ಗರ್ಭಗುಡಿ

Author : ಮದನ ಕುಮಾರ

Pages 106

₹ 150.00




Year of Publication: 2023
Published by: ಸ್ವ ಪ್ರಕಾಶನ
Address: ಬಿಳಿಜಗಲಿ ಮೋಳೆ
Phone: 8660647720

Synopsys

"ಗರ್ಭಗುಡಿ" ಕವನ ಸಂಕಲನ ಶೀರ್ಷಿಕೆಯೇ ಹೇಳುವಂತೆ ಇದು ಹೆತ್ತವಳ, ಹೊತ್ತವಳ, ಹಾಗೂ ಹೆಣ್ಣಿನ ಬಗೆಗಿನ ಭಾವಗಳ ಹೊತ್ತ ಕವಿತೆಗಳ ಗುಚ್ಛವಾಗಿದೆ. ಕೃತಿಯ ಕುರಿತು ಬರೆದಿರುವ ಕನ್ನಡ ಪ್ರಾಧ್ಯಾಪಕರಾದ ಪ್ರೊ ಶಿವನಂಜಯ್ಯ ಅವರು 'ಯುವ ಮನಸ್ಸಿನ ಮೌನ ಮಾತಾದಾಗ, ಮಾತು ಬರಹವಾಗುತ್ತದೆ, ಪದ ಪುಂಜವಾಗುತ್ತದೆ, ಮನದ ಭಾವನೆ ಕಟ್ಟೆಯೊಡೆದು ಸಾಲುಗಳಾಗುತ್ತವೆ ಆ ಸಾಲುಗಳ ರೂಪವೇ ಈ "ಗರ್ಭಗುಡಿ" ಕವನ ಸಂಕಲನ. ನಾರಿಯರ ಹೆಣ್ಣನದ ತುಮುಲಗಳು, ಅವರ ನೋವುಗಳು ಪ್ರಸ್ತುತ ಜಗದಲ್ಲಿ ನಡೆದಿರುವ ಶೋಷಣೆಗಳನ್ನ ಯುವಕವಿ ಮದನ್ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಕವನಗಳ ಜೊತೆ ಮಾತನಾಡಿದಾಗ ಪ್ರಕೃತಿ, ಹೆಣ್ಣನ, ಶೋಷಣೆ, ನೇರನುಡಿ ಇವುಗಳು ನನ್ನೊಂದಿಗೆ ಮುಕ್ತವಾಗಿ ಮಾತನಾಡಿದವು. ಇಲ್ಲಿನ ಕೆಲವು ಕವಿತೆಗಳು ಕೂಡ ಒಬ್ಬೊಬ್ಬರ ಜೊತೆ ಅವರದೇ ಭಾವವಾಗಿ ಮಾತನಾಡಬಹುದು ಎಂದು ನಾನು ಊಹಿಸಿದ್ದೇನೆ' ಎಂದಿದ್ದಾರೆ. 

About the Author

ಮದನ ಕುಮಾರ

ಲೇಖಕ ಮದನ ಕುಮಾರ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಿಳಿಜಗಲಿಮೋಳೆ ಗ್ರಾಮದವರು. ತಂದೆ ರಾಮಶೆಟ್ಟಿ ತಾಯಿ ಸುಧಾ. ‘ಬಿರಾಸುಮಕು’ ಇವರ ಕಾವ್ಯನಾಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆ ಸರಗೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ವಿಜಯನಗರದ ಸರ್ಕಾರಿ ಪ್ರ ದರ್ಜೆ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು. ನಂತರ ಅವರು ಬಿಪಿಎಡ್ ಪದವೀಧರರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ‘ಒಲವಿನ ಕವಿತೆ’ ಇವರ ಚೊಚ್ಚಲ ಕೃತಿ. ...

