ವಿಜಯ ಭಾಸ್ಕರ್ ಅವರ ಪ್ರಥಮ ಕವನ ಸಂಕಲನ-’ನೆನಪಿನ ಪಡಸಾಲೆ’. 28 ಕವಿತೆಗಳಿವೆ. ಸದ್ಯ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿರುವ ಕವಿಗಳು, ತಮ್ಮಲ್ಲಿ ಮೂಡಿದ ವಯೋಸಹಜವಾದ ಪ್ರೀತಿ-ಪ್ರೇಮದ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಸಾಹಿತಿ ಎಚ್.ಆರ್.ಸುಜಾತಾ (ಮುನ್ನುಡಿ) ಹಾಗೂ ಸಾಹಿತಿ ಜಿ.ಎನ್. ಮೋಹನ (ಬೆನ್ನುಡಿ) ಅವರು ಈ ಕವಿಯ ಕುರಿತು ಪ್ರೋತ್ಸಾಹದಾಯಕ ನುಡಿಗಳನ್ನು ಬರೆದಿದ್ದಾರೆ.
ನೆನಪಿನ ಪಡಸಾಲೆ (ಕವನ ಸಂಕಲನ ಕುರಿತು ವಿಮರ್ಶೆ)
' ಬಿಸಿಲು ಬೆಳದಿಂಗಳ ' ಅಮ್ಮ ' ನ ಪದಗಳು '
ಕಡು ಬಿಸಿಲು ನಾಡಿನ ವಿಜಯಭಾಸ್ಕರ ತುಂಬು ಪ್ರೀತಿಯ ಅಕ್ಷರಗಳ ಮಮತೆಯ ಮನೆಯ ಮುದ್ದಿನ ಮಗ. ಪುಸ್ತಕದ ನಡುವೆಯೇ ಹುಟ್ಟಿದ ವಿಜಯನಿಗೆ
ಚಿಕ್ಕಂದಿನಿಂದಲೂ ಕಲೆ, ಸಾಹಿತ್ಯ , ಸಂಸ್ಕೃತಿಗಳ
ಸಪ್ಪಳದ ನಿನಾದ ಕೇಳುತ್ತಲೇ ಇದ್ದುದರಿಂದ ಇವನಲ್ಲಿ
ನಯ , ವಿನಯ , ಭಾವುಕತೆ , ವಿಧೇಯತೆಗಳು ಕರ್ಣನ ಕುಂಡಲಿಯಂತೆ ಬೆಳದು ಬಂದವು . ನೃಪತುಂಗನ ಸೇಡಂನ ತೊಗರಿ ನೆಲದ ಎಂ.ಎ. ಪತ್ರಿಕೋದ್ಯಮದ
ಈ ಹುಡುಗನಿಗೆ ಓದು , ಬರವಣಿಗೆ , ತಿರುಗಾಟ -ಗಳೆಂದರೆ ಉಸಿರಿನಷ್ಟೇ ಪ್ರೀತಿ . ಸಮಾಜದ ಸಮಾನತೆ-ಗಾಗಿ ಮಿಡಿಯುವ ಈ ಮನಸ್ಸಿಗೆ ' ಅಮ್ಮ ' ನಿಂದಾಗಿ
ವಿಶಾಲವಾದ ಬೆನ್ನು ಚಪ್ಪರಿಕೆಯ ಸಿಹಿ ಮನಸ್ಸುಗಳ ಒಡನಾಟದಿಂದಾಗಿ ಹುಟ್ಟಿದ ಈ " ನೆನಪಿನ ಪಡಸಾಲೆ " ಯನ್ನು ಸೇಡಂ ನ ರಾಷ್ಟ್ರಕೂಟ ಪುಸ್ತಕಮನೆ ಪ್ರಕಟಿಸಿದ್ದು 40 ಪುಟಗಳ ಈ ಪುಸ್ತಕದಲ್ಲಿ ಜೀವನಾನು -ಭವದ , ಕಾಡುವಿಕೆಯ 24 ಹಸಿ - ಬಿಸಿಯಾದ ಬಿಸಿಲು ಬೆಳದಿಂಗಳ ಸೆಳೆತದ ಸಾಲುಗಳಿವೆ .
