ಕವಿ ಮಂಡಲಗಿರಿ ಪ್ರಸನ್ನ ಅವರ ಕವನ ಸಂಕಲನ-ನಿನ್ನಂತಾಗಬೇಕು ಬುದ್ಧ ಮತ್ತು ಇತರೆ ಕವಿತೆಗಳು. ಸಂಕಲನದಲ್ಲಿ ಒಟ್ಟು 52 ಕವಿತೆಗಳಿವೆ. ಇಲ್ಲಿಯ ಬಹುತೇಕ ಕವಿತೆಗಳು ಬುದ್ಧನಿಂದ ಆರಂಭಗೊಂಡು ಬಸವಣ್ಣನ ಸಂದೇಶದ ಪ್ರಭಾವದ ಮೂಲಕ ಡಾ. ಅಂಬೇಡ್ಕರರ ತತ್ವಸಿದ್ಧಾಂತಗಳಲ್ಲಿ ಸ್ಪೂರ್ತಿಗೊಂಡು ಮುಕ್ತಾಯಗೊಳ್ಳುತ್ತವೆ. ಆದ್ದರಿಂದ, ನಿನ್ನಂತಾಗಬೇಕು ಬುದ್ಧ’ ಎಂಬುದು ಕೃತಿಯ ಶೀರ್ಷಿಕೆಯಾಯಿತು ಎಂದು ಕವಿಗಳು ಹೇಳಿದ್ದಾರೆ.
ಬುದ್ಧನನ್ನು ತಮ್ಮ ಕಾವ್ಯದ ಜೀವಾಳವಾಗಿರಿಸಿಕೊಂಡಿದ್ದು ಏಕೆ ಎಂಬುದನ್ನು ಸಹ ಕವಿಗಳು ಕವನದ ಸಾಲುಗಳ ಮೂಲಕ ಹೀಗೆ ಹೇಳುತ್ತಾರೆ; ನಮ್ಮೊಳಗಿನ ಸಾವಿಗೆ ಅಂಜದೇ..., ಅನ್ಯಾಯಕ್ಕೆ ಎದೆ ಕೊಟ್ಟು.... ನಿಂತು ಬಂದುದನೆದುರಿಸಲು.. ಲೋಕದ ಕಣ್ಣು ತೆರೆಸಲು..ನಿನ್ನಂತಾಗಬೇಕು ಬುದ್ಧ’ ಎಂದು ಆಶಿಸುತ್ತಾರೆ. ಇದೇ ರೀತಿಯ ಆಶಯವು ಬಸವಣ್ಣ ಹಾಗೂ ಡಾ. ಅಂಬೇಡ್ಕರ್ ಅವರ ಜೀವನ ತತ್ವದಿಂದ ಪ್ರೇರಣೆ ಪಡೆದು ಹೆಣೆದ ಕವಿತೆಗಳಾಗಿವೆ.
ತಾವು ಕಂಡ ಪ್ರವಾಸ ಸ್ಥಳಗಳನ್ನು ಅವಿಸ್ಮರಣೀಯ ಅನುಭವಗಳಾಗಿಸುವ ಹಿನ್ನೆಲೆಯಲ್ಲಿ ‘ತ್ರಿಚಿ ಮಲಗುವುದಿಲ್ಲ’ ‘ಲಾಡ್ಜಿನ ಹುಡುಗ’ ವಿಶಾಖಪಟ್ಟಣದ ಒಂದು ಬೀಚಿನಲ್ಲಿ’ ಇತರೆ ಕವಿತೆಗಳು ಮೂಡಿ ಬಂದಿವೆ. ಕಾವ್ಯವಾದವಳು, ಮಗ ಬಿಡಿಸಿದ ಚಿತ್ರಗಳು, ಸೊಳ್ಳೆ ಮತ್ತು ನಾನು ಹೀಗೆ ಇತರೆ ಕವಿತೆಗಳು ವಸ್ತು ವೈವಿಧ್ಯತೆಯಿಂದ, ಶೈಲಿಯಿಂದ ಗಮನ ಸೆಳೆಯುವ ಕವಿತೆಗಳಾಗಿವೆ.
ರಂಗಭೂಮಿ, ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಒಲವು ಇರುವ ಮಂಡಲಗಿರಿ ಪ್ರಸನ್ನ 1963 ರ ಅಕ್ಟೋಬರ್ 18 ರಂದು ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಜನಿಸಿದರು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ಕನಸು ಅರಳುವ ಆಸೆ (2000), ಅಮ್ಮ ರೆಕ್ಕೆ ಹಚ್ಚು (2003), ನಿನ್ನಂತಾಗಬೇಕು ಬುದ್ಧ (2016) - ಕವನ ಸಂಕಲನ. ‘ಏಳು ಮಕ್ಕಳ ನಾಟಕಗಳು’ (2016) - ಮಕ್ಕಳ ನಾಟಕಗಳು. ಪದರಗಲ್ಲು, ಕವಿರಾಜ - ಸ್ಮರಣೆ ಸಂಚಿಕೆ ಸಂಪಾದಿತ ಕೃತಿಗಳು. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ಧಾರೆ. ಅವರ ...
READ MORE