‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ. ಈ ಪುಸ್ತಕಕ್ಕೆ ಲೇಖಕಿ ಲಲಿತಾ ಸಿದ್ಧಬಸವಯ್ಯ ಹಾಗೂ ಪ್ರೊ.ವಿಕ್ರಮ ವಿಸಾಜಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಎದೆಯ ಸಂಕಟ ಕವನವಾಗುವಾಗ 'ಸೊಗಸು' ಎಂಬ ಪದಪ್ರಯೋಗ ಎಷ್ಟರಮಟ್ಟಿಗೆ ಔಚಿತ್ಯ? ಆದರೆ, ಸಂಕಟವನ್ನೋ ಸಂತೋಷವನ್ನೂ ಹೊರಹಾಕುವ ಕವಿಸಾಲುಗಳು ಓದುಗರಲ್ಲೂ ಅಂಥದ್ದೇ ವಿಪ್ಲವವೇಳಿಸಿದರೆ ಅದು ಕವಿತೆಯ ಗೆಲುವು. ಇಲ್ಲಿ ಸೊಗಸಾಗಿರುವುದು ಆ ನಿಮ್ಮ ಗೆಲುವು. ನಿಮಗನಿಸಿದ್ದನ್ನು ಓದುಗನಿಗೆ ಮುಟ್ಟುವಂತೆ ಬರೆಯಬಲ್ಲಿರಿ ನೀವು, ಒಳಗಿನ ಎದೆಗುದಿ, ಆಕ್ರೋಶಗಳನ್ನು ಕಿರುಚದೆಯೂ ಕಿರುಚಿದ ಪರಿಣಾಮವನ್ನೆ ಎಸಗುವ ಪದವೃಂದಗಳನ್ನು ಬಳಸಿ ಹೊರಹಾಕುವುದು ನಿಮ್ಮ ವೈಶಿಷ್ಟ್ಯ ವಾಚ್ಯವಾಗದ ಅದೇ ಹೊತ್ತಿಗೆ ಅಸ್ಪಷ್ಟವೂ ಆಗದ ಹದ ಸಾಧಿಸಿದ್ದೀರಿ. ನಿಮ್ಮ ಅಷ್ಟೂ ಕವಿತೆಗಳಲ್ಲಿರುವುದು ಸಂಕಟ ಮತ್ತು ಆಕ್ರೋಶ, ಅವುಗಳ ಹೊರಚೆಲ್ಲುವಿಕೆಗೆ ನೀವು ಪದೇಪದೇ ಬಳಸಿಕೊಂಡಿರುವುದು ಮೂರು ಪ್ರತಿಮೆಗಳನ್ನು; ನೀರು- ನವಿಲು- ಸೂರ್ಯ. ಈ ಪ್ರತಿಮೆಗಳು ಕಾಣದ ಒಂದೂ ಪದ್ಯ ಇಲ್ಲಿಲ್ಲ. ವಾಸ್ತವವಾಗಿ ನೀರುತಂಪಿನ, ನವಿಲು ಸಂಭ್ರಮದ, ಸೂರ್ಯಜೀವನದ ಸಂಕೇತವಾಗಿ ಬಳಸ್ಪಡುವ ಪ್ರತಿಮೆಗಳು. ತದ್ವಿರುದ್ಧವಾಗಿ ಇಲ್ಲಿ ಅವು ಉರಿಯ, ಹತಾಶೆಯ, ಜೀವಸಂಕಟದ ಪ್ರತಿಮೆಗಳಾಗಿವೆ. ಇವುಗಳಷ್ಟೇ 'ಹಸಿವು' ಕೂಡ ಈ ಕವನಗಳಲ್ಲಿ ಮತ್ತೆ ಮತ್ತೆ ಎದುರಾಗುವ ರೂಪಕ. ಇಲ್ಲಿನ ಪ್ರತಿ ಕವಿತೆಗೆ ನೀವು ಜೀವ ತೇಯ್ದಿದ್ದೀರಿ. ಇದು ಒಂದು ದಿನದಲ್ಲೋ ತಿಂಗಳಲ್ಲೋ ವರ್ಷದಲ್ಲೋ ಬರೆಯಲ್ಪಟ್ಟವಲ್ಲವೆನ್ನುವುದು ಪ್ರತಿ ಸಾಲಿನಲ್ಲೂ ಸ್ಪಷ್ಟವಾಗುತ್ತದೆ ಎಂದಿದ್ದಾರೆ ಲಲಿತಾ ಸಿದ್ಧಬಸವಯ್ಯ.