ತಮ್ಮ ಮಹಾದೇವರೆಡ್ಡಿಯ ಜನ್ಮದಿನದ ವಿಶೇಷಕ್ಕೆ ಪ್ರಕಟಿಸಿದ ಈ ಕವನ ಸಂಕಲನವನ್ನು ವಿಜಯ್ , ಅಪ್ಪ - ಅಮ್ಮನ ಪ್ರೀತಿಗೆ ಇದನ್ನು ಅರ್ಪಿಸಿರುವನು .
ಫೋನಿನಲ್ಲಿ ಅಮ್ಮನ ಧ್ವನಿ ಕೇಳುತ್ತಿದ್ದೆ.
ಜಾರಿದೆ ಮಡಿಲಿನ ಬೆಚ್ಚನೆಯ ನೆನಪಿಗೆ
ಆಕಳಿಸುತ್ತಾ ಹಠಾತ್ತನೆ ಫೋನಿಟ್ಟು ಮತ್ತೆ ಅತ್ತೆ..
ಇಳಿಯುವ ಜಾಗ ಬಂತು, ಭಾರವಾದ ಹೆಜ್ಜೆಯನ್ನಿಟ್ಟು ಇಳಿದೆ . ಎಂದು " ಅಮ್ಮನ ಬೆಚ್ಚನೆಯ ನೆನಪು " ಕವಿತೆಯಲ್ಲಿ ,
ಹುಟ್ಟಿದ ನೆಲದ ಅಂತರಂಗದ ಪ್ರೀತಿಯನ್ನು ಅಮ್ಮನ
ಮಮತೆಯನ್ನೂ ನೆನೆನೆನೆದು ಕವಿ ಇಲ್ಲಿ ಬೆಚ್ಚನೆಯ
ಮಡಿಲಲ್ಲಿ ಮುಳುಗಿರುವರು . ಊರಿಂದ ಹೊರಗೆ
ಬಂದಾಗ , ಇಲ್ಲಿ ನಮಗೆ ಎಷ್ಟೇ ವೈಭವದ ಅನುಕೂಲತೆಗಳಿದ್ದರೂ ಸದಾ ನಮ್ಮನು ಕಾಡುವದು
ಅಮ್ಮನ ಪ್ರೀತಿ - ಮಮತೆಗಳೇ . ಎಸಿಯ ಛಳಿಯಲ್ಲಿಯೂ ನಮಗೆ ಅದು ಬೆಚ್ಚನೆಯ ಜೀವ ಸೆಲೆ.
ಹುಡುಗಿ , ವೈನ್ , ಸಿಗರೇಟು ಇವೆಲ್ಲವೂ ತಾತ್ಕಾಲಿನ
ಕ್ಷಣ ಮಾತ್ರಕೆ ಮೈ - ಮನವನ್ನು ಬೆಚ್ಚಗಿಡುವ ಕೃತಕತೆಗಳು . ಆದರೆ ಅಮ್ಮ ಮಾತ್ರ ಸದಾ ನಮ್ಮನು
ಕಾಪಿಟ್ಟು ಸಲಹುವಳು. ಹುಟ್ಟಿದ ನೆಲ , ಅಮ್ಮನ ಮಡಿಲಿನ ನೆನಪು ನಮ್ಮೆದೆಗೆ ನಾವು ದೂರ ಬಂದಾಗಲೇ
ಕಾಡಿ ಅದೇ ನಮ್ಮನ್ನು ಬೆಚ್ಚನೆಯ ಲೋಕಕ್ಕೆ ಪೊರೆಯು-
ವದು ಎಂದು ಕವಿ ಗೊತ್ತಿಲ್ಲದೇ ಅತ್ತು ಮನಸ್ಸನ್ನು
ಹಗುರ ಗೊಳಿಸಿಕೊಂಡಿರುವರು.