READ MORE

Reviews

ʼಗರ್ಭ ಗುಡಿʼಸಂಕಲನದಲ್ಲಿ ಒಟ್ಟು ಐವತ್ತಾರು ಕವಿತೆಗಳಿವೆ. ಕವಿ ಮನಸ್ಸು ಎಂದಿಗೂ ಭಾವನಾ ವಲಯದಿಂದ ತಪ್ಪಿಸಿಕೊಳ್ಳಲಾರದು. ಭಾವನೆಗಳೇ ಬತ್ತಿ ಹೋದರೆ ಕವಿ ಹೇಗಾದಾನು.? ಒಲವಿನ ಕವಿತೆಯ ಸಂಕಲನದ ಭಾವ ಗರ್ಭಗುಡಿಯಲ್ಲೂ ಸಹಜವಾಗಿಯೇ ಪ್ರತಿಧ್ವನಿಸಿದೆ. ಆದರೆ ಇದಲ್ಲಿ ಅದು ತನ್ನ ವಸ್ತು ವೈವಿಧ್ಯತೆಗಳಿಂದಾಗಿ ಓದುಗರ ಗಮನವನ್ನು ಸೆಳೆಯುತ್ತದೆ. ಒಬ್ಬ ಕವಿಯ ಸಹಜ ಬೆಳವಣಿಗೆಯ ಹಾದಿಯಲ್ಲಿ ಇಂತಹ ಭಾವ ವಿಸ್ತಾರ ಬಹಳ ಮುಖ್ಯವಾದದ್ದು. ಮದನ್ ಕುಮಾರ‌ ಸಹಜ ಕವಿಯಾದುದರಿಂದಲೇ ಅವರಿಗೆ ಈ ವಿಸ್ತಾರ ದಕ್ಕುತ್ತಿದೆ. ಆದುದರಿಂದಲೇ ʼಗರ್ಭದಿಂದ ನಾ ಬರುವ ಸಮಯ” ಕವಿತೆಯ ಒಂದು ಸಾಲು ತಟ್ಟನೆ ನನ್ನ ಗಮನ ಸೆಳೆಯಿತು.
            “ ನೀ ಚೀರಿದಾಗ ನಾ ಮೌನವಾಗಿದ್ದೆ
              ನಾ ಚೀರಿದಾಗ ನೀ ಸಂತೋಷಗೊಂಡೆ:
ಎನ್ನುವ ಮಾತುಗಳು ಕವಿಯಾಗಿ ಮದನ್ ಕುಮಾರ‌ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಮಾತು ಮತ್ತು ಮೌನಗಳ ನಡುವಣ ಅಂತರ ತಿಳಿದವನೇ ನಿಜವಾದ ಕವಿ ಆಗಬಲ್ಲ. ಆದುದರಿಂದಲೇ ಅಮ್ಮನ ಪ್ರೀತಿಯನ್ನು ಅವರು ಕವಿತೆಯಾಗಿಸುತ್ತಾ “ನೋವಲ್ಲೂ ನಗಿಸುವ ಲಾಲಿಸುವ ಗುರು ಅಂದ್ರೆ ತಾಯಿ” ಎನ್ನುತ್ತಾರೆ. ಈ ಮೊದಲೆಲ್ಲಾ ಪ್ರೀತಿ ಎಂದರೆ ಅದು ಗಂಡು ಹೆಣ್ಣಿನ ನಡುವಣ ಪ್ರಣಯ ಸಂಬಂಧಕ್ಕೆ ಮೀಸಲಿದ್ದ ಕವಿಯ ಭಾವ ಈ ಸಂಕಲನದಲ್ಲಿ ಅದರ ಅರ್ಥವಿಸ್ತಾರವಾಗುತ್ತಾ ಭಾಷೆ, ಸಂಸ್ಕೃತಿ, ಗೆಳೆತನ, ತಾಯಿಯ ಕಡೆಗೂ ಗಮನ  ಹರಿಸುತ್ತಿದೆ ಎಂಬುದನ್ನು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕು. “ಗರ್ಭಗುಡಿ – ಎಲ್ಲಾ ಸೃಷ್ಟಿಯ ಮೂಲ “ ಎಂಬ ಆಶಯವೇ ಕವಿಯ ಮನಸ್ಸು ಕೆಲಸ ಮಾಡುತ್ತಿರುವ ಬಗೆಯ ದಿಕ್ಸೂಚಿಯಾಗಿದೆ.. ಆದುದರಿಂದಲೇ  “ಉಯ್ಯಾಲೆ ಮೇಲೆ ಮಲಗವಳೇ ಬಾಲೆ” ಎನ್ನುವ ಶಕ್ತ ಪದಪುಂಜವನ್ನು ಇಡಲು ಇವರಿಗೆ ಸಾಧ್ಯವಾಗಿದೆ.. ಇದರ ನಡುವೆಯೇ           
                 “ಹುಟ್ಟಿದ ಲೋಕವೇ ಬೇರೇ
                  ಹುಟ್ಟು ಕೊಟ್ಟ ನಂತರದ ಜಗವೇ ಬೇರೆ”
ಎನ್ನುವ ಬದುಕಿನ ಕಟು ವಾಸ್ತವದ ಕಡೆಗೂ ಕವಿ ಮನಸ್ಸು ಚಿಂತಿಸುತ್ತದೆ. ಆದುದರಿಂದಲೇ “ನನ್ನಾಕಿ” ಕವಿತೆಯಲ್ಲಿ “ ನೀ ಹಿಂಗ್ಯಾಕೆ ಅಳ್ತಿ? ನಾ ಏನಾರಾ ಕೇಳಿನಾ? ನಾ ನಿನ್ನ ಕಷ್ಟ ನೋಡೀನೇ ಬಂದಾಕಿ ಅದಕ್ಯಾಕೆ ನೀ ಅಳ್ತಿ?” ಎನ್ನುವ ಪ್ರಶ್ನೆಯನ್ನು ಜೀವನ ಸಂಗಾತಿ ಕೇಳುವಂತೆ ಮಾಡುತ್ತಾರೆ. “ಕಲ್ಲಾದದ್ದು ಅಹಲ್ಯೆ ಅಲ್ಲ, ಅವಳ ಮನಸ್ಸು ಅನ್ನುವುದು ಕವಿಯ ಕಲ್ಪನೆ” ಎನ್ನುವ ಮಾತುಗಳು ಅಹಲ್ಯೆಯ ಬಗ್ಗೆ ಇನ್ನೊಂದು ದಿಕ್ಕಿನಿಂದ ಆಲೋಚಿಸುವಂತೆ ಮಾಡುತ್ತದೆ. ಆದುದರಿಂದಲೇ ಶಾಪವನ್ನೂ ವರವಾಗಿ ನೋಡಬಲ್ಲ ಶಕ್ತಿ ಅಹಲ್ಯೆಗೆ ಉಂಟಾಯಿತು ಎನ್ನುವುದು ಕವಿಯ ಕಾಣ್ಕೆ. “ಭಗವಂತನ ದರ್ಶನಕ್ಕೆ ದಾರಿ ಮಾಡಿಕೊಟ್ಟ ನನ್ನ ಪತಿಗೆ ವಂದಿಸುವೆ” ಎನ್ನುವುದು ಬಾಳ ಬುತ್ತಿಯಲಿ ಪಕ್ವವಾದ ಮನಸ್ಸು ಮಾತ್ರಾ ಹೇಳಲು ಸಾಧ್ಯ. ಇಂತಹ ಸುಂದರವಾದ ಹಲವಾರು ಪಂಕ್ತಿಗಳು ಹಲವಾರು ಕವಿತೆಗಳಲ್ಲಿ ಕಂಡು ಬರುತ್ತದೆ. “ಅವಳು ಹಿರಿಯ ಮಗಳು” ಎಂಬ ಕವಿತೆ ತನ್ನ ವಸ್ತು ಸ್ವರೂಪದಿಂದಾಗಿ ಓದುಗರ ಗಮನವನ್ನು ಸೆಳೆಯುತ್ತದೆ