ಹಾಗೇ ಪುಸ್ತಕದ ಕುರಿತು ಬರೆದಿರುವ ವಿಕ್ರಮ ವಿಸಾಜಿ ಅವರು ‘ಕಾವ್ಯದ ಗುಟ್ಟುಗಳನ್ನು ಕಲಿಯುತ್ತ, ಭಾಷೆಯ ಹೊಸ ನುಡಿಗಟ್ಟು ಹುಡುಕುತ್ತ, ದಲಿತತ್ವದ ಅನುಭವ ಲೋಕವನ್ನು ಕಾಣಿಸುತ್ತ ಹೊರಟ ಕವಿತೆಗಳು ಇಲ್ಲಿವೆ. ಇವು ಬೆವರಗಂಧವೂ ಹೌದು, ಕನಸಿನ ವಿಳಾಸವೂ ಹೌದು. ಒಂದು ವಾಸ್ತವ, ಇನ್ನೊಂದು ಅಮೂರ್ತ. ಒಂದು ಶ್ರಮ, ಇನ್ನೊಂದು ಅಚ್ಚರಿಯ ಲೋಕ, ಬದುಕಿನ ವಾಸ್ತವ ಮತ್ತು ನಿಗೂಢತೆಯನ್ನು ಸಂದುಕಾಣದಂತೆ ಬೆರೆಸಿದ್ದು ಈ ಕಾವ್ಯದ ಹೆಚ್ಚುಗಾರಿಕೆ. ಜಗದ ಚಪ್ಪಲಿಯಾಗಲು ಬಯಸಿರುವ ಕವಿತೆಗಳು ಬೆಂದಷ್ಟು ಬೆಳಕು ನೀಡುವ ಹಣತೆಯಾಗಲು ಕೂಡ ಚಡಪಡಿಸಿವೆ. ಎಂಥ ವಿಷಾದಪೂರ್ಣ ಗಳಿಗೆಯಲ್ಲೂ ಈ ದಾರಿ ಕ್ರಮಿಸುವ ಹಠವಿದೆ. ಈ ಹಠವೇ ಜೀವನಪ್ರೀತಿಯ ಕ್ಷಣಗಳನ್ನು ಸೃಷ್ಟಿಸಿವೆ. ಒಳಗಿನ ಪ್ರೀತಿಯ ಒರತೆ ಮಾತ್ರ ಬತ್ತಿಲ್ಲ. ಸೂಕ್ಷ್ಮತೆಯನ್ನು ಕಳೆದುಕೊಳ್ಳದೆ, ವಾಸ್ತವಕ್ಕೆ ಬೆನ್ನುತಿರುಗಿಸದೆ ಬದುಕಿಗೆ ತೆತ್ತುಕೊಳ್ಳುವ ಆದ್ರ್ರತೆಯೆ ಇಲ್ಲಿನ ಕಾವ್ಯದ ಮುಖ್ಯಗುಣ. ಎಸ್.ಕೆ. ಮಂಜುನಾಥ ನಿಸ್ಸಂಶಯವಾಗಿ ಈ ಹೊತ್ತಿನ ಕಾವ್ಯದ ಗಟ್ಟಿದನಿಗಳಲ್ಲಿ ಒಬ್ಬರು. ಇದರ ಕುರುಹು ಮತ್ತು ಅರಿವು ಪ್ರಸ್ತುತ ಸಂಕಲನದಲ್ಲಿ ನಿಚ್ಚಳವಾಗಿ ತೋರುತ್ತವೆ ಎಂದಿದ್ದಾರೆ.
'ಎದೆಗಿಲಕಿ' ಕವನಸಂಕಲನದ ಮೂಲಕ ಸಾಹಿತ್ಯ ಲೋಕದಲ್ಲಿ ಪರಿಚಿತರಾದ ಡಾ. ಎಸ್.ಕೆ. ಮಂಜುನಾಥ್ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಶಿವರ ಗ್ರಾಮದವರು. ಮೈಸೂರು ವಿಶ್ವ ವಿದ್ಯಾಲಯದಿಂದ 'ಹೊಸ ತಲೆಮಾರಿನ ಕನ್ನಡ ಕಾವ್ಯದ ಅಭಿವ್ಯಕ್ತಿ ವಿನ್ಯಾಸಗಳು' ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಅ.ನ.ಕೃ ಕಥಾ ಬಹುಮಾನ, ಸತತ ಆರು ಬಾರಿ ಕ್ರೈಸ್ಟ್ ಕಾಲೇಜಿನ ದ.ರಾ.ಬೇಂದ್ರೆ ಕಾವ್ಯ ಬಹುಮಾನ, ಸಂಚಯ ಕಾವ್ಯ ಪ್ರಶಸ್ತಿ, ಪ್ರಜಾಪ್ರಗತಿ ದೀಪಾವಳಿ ಕವನ ಸ್ಪರ್ಧೆಯ ಪ್ರಥಮ ಬಹುಮಾನ, ತುಮಕೂರು ಜಿಲ್ಲಾಡಳಿತದ ಸ್ವಾತಂತ್ರೋತ್ಸವ ಕವಿಗೋಷ್ಠಿ ಪ್ರಥಮ ಬಹುಮಾನ, ಮೊದಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಾಯಧನ ದೊರಕಿವೆ. ...
READ MORE