" ಪ್ರೀತಿ ಯಾಕೆ ಅಷ್ಟು ಗಾಢ " ಕವನದಲ್ಲಿ
ಅವಳು ತೀರ ಈಚೀಚೆ ಮುನಿಸು ಮಾಡಿಕೊಂಡು
ತನ್ನ ಅಗ್ನಿ ಕೋಪದ ಪರ್ವತವನ್ನೇರಿ ಕುಳಿತರೆ
ಬಡಪಾಯಿಯಂತೆ, ಕೆಳ ನಿಂತು
ಅವಳ ಲಂಗದ ನೆರಿಗೆ ಸವರುತ್ತಿದ್ದೆ .
ಎಂದು ಕವಿ ಹುಡುಗಿಯ " ಪ್ರೀತಿ " ಯ ಮಹಿಮೆಯನ್ನು
ಮನಗಂಡಿರುವರು. ಈ ಪ್ರೀತಿ ಎಂದರೇ ಹೀಗೆ ; ಅದರಲ್ಲಿ ಒಮ್ಮೆ ಬಿದ್ದರೆ ನಮ್ಮದೆಲ್ಲವನೂ ನಾವು ಮರೆತೆ ಮತ್ತೆ ಮತ್ತೆ ಅಲ್ಲೇ ಮುಳುಗೇಳುತಿರುವೆವು.
ಈ ಸಂದರ್ಭದಲ್ಲಿ ಅವಳು ಮುನಿಸಿ ಅಗ್ನಿಪರ್ವತವೇರಿ ಕುಳಿತರೂ ಬಡಪಾಯಿ ಪ್ರೇಮಿ ಸದಾ ಅವಳ ದಾಸಾನುದಾಸನೇ ! ಅವಳ ತೀಕ್ಷ್ಣ ನೋಟ ನಮ್ಮೆದೆಗೆ
ಮುಳ್ಳಿನಂತೆ ಇರಿಯುವದು. ಬಿಟ್ಟೇ ಬಿಡಬೇಕು ಇದೆಲ್ಲವನೂ ಎಂದರೂ ಈ ಪ್ರೀತಿ ಎಂಬುದು ಬಿಡುಗಡೆ ಇಲ್ಲದ ಬಂಧನವಾಗಿದೆ . ಇದೊಂದು ತೀರಾ
ಗಾಢವಾದ ಬಿಟ್ಟೂ ಬಿಡದ ಅನುಬಂಧ ಎಂದು ಕವಿ
ಪ್ರೀತಿಯ ಹೃದಯದಲಿ ಮುಳುಗಿ ಏಳಲಾರದೇ ಚಡಪಡಿಸುತ್ತಲಿರುವನು . ಕರಗದ ಪ್ರೀತಿಗೆ ಕಾರಣ ಈ ಹಾಳಾದ ಪದ್ಯಗಳೇ ಎಂದು ವಿಜಯ್ ತನಗೆ ತಾನೇ
ಸಮಾಧಾನ ಪಡಿಸಿಕೊಂಡಿರುವರು.
ಅನುಭವವೇ ಮೊಟ್ಟೆಯಾಗಿ ಇಟ್ಟರೂ...ಕೋಳಿ ತನ್ನ ಅರಿವನ್ನೇ ಮೀರಿ ಧ್ಯಾನಸ್ಥವಾಗಿ ಆ ಮೊಟ್ಟೆಯನ್ನುಒಡೆಯುತ್ತದೆ. ಅದಕ್ಕೆ ಕಾಯುವಿಕೆಯ ಕಾವು, ಕಾಲ ಎರಡೂ ಬೇಕಾಗುತ್ತೆ ಎಂದು " ಉಪ್ಪು ಖಾರ ಹಾಕಿಟ್ಟ
ಮಾವಿನಕಾಯಿ... " ಎಂಬ ಮಮತೆಯ ಮುನ್ನುಡಿ ಬರೆದ ಮಾತೃಹೃದಯದ ಕವಿ ಹೆಚ್.ಆರ್.ಸುಜಾತಾ ,ವಿಜಯ್ ಒಳಗೆ ಇಂದಿನ ವಿದ್ಯಮಾನಗಳಿಗೆ ತೆರೆದು -
ಕೊಳ್ಳುವ ಗುಣವಿದೆ.ಕಲಿಕೆಯ ಆಸೆಯಿದೆ. ಇದು ನೆಲ ಗುದ್ದಿ ನೀರು ತೆಗೆಯುವ ಹರಯ. ನಿಜ ! ಆದರೆ ಆ ಉತ್ಸಾಹಕ್ಕೆ ಬೇಕಾದ ಅನುಭವ ಲೋಕ -ವೊಂದಿರುತ್ತದೆ, ಅದನ್ನು ಕಂಡುಕೊಳ್ಳಲು , ಎನ್ನುತ್ತಾ ಕಲಬುರುಗಿಯ ಆ ಉರಿಬಿಸಿಲಲ್ಲೂ ಬಿಡದೆ ಹರಿವ ನದಿ, ಹಚ್ಚ ಹಸಿರು ಹೊಲದ ತೊಗರಿ ಸಾಲಿನ ಹೂ ಹೂವಿನಲ್ಲೂ ಜೇನು ಹುಡುಕುವನು...,ಎಂದಿರುವರು.
