‘ಮೌನದೊಳಗಿನ ಮಾತು’ ಲೇಖಕ ಡಾ.ಸುರೇಶ ನಾರಾಯಣ ನಾಯ್ಕ ಅವರ ಕವನ ಸಂಕಲನ. ಮೌನದ ಗರ್ಭದೊಳಗೆ ಪಕ್ವಗೊಂಡ ಚಿಂತನೆಯ ಅಭಿವ್ಯಕ್ತವಾದ ಈ ಸಂಕಲನದ ಕವಿತೆಗಳು ಪ್ರಸ್ತುತ ಸಾಮಾಜಿಕ ಸ್ಥಿತಿಗತಿಯ ಪ್ರತಿಬಿಂಬಗಳಂತಿವೆ. ಇವುಗಳಲ್ಲಿ ಕಳೆದು ಹೋದ ಪ್ರೀತಿಗಾಗಿ, ಬೆಳದಿಂಗಳ ದರ್ಶನಕ್ಕಾಗಿ ಕವಿ ಹೃದಯ ಹಾತೊರೆಯುತ್ತದೆ. ಹಣದ ಹಸಿವಿಗೆ ಮಾನವೀಯತೆ ಬಲಿಯಾಗುತ್ತಿರುವ ವಿವಿಧ ದೃಶ್ಯಗಳನ್ನು ಚಿತ್ರಕ ಶೈಲಿಯಲ್ಲಿ ಕಣ್ಮುಂದೆ ನಿಲ್ಲಿಸುವ ಕವಿ ಬುದ್ಧಿಜೀವಿ ಮಾತ್ರ ಆರಾಮವಾಗಿ ಕಾಲಮೇಲೆ ಕಾಲು ಹಾಕಿಕೊಂಡು ಕೈಕಟ್ಟಿ ಕುಳಿತರೆ ಹೇಗೆ ಎಂಬ ಸವಾಲೆಸೆದು ಮಾನವೀಯ ಮೌಲ್ಯಗಳ ಮೂಲಕ ಹಾದಿ ತಪ್ಪಿಸುವ ಸಮಾಜವನ್ನು ಎಚ್ಚರಿಸುವ ಇಲ್ಲಿನ ಕವಿತೆಗಳು ಆರೋಗ್ಯಕರ ಮನಸ್ಸು ಕಟ್ಟುವೆಡೆಗೆ ಮುಖಮಾಡಿವೆ. ತನ್ನೂರಿನ ನೆಲ ಜಲದ ಸ್ಮರಣೆ, ಮನದಲ್ಲಿ ಮನೆಮಾಡಿಕೊಂಡವರ ವ್ಯಕ್ತಿಚಿತ್ರಣ, ಶೋಷಿಸಲ್ಪಟ್ಟವರ ಅಂತರಾಳದ ಅನಾವರಣ ಈ ಮೊದಲಾದ ಆಶಯಗಳನ್ನೊಳಗೊಂಡ ಕವನಗಳು ಸಂಕಲನದ ಜೀವಾಳ. ಕಂಡುಂಡ ಅನುಭವಗಳೇ ಕವಿಗೆ ಬಂಡವಾಳ.
ಕವಿ ವಿಮರ್ಶಕ ಸಂಶೋಧಕ ಸುರೇಶ ನಾರಾಯಣ ನಾಯ್ಕ ಅವರದ್ದು ದಣಿವರಿಯದ ಬರಹ. ಅಪ್ಪಟ ಗ್ರಾಮೀಣ ಪ್ರತಿಭೆ.ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಉತ್ತರ ಕನ್ನಡದ ಹೊನ್ನಾವರದಲ್ಲಿ 1968 ಜುಲೈ 26ರಂದು ಜನಿಸಿದರು. ಅವರ ಇತ್ತಿಚಿನ ಕವನ ಸಂಕಲನ ‘ಪುರುಷಾರ್ಥ’ 2020ರಲ್ಲಿ ಪ್ರಕಟಣೆ ಕಂಡಿದೆ. ಸಂಶೋಧನ ದೀಪ, ಪುರುಷಾರ್ಥ, ಹೊಳೆಸಾಲು, ವಿಜಯ ಶೋಧ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE