ಈ ಕವನ ಸಂಕಲನದ ಪ್ರತಿಯೊಂದು ಕವನವೂ ಒಂದು ಘಟನೆಯ ಅಥವಾ ಸನ್ನಿವೇಶದ ಕಥನವಾಗಿದೆ. ಬಹುಮಟ್ಟಿನ ಕವಿತೆಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುವ ವಿವೇಕ, ಸಹಜವಾದ ಅನುಕಂಪ. ಸಂಕಲನದ ಕಡೆಯಲ್ಲಿರುವ 'ಋತುವೈಭವ' ಒಂದು ಸೊಗಸಾದ ಗೀತಗುಚ್ಛ. ಇದು ವರ್ಷದ ಆರೂ ಋತುಗಳ ಮನೋಹರವಾದ ಚಿತ್ರ. ಭಾವಗೀತಾತ್ಮಕವಾದ ಋತುವೈಭವದ ಕವಿತೆಗಳಿಂದ ಮತ್ತು ಇಡಿಯ ಕವನವೇ ಅಖಂಡ ಪ್ರತಿಮೆಯಾಗಿ ಪರಿಣಮಿಸುವ ಹೊಸಬಗೆಯ ಕವನಶಿಲ್ಪಗಳಿಂದ ಕೂಡಿದೆ.
ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ-1977
’ತೆರೆದ ಬಾಗಿಲು' ನರಸಿಂಹಸ್ವಾಮಿಯವರ ಕವನ ಸಂಕಲನ. ಹದಿನಾರು ಕವನಗಳಿರುವ ಈ ಕೃತಿ ಅವರ ಹಿಂದಿನ ಸಂಕಲನವಾದ 'ಮನೆಯಿಂದ ಮನೆಗೆ' ಪ್ರಕಟವಾದ ಹದಿನಾರು ವರುಷಗಳ ಅನಂತರ ಹೊರಬಂದಿತು. 'ಈ ಸಂಕಲನ ನರಸಿಂಹಸ್ವಾಮಿಯವರ ಕಾವ್ಯಜೀವನದಲ್ಲಿ ಮತ್ತೊಂದು ಹೊಸಘಟ್ಟ. ತನ್ನ ಕಾಲದಲ್ಲಿ ನಡೆದ ಕಾವ್ಯ ಕ್ರಾಂತಿಗಳಲ್ಲಿ ಪಾಲುಗೊಳ್ಳುತ್ತ, ಜೊತೆಗೆ ಅವುಗಳನ್ನು ಮೀರುತ್ತ, ಬದಲುತ್ತ, ಉದ್ದಕ್ಕೂ ಹೊಸಬನಾಗುತ್ತ ನಡೆದ ಯೇಟ್ಸ್ ಕವಿಯ ಕಾವ್ಯಜೀವನವನ್ನು ನೆನಪಿಸುವಂತೆ ಕೆ. ಎಸ್. ನ. ತಮ್ಮ ಕಾವ್ಯಪಥದಲ್ಲಿ ಎಲ್ಲೂ ತಡೆದು ನಿಲ್ಲದೆ ಒಂದೊಂದೇ ಹಂತವೇರುತ್ತ ಸಾಗಿದ್ದಾರೆ; ತಮ್ಮ ಕಾವ್ಯವನ್ನು ಹಸಿರಾಗಿ ಉಳಿಸಿಕೊಂಡಿದ್ದಾರೆ. ನೆನೆದ ಗಳಿಗೆಯಲ್ಲಿ ಸೊಗಸಾದ ಚಿತ್ರಗಳನ್ನು ಪಡೆಯುವ ಶಕ್ತಿಯುಳ್ಳ ಕವಿ ಕೆ. ಎಸ್. ನ 'ತೆರದ ಬಾಗಿಲು' ಸಂಗ್ರಹದಲ್ಲಿ ಕವಿ ಈ ಚಿತ್ರಗಾರಿಕೆಯನ್ನು ಆಶ್ಚರ್ಯಕರವೆನ್ನಿಸುವ ಮಟ್ಟಿಗೆ ಬಿಟ್ಟುಕೊಟ್ಟಿದ್ದಾರೆ. ಮಾತ್ರವಲ್ಲ, ಮಾತಿನ ಅಲ೦ಕಾರಿಕ ಬಳಕೆಯನ್ನೇ ಹಟದಿಂದ ಎಂಬಂತೆ ನಿವಾರಿಸಿಕೊಂಡಿದ್ದಾರೆ. ಇಲ್ಲಿಯ ಕವಿತೆಗಳು ಕವಿ ತನ್ನ ಸ್ವಭಾವದ ವಿರುದ್ಧವೇ ಯುದ್ಧ ಹೂಡಿ ಗೆದ್ದ ಕುರುತಾಗಿವೆ. ಎಲ್ಲ ಕವನಗಳಲ್ಲೂ ನಿರಲಂಕಾರವಾದ, ದಿನನಿತ್ಯದ ಮಾತಿಗೆ ಇಷ್ಟೂ ಹೊರತಾಗದ ಸರಳ ಭಾಷೆಯ ಬಳಕೆಯಿದೆ. 