ಸೊಸೆ ಕಾಟಕ್ಕೆ ಬೇಸೆತ್ತು , ಟೀಚರ್ ಟಾರ್ಚರ್ಗೆ ಸೋತು
ಆಫೀಸಿನ ಬಾಸ್ ನ ಬೈಗುಳಕ್ಕೆ ರೊಸೋಗಿ
ಕೂತ ಜನರ ನಡುವೆ
ನಾನು ಅಕ್ಷರಶಃ ಒಂಟಿಗ
ಎನ್ನುತ್ತಾ ಕವಿ " ಮಲ್ಲೇಶ್ವರ ವೆಸ್ಟ್ ಪಾರ್ಕನ ತಲ್ಲಣಗಳು"
ಕವಿತೆಯಲ್ಲಿ ಪಾರ್ಕಿನ ವಿಶಾಲವಾದ ಮೈ ಮನಗಳನ್ನು
ವಿಷಧೀಕರಿಸಿರುವರು. ಪಾರ್ಕಿನ ಒಡಲೆಂದರೆ ಅದು
ಎಲ್ಲೆ ಮೀರಿದ್ದು. ಎಷ್ಟೆಲ್ಲಾ ಸುಖ - ದುಃಖದ ವಿಷಯ
ಗಳನ್ನು ಮೈದುಂಬಿಸಿಕೊಂಡು ಸಾಂತ್ವನಗೊಳಿಸುವದು !
ಅಲ್ಲಿ ಪ್ರೇಮಿಗಳಿರುವರು , ವಿರಹಿಗಳೂ ಪರಿತಪಿಸುತ -
ಲಿರುವರು. ಹೀರುವವರ - ಹೀರಿಸಿಕೊಳ್ಳುವವರ ತಾಣವೇ ಈ ಪಾರ್ಕುಗಳು. ಕವಿ ಇಲ್ಲಿ ಸೊಸೆಯ ಕಾಟಕ್ಕೆ ಬೇಸತ್ತು ಎಂದು ಹೇಳುತ್ತಾ ಬದುಕಿನ ತಲ್ಲಣಗಳ ನಡುವೆ ಸಂದ್ಯಾಕಾಲದ ದುರಂತವನ್ನು ಪ್ರಸ್ತಾಪಿಸಿರುವರು. ಕೈ ಹಿಡಿದು ನಡೆಯುವ
ದಂಪತಿಗಳ ನೆನೆದು ಇಲ್ಲಿ ವಿರಹವ ತಾಳಲಾರದೇ ಕವಿ , ನಾನು ಅಕ್ಷರಶಃ ಒಬ್ಬಂಟಿ ಎನ್ನುತ್ತಾ ತನ್ನ ಪ್ರೇಮದ ಕುರಿತಾಗಿ ಹಳಹಳಿಸಿರುವರು. ತಮ್ಮ ಗತಕಾಲದ ನೆನಪಿಗೆ ಸಾಕ್ಷಿಯಾಗಿ , ಮಂಡಿ ಹಿಡಿದು ಕೂತ ಅಜ್ಜಿ -
ಅಜ್ಜನೂ ಸಹ ಈ ಪಾರ್ಕಿನ ಪ್ರಜೆಗಳೇ. ಈ ಪಾರ್ಕಿನ
ಉಸಿರೇ ಹೀಗೆ ; ಮಲ್ಲೇಶ್ವರಂ ವೆಸ್ಟ್ ಪಾರ್ಕೆಂದರೆ
ಪುಟ್ಟ ಜಗತ್ತಿನಂತೇ ; ಅದು ಸುಖ ದುಃಖಗಳ
ಸಮ್ಮಿಲನ .
