‘ಹೃದಯ ಸ್ಪಂದನ’ ಜಿ. ಆರ್. ಪರಿಮಳಾರಾವ್ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು, `ಹಿತವಾಗಿ ಮಿತವಾಗಿ ರಸಿಕವಾಗಿ ಅನುಭವದ ಎರಕವಾಗಿ ಮಲ್ಲಿಗೆ ನುಡಿಯಾಗಿ ಬರೆಯುವುದು ಯಾವತ್ತೂ ಕಷ್ಟವೇ. ಓತಪ್ರೋತವಾಗಿ ಬರೆಯಬಹುದು. ಪುಟಗಟ್ಟಲೇ ಬರೆಯಬಹುದು. ಅಮೆಜಾನ್ ನದಿಯ ಉದ್ದ ಒಸೆಯಬಹುದು. ಆಕಾಶದಗಲ ಹೆಣೆಯಬಹುದು. ಆದರೆ ಧ್ರುವ ನಕ್ಷತ್ರದ ಹಾಗೆ ಮಾತನ್ನು ಸದಾ ಮಿಂಚಿಸುವುದು ಪ್ರಯಾಸದ ಕೆಲಸ. ಭಾವ ನೆಡುವ ಕೆಲಸ: ಹೃದಯ ಕೊಡುವ ಅನುಭವ ಸೃಷ್ಟಿಸುವ ಕುಸುರಿ ಕೆಲಸ. ಇಂಥ ಸೃಜನಶೀಲ ಶಿಲ್ಪ ಕಡೆವ ಹೊಣೆಗಾರಿಕೆಯಲ್ಲಿ ಕವಯತ್ರಿ ಪರಿಮಳಾರಾವ್ ಅವರು ಗೆದ್ದಿದ್ದಾರೆ . ‘ಹೃದಯ ಸ್ಪಂದನ’ ಈ ಕಲಾ ಹೊತ್ತಿಗೆಯಲ್ಲಿ ನೂರಾರು ಶಬ್ಧ ಚಿತ್ರಗಳ ಜೊತೆ ವರ್ಣ ಚಿತ್ರಗಳಿವೆ. ಪದ ಮೈತ್ರಿ, ಲಾಲಿತ್ಯಪೂರ್ಣ, ತಮ್ಮ ಬಾಳಿನರಂಗಿನ ಅನುಭಗಳಿಗೆ ಪದಪದದಲ್ಲೂ ಬಣ್ಣ ತುಂಬಿ ‘ಚಿತ್ರಕಲೆ’ ಯೊಂದಿಗೆ ‘ನುಡಿಚಿತ್ರ’ ಬಿಡಿಸುವುದರಲ್ಲಿ ‘ಸೈ’ ಎನಿಸಿಕೊಂಡಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE