಬಿತ್ತರಿಸುತ್ತಾನೆ. ಕಲ್ಪನೆಯ ದಾಂಗುಡಿ ಇಲ್ಲಿಯೇ ವಿರಮಿಸುವುದಿಲ್ಲ. ಚಿತ್ರಪಟದಂತೆ ಅಪೂರ್ವವಾದ ಒಂದು ಪುರಾಣ ಕಥಾ ವಿರಚನೆಯನ್ನೇ ಅದು ಕಣ್ಣೆದುರು ಕಟ್ಟಿದಂತೆ ಮಾಡುತ್ತದೆ. ‘ನೀರದ’ವು ನಮ್ಮ ಉದ್ಧಾರದ ಅಭಿಪ್ಸೆಯನ್ನು ವ್ಯಕ್ತಗೊಳಿಸಿದರೆ ‘ಇಳಾಗೀತ’ ಒಂದು ಅವತಾರದ ಸೂಚನೆಯನ್ನು ಮಾಡುವುದು. ಇಳಾಗೀತದಲ್ಲಿ ಕವಿಯು ದಶಾವತಾರಗಳ ಕಲ್ಪನೆಯನ್ನು ಬಹಳ ವ್ಯಂಜಕವಾಗಿ ಉಪಯೋಗಿಸಿದ್ದಾರೆ. ಕವಿಯ ಕೌಶಲವು ಇದನ್ನು ಬಳಸಿಕೊಂಡಿದ್ದು ಮುಖ್ಯ.‘ಇಳಾಗೀತ’ವು ‘ನೀರದ’ವನ್ನು ಪೂರ್ವಭಾವಿಯಾಗಿಟ್ಟುಕೊಂಡಿದ್ದರೂ ತನ್ನಷ್ಟಕ್ಕೆ ತಾನೇ ಆದ ಅದರ ಪೂರ್ಣತೆ ಅದಕ್ಕಿದೆ. ಆದರೂ, ‘ನೀರದ’ಕ್ಕೂ ‘ಇಳಾಗೀತ’ಕ್ಕೂ ನಂಬುಗೆಯ ಬೆನ್ನುಹುರಿಯಾಗಿ ಶ್ರೀ ಅರವಿಂದರ ಯೋಗದರ್ಶನವೂ ನಿಂತಿದೆ’ ಎಂದು ಪ್ರಶಂಸಿಸಿದ್ದಾರೆ.
1957ರಲ್ಲಿ ಧಾರವಾಡದ ಪರಾಗ ಪ್ರಕಾಶನ ಹಾಗೂ 1973ರಲ್ಲಿ ಮೈಸೂರಿನ ಸುರುಚಿ ಪ್ರಕಾಶನವು (ಪುಟ: 92, ಬೆಲೆ: 4 ರೂ.) ಈ ಕೃತಿಯನ್ನು ಪ್ರಕಟಿಸಿತ್ತು.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ- 1960
ವಿನಾಯಕರ 'ದ್ಯಾವಾ ಪೃಥಿವೀ'ಯ 'ನೀರದ' ಮತ್ತು 'ಇಳಾಗೀತ' ಎಂಬ ಎರಡು ಭಾಗಗಳಿಂದ ಕೂಡಿದ ಒಂದು ನೀಳ್ಗವಿತೆ. ಭೂ ಮತ್ತು ವ್ಯೋಮಗಳೆರಡೂ ಪರಸ್ಪರ ಪೂರಕವಾಗಿರುವ ಸೃಷ್ಟಿಯಲ್ಲಿ ಆದರ್ಶದ ಹಂಬಲದ ಮಾನವ ಉನ್ನತಿಗಾಗಿ ಮುಗಿಲ ಲೋಕದ ಬೆನ್ನನ್ನೇರಿದರೂ ಗೆಲುವಿನ ಸತ್ಯ - ಸತ್ತ್ವಗಳಿಗೆ ಭೂಮಿಯೇ ನೆಲೆ - ಎಂಬ ಚಿಂತನೆ ಈ ಕವನದ ವಸ್ತು. ನೆಲದ ಮೇಲೆ ನಿಂತು ಆಕಾಶದತ್ತ ಎಸೆದ ನೋಟ ಆದರ್ಶೋನ್ಮುಖವಾದರೂ ಭೂಭಾವಗೀತವನ್ನು ತಿಳಿಯಲು ಹೊರಡುವ ಪ್ರಜ್ಞೆಯು ಅವರೋಹಣ ಮುಖವಾಗಿ ವಾಸ್ತವ ಪ್ರಪಂಚಕ್ಕೆ ಒಲಿಯುತ್ತದೆ. ಕವನದ ಒಡಲಲ್ಲಿ ಮನುಷ್ಯನ ನೈತಿಕ ವಿಕೃತಿಯ ಫಲವಾಗಿ ಹುಟ್ಟುವ ಅರ್ಧಮರ್ಧ ದರ್ಶನಗಳು ಪರಿಪೂರ್ಣತೆ ಪಡೆಯಲು ದಾರಿಗಳಲ್ಲ, -ನೆಲದಲ್ಲಿಯೇ 'ಗತ'ವನ್ನು ಶೋಧಿಸಲು ಪ್ರೇರಣೆ ದೊರೆಯುವ ಸಂಗತಿಯ ಪುರಾಣವೊಂದನ್ನು ಸೃಜಿಸಲಾಗಿದ್ದು, ಅದು ಮನುಷ್ಯನ ಅಧಃಪತನ ಮತ್ತು ನಿರಂತರ ಕರ್ಮಗಳ ಪ್ರತೀಕವಾಗಿ ಮೂಡಿದೆ.