" ಮುಗಿದ ರಾತ್ರಿಗಳ ಲೆಕ್ಕ " ಕವಿತೆಯಲ್ಲಿ ,
ತನ್ನದಲ್ಲದ ಮಗು ತನ್ನದೆಂದು ಮೊಲೆಹಾಲು ನೀಡುತ್ತಾ
ಬೆಂದ ಮೈಯ್ಯನ್ನು ಹಾಸಿಗೆಯ ಅಂಚಲಿ ತಣಿಸಿಕೊಳ್ಳುತ್ತ
ಮತ್ತದೇ ವೈನ್ ಹೀರಿ ಬಂದವರಿಗೆ, ಹೋದವರಿಗೆ
ಮುಗಿದ ರಾತ್ರಿಗಳ ಲೆಕ್ಕ ಕೇಳುತ್ತಾ.....ಕೇಳುತ್ತಾ ....ಕವಿ ಇಲ್ಲಿ ಅಸಹಾಯಕ ಹೆಣ್ಣಿನ ಬದುಕಿನ ದುರಂತ ಚಿತ್ರವನ್ನು ಬಿಚ್ಚಿಡುವರು. ಮುಗಿದ ರಾತ್ರಿಗಳ
ಲೆಕ್ಕಾಚಾರಕ್ಕೆ ಕೊನೆ ಎಂಬುದೇ ಇಲ್ಲ. ಬದುಕಿನ ಉಸಿರು
ನಿಲ್ಲದಿರಲೆಂದು ಬೆಂದ ಮೈಯ್ಯನ್ನು ಹಾಸಿಗೆಯ ಅಂಚಲ್ಲಿ ಅನಿವಾರ್ಯತೆಗೆ ತಣಿಸಿಕೊಳ್ಳುವ ಜನರ
ನಡುವೆಯೇ ಒಡಕು ತುಟಿಗಳ ಕಣ್ಣೋಟದ
ಚಾಳಿಯಿಂದ ಕೆಂಪು ಕಾರಿನ ಹುಡುಗಿಗೆ ಬದುಕೆಂದರೆ
ಕಂಪು - ಇಂಪು.ಮುಗಿದ ರಾತ್ರಿಗಳ ಲೆಕ್ಕಕ್ಕೆ ಅನುದಿನವೂ
ಮತ್ತೆ ಪುನರಾವರ್ತನೆ. ಹೊಟ್ಟೆ ಪಾಡು ಮತ್ತು ದುರಂತದ ವೈಭವದ ಬದುಕು ಈ ಕವಿತೆಯಲ್ಲಿ
ಮುಖಾಮುಖಿಯಾಗಿದೆ .
ನೆನಪಿನ ಪಡಸಾಲೆಯ ಹುಡುಗ - ಕವಿ ,
ವಿಜಯಭಾಸ್ಕರ ತನ್ನ ಕವಿತೆಗಳ ಕುರಿತಾಗಿ ಬರೆಯುತ್ತಾ " ನಿಜ , ಬದುಕಿನಲ್ಲಿ ಕರಗಲಾರದಷ್ಟು ಪ್ರೀತಿಯನ್ನು ಕೊಟ್ಟ ಅಪ್ಪ - ಅಮ್ಮನಂತೆ , ಈ ಪದ್ಯಗಳೂ ಕೊಟ್ಟಿವೆ. ಪದ್ಯಗಳೆಂದರೆ ಅವು ಪದ್ಯಗಳಾಗಿ ಉಳಿಯದೇ ತನ್ನ
ಎಲ್ಲಾ ರಾತ್ರಿಗಳಲ್ಲಿ ಒಳಹೊಕ್ಕು ಕನಸಿಗೆ ರೆಕ್ಕೆ ಕಟ್ಟಿ
ಚಂಗನೆ ಹಾರಲು ಉತ್ತೇಜಿಸುತ್ತವೆ. ಅತೃಪ್ತ ಆತ್ಮದಂತೆ
ಬಡಬಡಿಸುವ ನನ್ನ ಕಪಿ ಮನಸ್ಸಿಗೆ ತಂಗುದಾಣದಂತೆ
ಒಂದು ಪ್ಲಾಟ್ ಫಾರಂ ಕಟ್ಟಿಕೊಟ್ಟು ಕೆಲವು ಕವಿತೆಗಳನ್ನ
ಇಲ್ಲಿ ಹಿಡಿದಿಟ್ಟಿದ್ದೇನೆ " ಎಂದಿರುವನು.