ತಂಗೆಮ್ಮಳನ್ನೂ ತಾಯಿಯ ಹಾಗೆ ಕಾಣಬಲ್ಲ ಕವಿ ಹೃದಯದ ಕೋಮಲತೆಗೆ “ತಂಗೆಮ್ಮ” ಕವಿತೆ ಸಾಕ್ಷಿಯಾಗಿ ನಿಂತಿದೆ. ʼಸುಂದರ ಶೂರ್ಪಣಕಿʼ ಎಂಬ ನುಡಿಗಟ್ಟು ಓದುಗನನ್ನು ತಟ್ಟನೆ ಸೆಳೆಯುತ್ತದೆ. “ನಿನ್ನ ನಗುವಿಗೆ ನಾ ಕಾವಲಮ್ಮ” ಎನ್ನುವಲ್ಲಿ ತನ್ನ ತಂಗಿಯ ಕುರಿತಾದ ಕಾಳಜಿ ವ್ಯಕ್ತವಾಗುತ್ತದೆ. “ಹೆತ್ತದ್ದು ಹೆಣ್ಣನಷ್ಟೇ ಅಲ್ಲ” ಎಂಬ ಕವಿತೆಯಲ್ಲಿ ಬರುವ ಮಾತನ್ನು ಗಮನಿಸಿ “ ನಾ ಹೆತ್ತದ್ದು ಮಗಳನ್ನು ನನ್ನ ನಗುವನ್ನು ನನ್ನದೇ ಕಣ್ಣನ್ನು” ಎಂಬಲ್ಲಿ ಹೆಣ್ಣಿನ ಕುರಿತಾದ ಭಾವಕೋಶದ ವ್ಯಪ್ತಿಯನ್ನು ಗಮನಿಸಬೇಕು.  ಆದುದರಿಂದಲೇ ತಾನು ಹೆತ್ತದ್ದು ಬರಿಯ ಮಗಳನ್ನು ಅಲ್ಲ, ಬದಲಿಗೆ ಮನೆಯ ಕಣ್ಣನ್ನು ಎಂಬ ನುಡಿ ಅಯಾಚಿತವಾಗಿ ಬರುತ್ತದೆ. ಮಗಳ ಕುರಿತಾದ ಕವಿಯ ಭಾವ ಅತ್ಯಂತ ಮೃದುವಾದದ್ದು. ಕಿರುಬೆರಳ ಹಿಡಿದು ಕಿರುನಗೆಯ ತರುವ ಮಗುವಿನ ಮೇಲೆ ಮಮತೆಯ ಮಹಾಪೂರವೇ ಹರಿದಿದೆ. ಕಾಡುವ ಮೌನದ ನೋವು ಅವರ “ಕೂಗು” ಕವಿತೆಯಲ್ಲಿ ಅಭಿವ್ಯಕ್ತವಾಗುತ್ತದೆ.