ಕವನವು ವಿಸ್ಮಯತೆಯಿಂದ ಕೂಡಿದ ಮೋಡದ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಗಾಳಿ ಗುರಬ ತರುಬಿದುಣ್ಣೆ ಕುರಿಮರಿಗಳ ಕುರಿ ಹಿಂಡು ಮತ್ತು ಮತ್ತಗಜ 'ಸಮೂಹ' ಎಂಬ ಮೋಡದ ಸಮೂಹ ಕಲ್ಪನೆಯು ಬದಲಾಗಿ ವ್ಯಕ್ತಿಯಾಗುತ್ತದೆ. ಕವಿಯ 'ಪುರಾಣ ಸ್ಮರಣೆಗಳಿಂದ ಉದ್ದೀಪನಗೊಂಡ' ಪೌರಾಣಿಕ ಪ್ರತಿಮೆಗಳು ಸಾಲುಸಾಲಾಗಿ ರೂಪುಗೊಳ್ಳುತ್ತವೆ.
ಮುಂದೆ– ಮೋಡಕ್ಕೆ : 'ಊರ್ಧ್ವತೆ - ಚಲನ - ಧಾರಣ- ಅವತರಣ'ದ ನಾರದ ಸತ್ತ್ವವೂ, ಮಾನವ ಬದುಕಿನ ಒಳಿತು ಕೆಡಕುಗಳ, ರಸ - ವಿರಸಗಳ ಸಂಕೀರ್ಣತೆಯೂ ಪ್ರಾಪ್ತವಾಗುತ್ತದೆ. ಒಳಿತಿನ ಬಯಕೆ ಮತ್ತು ಕೆಡುಕಿನ - ನಾಶದ ಆಶಯದ ಫಲವಾಗಿ ಇಂದ್ರನ ಹುಟ್ಟು : ಆ ಪರಿಣಾಮವಾಗಿ ನವಮಾನವ ಸೂನು ಇಕ್ಷುವಿನ ಜನನ. ಇಕ್ಷು ಮುಂದೆ 'ಇಳಾಗೀತ'ದ ನಾಯಕನಾಗಿ ರೂಪುಗೊಂಡು ಆಕಾಶದಿಂದ ಭೂಮಿಯ ಕಡೆಗೆ ನೋಟ ಬೀರುತ್ತಾನೆ. ಸೃಷ್ಟಿಯ ಆದಿಯ ಸ್ಥಿತಿ, ಮನುಕುಲದ ಉಗಮ, ಬೆಳವಣಿಗೆ, ವೈಜ್ಞಾನಿಕ ಯುಗದ ಮೌಲ್ಯದ ಅಧಃಪತನ, ವ್ಯರ್ಥ ಬದುಕುಗಳ ನೈರಾಶ್ಯ ಸ್ಥಿತಿಯಿಂದಲೇ ವಿಶ್ವಮಾನವ - ಕುಟುಂಬ ಧೋರಣೆ ಮೂಡಿ ಬರುವ ಆಶಯ ವ್ಯಕ್ತವಾಗುತ್ತದೆ.
ವಿನಾಯಕರ ಕಾವ್ಯಭಾಷೆ ನವೋದಯ ಕಾಲದ ಸಂಸ್ಕೃತಮಯ ಕನ್ನಡ. ಈ ಪ್ರೌಢಭಾಷೆಯು ಕೆಲವೊಮ್ಮೆ ಗದ್ಯವಾಗಿ ನೀರಸವಾಗುವುದಾದರೂ ಕವನದಲ್ಲಿ ಸರಳ ಸುಂದರ ಭಾಷಾಪ್ರಯೋಗಗಳಿಗೇನೂ ಕೊರತೆಯಿಲ್ಲ :
“ಇಲ್ಲ ಗೋಪಿಯರಿಲ್ಲಿ, ಇಲ್ಲ, ಶ್ರೀಕೃಷ್ಣನಿಲ್ಲ!