'ತೆರೆದ ಬಾಗಿಲು' ಎಂಬ ಈ ಸಂಕಲನದ ಅತ್ಯುತ್ತಮ ಕವಿತೆಯಾಗಿದ್ದು ಸಂಗ್ರಹಕ್ಕೆ ಶೀರ್ಷಿಕೆಯೂ ಆಗಿದೆ. ಸಾವಿನಷ್ಟು ಆಪ್ತವಾಗಿ ಬದುಕಿನ ಬೆನ್ನು ಹತ್ತಿ ಸಾಗಿದ್ದು ಯಾವುದಿದೆ ? ಜೊತೆಯಲ್ಲಿಯೇ ಬರುತ್ತಿರುವ ಈ ಹಳೆಗೆಳೆಯನನ್ನು ಕಣ್ಣೆತ್ತಿಯೂ ನೋಡದೆ ಸಾಗಿರುವ ಬದುಕು ಹಠಾತ್ತನೆ ಅದನ್ನು ಕಂಡು ಭಯಚಕಿತನಾಗಿ ಧಿಗ್ಗನೆ ಹಿಂದೆ ಸರಿದ ಒಂದು ಅನುಭವ ಇಲ್ಲಿದೆ.
ಈ ಸಂಗ್ರಹದ ಕವಿತೆಗಳಲ್ಲಿ ಎದ್ದುಕಾಣುವ ಇನ್ನೆರಡು ಮುಖ್ಯಗುಣಗಳಿವೆ. ಪ್ರತಿಯೊಂದು ಕವನವೂ ಒಂದು ಘಟನೆಯ ಅಥವಾ ಸನ್ನಿವೇಶದ ಕಥನವಾಗಿದೆ. ಇದರಿಂದ ಕವಿತೆಯ ಶಿಲ್ಪಕ್ಕೆ ಒಂದು ಖಚಿತತೆ, ನಿಖರತೆ ಬಂದಿದೆ; ಹಿಂದಿನ ಎರಡು ಸಂಗ್ರಹಗಳ ಪದ್ಯಗಳಲ್ಲಿ ಅರ್ಥದ ಅಸ್ಪಷ್ಟತೆಗೆ ಶಿಲ್ಪದ ಆಕಾರಹೀನತೆಗೆ ಕಾರಣವಾಗಿದ್ದ ದೋಷ ಪರಿಹಾರವಾಗಿದೆ. ಎರಡನೆಯ ಗುಣವೆಂದರೆ, ಬಹುಮಟ್ಟಿನ ಕವಿತೆಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುವ ವಿವೇಕ, ಸಹಜವಾದ ಅನುಕಂಪ. ಸಂಕಲನದ ಕಡೆಯಲ್ಲಿರುವ 'ಋತುವೈಭವ' ಒಂದು ಸೊಗಸಾದ ಗೀತಗುಚ್ಛ. ಇದು ವರ್ಷದ ಆರೂ ಋತುಗಳ ಮನೋಹರವಾದ ಚಿತ್ರ. ಭಾವಗೀತಾತ್ಮಕವಾದ ಋತುವೈಭವದ ಕವಿತೆಗಳಿಂದ ಮತ್ತು ಇಡಿಯ ಕವನವೇ ಅಖಂಡ ಪ್ರತಿಮೆಯಾಗಿ ಪರಿಣಮಿಸುವ ಹೊಸಬಗೆಯ ಕವನಶಿಲ್ಪಗಳಿಂದ ಕೂಡಿದ 'ತೆರೆದ ಬಾಗಿಲು' ಈ ದಶಕದಲ್ಲಿ ಬಂದ ಶ್ರೇಷ್ಠ ಕವಿತಾ ಸಂಗ್ರಹಗಳಲ್ಲಿ ಒಂದೊಂದು ಧಾರಾಳವಾಗಿ ಹೇಳಬಹುದು.
-ಎನ್ ಎಸ್ ಲಕ್ಷ್ಮೀನಾರಾಯಣಭಟ್ಟ
ತೆರೆದ ಬಾಗಿಲು (ಕವನ ಸಂಕಲನ)
ಮೊದಲನೆಯ ಆವೃತ್ತಿ 1975
54 ಮೇಖಲಾ ಬನಶಂಕರಿ ಮೊದಲನೆ ಹಂತ ಬೆಂಗಳೂರು 560050
68 ಪುಟಗಳು ಬೆಲೆ ರೂ. 6-00
ಕೃಪೆ: ಗ್ರಂಥಲೋಕ, ಜನೆವರಿ 1981