'ಎಲೆಗಳ ತರಹ ಬಾಳುವುದಾದರೆ’ ಕೆ.ಪಿ ಮೃತ್ಯುಂಜಯ ಅವರ ರಚನೆಯ ಕವನಸಂಕಲನವಾಗಿದೆ. ಕಾವ್ಯಾಭಿವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಾಣುವ ಅಪ್ರಾಮಾಣಿಕತೆ ಮತ್ತು ಕೃತಕತೆಯ ಸೋಗಿಲ್ಲದೆ ಬರೆಯುವ ಗೆಳೆಯ ಮೃತ್ಯುಂಜಯ, ಕವಿತೆ ಉಸಿರಾಟದಷ್ಟೆ ಸಹಜವಾದ ಪ್ರಕ್ರಿಯೆ ಎಂದು ಬರೆಯುತ್ತ ಬಂದ ಮಹತ್ವದ ಕವಿಗಳಲ್ಲಿ ಒಬ್ಬ. ಕಳೆದ ನಾಲ್ಕು ದಶಕಗಳಲ್ಲಿ ಈ ಕವಿ ಹೊರತಂದಿರುವ ಎಂಟು ಕವನ ಸಂಕಲನಗಳಲ್ಲ, ಬರೆದ ಐನೂರಕ್ಕಿಂತಲೂ ಅಧಿಕ ಕವಿತೆಗಳಲ್ಲಿ ಕಾಣುವ ತೀವ್ರತೆ ಮತ್ತು ಆತ್ಮವಿಶ್ವಾಸ ಗಮನಿಸಿದರೆ ಮೃತ್ಯುಂಜಯ ಕಾವ್ಯ ಬರೆಯುವ ಶಕ್ತಿ ಮುಕ್ತಾಗದ ಪ್ರತಿಭಾವಂತ ಕವಿ ಎನ್ನುವುದು ಸಾಬೀತಾಗುತ್ತದೆ. ಒಮ್ಮೆ ಪ್ರಶಾಂತ ನದಿಯಂತೆ, ಇನ್ನೊಮ್ಮೆ ತಣ್ಣಗೆ ಕೊರೆವ ಮಂಜುಗಡ್ಡೆಯಂತೆ, ಮತ್ತೊಮ್ಮೆ ಒಳಗೆಯೇ ಬುಸುಗುಡುವ ಜ್ವಾಲಾಮುಖಿಯಂತೆ ಕಾಣುವ ಮೃತ್ಯುಂಜಯನ ಕವಿತೆಗಳು ಆಳದಲ್ಲಿ ಗಾಢವಾದ ಜೀವನಪ್ರೀತಿಯನ್ನು ತುಂಬಿಕೊಂಡಿರುವಂಥದ್ದು. ಕಥನದ ಶೈಲಿ, ಹೊಸದೆನ್ನಿಸುವ ನುಡಿಗಟ್ಟುಗಳ ಬಳಕೆ, ಲೋಕದ ಅನುಭವಗಳನ್ನು ಭಿನ್ನವಾಗಿ ಕಟ್ಟಿಕೊಡುವುದಕ್ಕೆ ನೆರವಾಗುತ್ತವೆ. ಕಂಡ, ಕೇಳಿದ, ಅನುಭವಿಸಿದ ಸಂಗತಿಗಳೆಲ್ಲವೂ ಮುಖ್ಯ ಅಮುಖ್ಯ ಎಂಬ ಭೇದವಿಲ್ಲದೆ, ಕಟ್ಟುಪಾಡುಗಳ ಅಥವಾ ದೇಶಕಾಲಗಳ ಹಂಗಿಲ್ಲದೆ ನಿರಂತರವಾಗಿ ಹರಿಯುವ ಲಹರಿಗಳಂತೆ ಬಿಚ್ಚಿಕೊಳ್ಳುತ್ತ ಕವಿತೆಯಾಗುವ ಪವಾಡ ಅಚ್ಚಲಿಯನ್ನುಂಟು ಮಾಡುವಂತಿವೆ. ಕವಿ ಜತನದಿಂದ ಕಾಪಾಡಿಕೊಂಡು ಬಂದಿರುವ ಬಾಲ್ಯದ ಮುಗ್ಧತೆ, ಬೆರಗು ಈ ಎಲ್ಲ ಕವಿತೆಗಳ ಜೀವಶಕ್ತಿಯಾಗಿ ಕೆಲಸಮಾಡುವ ಕಾರಣವೇ ಕವಿತೆ ತನ್ನ ಸಹಜ ವಿನ್ಯಾಸದಲ್ಲಿಯೆ ನಮ್ಮ ಹೃದಯಕ್ಕೆ ಮುಟ್ಟುತ್ತದೆ. ಈ ಪ್ರಾಮಾಣಿಕತೆ ಮೃತ್ಯುಂಜಯನ ಕಾವ್ಯದ ದೊಡ್ಡ ಶಕ್ತಿಯಾಗಿದೆ. 'ಒಂದೊಂದೆ ಏಲಕ್ಕಿ ಕಾಳನ ಕಮ್ಮನೆಯ ವಾಸನೆ/ಇನ್ನರ್ಧ ಶತಮಾನ ನನ್ನನ್ನು ಬಾಲಿಸುತ್ತದೆ' ಎಂದು ಆತ್ಮವಿಶ್ವಾಸದಿಂದ ಬರೆಯಬಲ್ಲ ಮೃತ್ಯುಂಜಯ ಇನ್ನೂ ದೀರ್ಘಕಾಲ ಬರೆಯಬಲ್ಲ ಗಣ್ವಕವಿ ಎನ್ನುವುದನ್ನು ಗೆಳೆಯನೆಂಬ ವಿನಾಯಿತಿಯಿಲ್ಲದೆ ದೃಢವಾಗಿ ಹೇಳಬಲ್ಲೆ. - ಸಂತೋಷ ಜೊಕ್ಕಾಡಿ
ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ ...
READ MORE