ಓಡಿದರೆ ಎಲ್ಲಿಗೋಟ !
ದುಕೂಲಗಳು ಮಾತ್ರ ಬಿಸಿಲಿನಲ್ಲಿ ಕಂಗೊಳಿಸಿವೆ:
ಬೃಂದಾವನದೀ ನೋಟ !”
ಕವನದ ಹೇರಳ ಪ್ರತಿಮೆ ಮತ್ತು ಉಪಮೆಗಳಲ್ಲಿ ಅಸ್ಪಷ್ಟತೆ ಸುಳಿದಿಲ್ಲ. ಕೆಲವಡೆ ಭಾಷೆಯ ಶಿಥಿಲ ಬಳಕೆಯಿಂದಾಗಿ ಪ್ರತಿಮೆಗಳು ಜಾಳಾಗುತ್ತವಾದರೂ ಬಿಗಿಯಾದ ಚಿತ್ರಗಳು ವಿಗ್ರಹದಂತೆ ಮೂರ್ತವಾಗುತ್ತವೆ. ಉದಾಹರಣೆಗೆ 'ಇಳೆಯ ದೇಗುಲಕೆ ಗುಮ್ಮಟದಂತಿದ ಗಗನಾಂಗಣ' ಎಂಬ ಭವ್ಯ ಮೂರ್ತ ಚಿತ್ರವನ್ನು ಗಮನಿಸಬಹುದು. ಹೊರ ಸಂರಚನೆ ಮತ್ತು ಪ್ರತಿಮಾ ಸೃಷ್ಟಿಯ ದೃಷ್ಟಿಯಿಂದ ಕವನದ ತಂತ್ರ 'ನವ್ಯ'. ಅನುಭವ ಮತ್ತು ಧೋರಣೆಗಳ ಅಭಿವ್ಯಕ್ತಿ ಕ್ರಮ 'ರೊಮಾಂಟಿಕ್". ಈ ಎರಡರ ಮೇಳನ ಈ ಕವನದ ವಿಶಿಷ್ಟತೆಯಾಗಿದೆ. ವಿನಾಯಕರ ಕಲ್ಪನೆಯ ವಿಸ್ಮಯ, ಅಭಿವ್ಯಕ್ತಿ ಮತ್ತು ನೆಲ-ಆಕಾಶಗಳನ್ನು ಕುರಿತ ಹೊಸ ಸಂವೇದನೆ ಮತ್ತು ನವೀನ ದೃಷ್ಟಿಗಳು ಶೆಲ್ಲಿಯ ಕಾವ್ಯ ಚಿಂತನೆಯಿಂದ ಪ್ರೇರಿತವಾದವುಗಳಾಗಿವೆ. ಕವನದಲ್ಲಿಯ ವಿಸ್ಮಯತೆ, ಪಯಣದ ಕಲ್ಪನೆ, ಒಳತಿನ ಆಶಯ, ಇಂದ್ರನ ಬೋಧೆ, ಆಧುನಿಕ ನಗರಗಳ ರಮ್ಯ ಚಿತ್ರಣಗಳು - ರೊಮ್ಯಾಂಟಿಕ್ ಚಿತ್ತವೃತ್ತಿಯ ಫಲಗಳೇ ಆಗಿವೆ. ಅಲ್ಲದೆ ವಿನಾಯಕರ ವಿಶ್ವಮಾನವತಾವಾದವು ಕವನದ ಆಶಯಕ್ಕೆ ಪೂರಕವಾಗಿದೆ.
'ದ್ಯಾವಾಪೃಥಿವಿ'ಯು ಅತ್ಯಂತ ಗಂಭೀರವಾದ ವಿಮರ್ಶೆ ಮತ್ತು ಚರ್ಚೆಗಳನ್ನು ನಿರೀಕ್ಷಿಸುವ ವಿನಾಯಕರ ಕವನಗಳಲ್ಲೊಂದಾಗಿದೆ.
- ಜೆ ಎನ್ ಶಾಮರಾವ್
ದ್ಯಾವಾ ಪೃಥಿವೀ (ನೀಳ್ಗವನ)
ಮೊದಲನೆಯ ಆವೃತ್ತಿ, 1957 ಪರಾಗ ಪ್ರಕಾಶನ ಧಾರವಾಡ
92 ಪುಟ-92, ಬೆಲೆ 3:50ರೂ.