‘ಬೆನ್ನಿಗೆಲ್ಲಿಯ ಕಣ್ಣು’ ಕವಿ, ರಂಗಕಲಾವಿದೆ ಸಂಘಮಿತ್ರೆ ನಾಗರಘಟ್ಟ ಹಾಗೂ ಕಲಾವಿದ ರಾಜೇಶ್ ಹೆಬ್ಬಾರ್ ಅವರ ಸಮೂಹ ಕಾವ್ಯ ಸಂಕಲನ. ಈ ಕೃತಿಗೆ ಎಸ್. ಗಂಗಾಧರಯ್ಯ ಹಾಗೂ ದಿಲಾವರ್ ರಾಮದುರ್ಗ ಅವರ ಬೆನ್ನುಡಿ ಬರಹವಿದೆ. ಸಂಕಲನದ ಕುರಿತು ತಿಳಿಸುತ್ತಾ ಇದು ಒಲವಿನ ಜೋಡಿಯೊಂದರ ಚೊಚ್ಚಲ ಕಾವ್ಯ ನಡಿಗೆ.
‘ನನ್ನದೊಂದು ಪಾದವೇ ಅವನ ಅಂಗೈ ಆಸರೆಯಲ್ಲಿತ್ತು
ಊರಿದ ಪಾದವ ಸರಿಸಲಾಗಲಿಲ್ಲ
ಅವನಿಗೂ ನನ್ನ ಕದಲಿ ಚಲಿಸಲಾಗಲಿಲ್ಲ
ಇಬ್ಬರೂ ದಂಗಾಗಿನಿಂತೆವು..
ಅವನು ನನ್ನ ಪಾದವ ಮೆಲ್ಲನೆ ಜೋಡಿಸಿದ
ತಟ್ಟಾಡುತ್ತಿದ್ದ ನಾನು
ಮೆಲ್ಲನೆ ಅವನ
ಅಂಗೈಯಲಿ ನನ್ನ
ಕೈಗಳ ಇರಿಸಿ ಜೊತೆ ನಡೆದೆ’
ಹೀಗೆ ಬದುಕಲ್ಲಿ ಜೀವ-ಭಾವ ಒಟ್ಟಾಗಿ ನಡೆವ ಆಶಯದ ಇದರೊಳಗಿನ ಲೋಕ ವಾಸ್ತವವನ್ನು ಮುಖಾಮುಖಿಯಾಗುತ್ತಾ. ನಿರ್ಬಂಧಿತ ಎಲ್ಲೆಗಳನ್ನು ಮೀರುತ್ತಾ. ತೋರಿಕೆಯ ಹಂಗಿನಿಂದ ಸ್ಪಚ್ಛಂದ ಗಾಳಿಯ ಘಮದಲ್ಲಿ ವಿಹರಿಸಲೆತ್ನಿಸುತ್ತದೆ. ಇಲ್ಲಿಯ ದನಿಗಳು ಎಂದಾದರೂ ಒಂದೇ ಎಂಬಂತೆ. ಅಂತರಂಗ-ಬಹಿರಂಗದ ವಾಸ್ತವಕ್ಕೆ ತುಡಿಯುವಾಸೆ. ಒಂದು ಎದೆಯೊಳಗಿನ ತಣ್ಣನೆಯ ಝರಿಯಂತೆ ಹರಿಯಲಿಚ್ಛಿಸಿದರೆ, ಮತ್ತೊಂದು ಧುಮುಕಿ ಸದ್ದು ಮಾಡಲೆತ್ನಿಸುತ್ತದೆ. ಒಂದು ಸಿದ್ಧಾಂತ, ಸಂಕೇತ, ಇತಿಹಾಸಗಳನ್ನು ಕೆದಕಿ ಅವುಗಳೊಳಗಿನ ಕೊಳಕನ್ನು ಕೆದಕಲೆತ್ನಿಸಿದರೆ. ಮತ್ತೊಂದು ಹೆಣ್ಣು, ಹೆಣ್ತನಗಳೆಂಬ ಖಾಸಗೀ ಮೂಸೆಯೊಳಗಿನ ಉಸಿರು ಕಟ್ಟವಿಕೆಯನ್ನು ಬಿಂಬಿಸಲೆತ್ನಿಸುತ್ತದೆ. ಒಂದರಲ್ಲಿ ಸಿಟ್ಟು, ವಿಷಾದಗಳು ಮಡುಗಟ್ಟಿದ್ದರೆ, ಮತ್ತೊಂದರಲ್ಲಿ ಇವುಗಳ ಜೊತೆಗೆ ಕ್ಷಮೆ, ತಾಯ್ತನದ ಭಾವಗಳು ಅನುರಣಿಸುತ್ತವೆ ಎಂದಿದ್ದಾರೆ ಎಸ್. ಗಂಗಾಧರಯ್ಯ. ಜೊತೆಗೆ ಇಂತಿಪ್ಪ ಈ ಜೋಡಿಯ ಕಾವ್ಯದುಸಿರಿಗೆ ಮತ್ತಷ್ಟು ಕಾವು, ಕಸುವುಗಳು ಬರಲಿ ಎಂದು ಆಶಿಸುತ್ತಾ ಈ ಹೊಸ ದನಿಯನ್ನು ಕನ್ನಡ ಕಾವ್ಯ ಲೋಕಕ್ಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತೇನೆ ಎಂದು ಹಾರೈಸಿದ್ದಾರೆ.
ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ. ...
READ MORE