ಈ ಸಂಕಲನದ ಉದ್ದಕ್ಕೂ ಕಂಡುಬರುವುದು ಪ್ರೀತಿಯ ನಾನಾ ಸ್ವರೂಪಗಳು. ಆ ಪ್ರೀತಿಯ ಮೂಲ ಒಂದು ಹೆಣ್ಣೇ ಆಗಿರುತ್ತಾಳೆ. ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಬೀದಿ ಬದಿಯ ವೇಶ್ಯೆಯಾಗಿ,  ಮಗುವಾಗಿ – ಹೀಗೆ ಪ್ರೀತಿಯ ಹಲವು ಮುಖಗಳನ್ನು ತಮ್ಮ  ಸಂಕಲನದ ಉದ್ದಕ್ಕೂ ಬಿರಾಸುಮಕು ತೆರೆದಿಡುತ್ತಾ ಹೋಗುತ್ತಾರೆ. ಬಹುಷಃ ಕವಿಯ ಬದುಕು ಪ್ರೀತಿಯ ಸೆಲೆಯಲ್ಲಿಯೇ ಮುಳುಗಿ ಹೋಗುತ್ತದೆ. ಈ ಎಲ್ಲಾ ಕವಿತೆಗಳ ವಸ್ತು ಮೇಲ್ನೋಟಕ್ಕೆ ಬೇರೇ ಬೇರೇ ಆಗಿ ಕಂಡರೂ ಅದು ಧ್ವನಿಸುವ ಭಾವ ಕೇವಲ ಪ್ರೀತಿ ಮಾತ್ರ. ಇದು ಈ ಸಂಕಲನದ ಶಕ್ತಿಯೂ ಆಗಿರುವಂತೆ ಅದರ ಮಿತಿಯೂ ಆಗಿಬಿಡುವ ಅಪಾಯ ಇದೆ.

ಕವಿಯ ಮನಸ್ಸು ಬರಿಯ ಅಭಿವ್ಯಕ್ತಿಯಿಂದ ಮಾತ್ರಾ ತೃಪ್ತಿಯನ್ನು ಕಾಣುವುದಿಲ್ಲ. ಅದಕ್ಕೆ ಸಹೃದಯರ ಪ್ರೀತಿಯ ಆಸರೆಯೂ ಬೇಕು. ತರುಣ ಕವಿಯ “ಗರ್ಭಗುಡಿ” ಸಂಕಲನವನ್ನು ಓದುಗರು ಪ್ರೀತಿಯಿಂದ ಸ್ವಾಗತಿಸಲಿ ಎಂಬ ಆಶಯದೊಂದಿಗೆ ಬಿರಾಸುಮಕು ಅವರಿಗೆ ನನ್ನ ಶುಭಾಶಯ ತಿಳಿಸುತ್ತೇನೆ ಶುಭವಾಗಲಿ...

ಪ್ರೊ.ಎಸ್.ಪಿ. ಅಜಿತ್ ಪ್ರಸಾದ್
ನಿವೃತ್ತ ಉಪ ಪ್ರಾಂಶುಪಾಲರು,
ಕನ್ನಡ ಪ್ರಾಧ್ಯಾಪಕರು
'ಗಂಧಕುಟಿ', ಜೈನಪೇಟೆ
ಮೂಡುಬಿದಿರೆ- ೫೭೪೨೨೭

Related Books