ಈಗಲೂ ಸಮಯ ಹಿಂದಕ್ಕೆ ಹೋಗಬಾರದೇ
ಥೇಟ್ ಶಾಲೆಯ ಹುಡುಗನಂತೆ ಬ್ಯಾಗ್ ಹಿಡಿದು ಹೋಗುವೆ
ಬಾಡಿಗೆ ಸೈಕಲ್ ಹಿಡಿದು ನಡೆಸುವೆ,
ಈರು ಮಾಮನ ಬನ್, ಬಿಸ್ಕತ್ ಸವಿಯುವೆ
ಛೇ ಯಾಕೆ , ಈ ಸಮಯ ಮತ್ತೆ ಹಿಂದೆ ಹೋಗಲ್ಲ. ಎನ್ನುತ್ತಾ ಕವಿ " ನೆನಪಿನ ಪಡಸಾಲೆ " ಕವಿತೆಯಲ್ಲಿ ತನ್ನ ಬಾಲ್ಯಕ್ಕೆ ಹೊರಳಿ ಮಗುಮನವನ್ನು ನಳನಳಿ -
ಸಿರುವರು.ಅಂದಿನ ದಿನಗಳಲ್ಲಿದ್ದ ಆ ಮಾನಸಿಕ ನೆಮ್ಮದಿ ಮತ್ತೆಂದೂ ಸಿಗುವದು ಅಸಾಧ್ಯ. ಈ ಆಡಂಬರದ ಬದುಕುಗಳೆಲ್ಲಾ ಭ್ರಮೆಯಿಂದ ಕೂಡಿದೆ. ಈ ಬದುಕು
ಸತ್ವರಹಿತ .ಅಂದಿನ ದಿನದ ನೆನಪುಗಳು ಸದಾ ಜೀವಂತ. ಆ ನೆನಪುಗಳೇ ನಮ್ಮನ್ನು ಪಾಲಿಸಿ ಪೋಷಿಸಿ ಕೈಹಿಡಿಯುವವು. ಅಪ್ಪನ ಬಿರುಕುಪಾದ , ಅಮ್ಮನ ಬೆಳಕಿನ ಸೀರೆಯು ಇಂದಿಗೂ ನೆನಪಾಗಿ ಕಣ್ತುಂಬುವದು. ಬಾಲ್ಯದ ಬಾಡಿಗೆ ಸೈಕಲ್ಲಿನ ಸವಿಯುಂಡ ಕವಿ , ಛೇ ಯಾಕೆ ಮತ್ತೆ ಬಾಲ್ಯಕೆ ಹೊರಳಬಾರದು ಎಂದು ಆ
ಕಾಲದ ಮಾನಸಿಕ ವೈಭವವ ನೆನೆದು , ಶೇಂಗಾಬೀಜ, ರವೆ ಉಂಡೆ , ತೊಗರಿಕಾಯಿಗಳಿಗೆ ಮತ್ತೆ ಮತ್ತೆ ಮನಸೋತು ಮಳೆ, ಮಣ್ಣಿನ ಘಮಲನ್ನು ಮೈಗೂಡಿಸಿ ಎದೆಯಂತರಾಳದಿಂದ ನೆನಪಿನ ಪಡಸಾಲೆಯಲ್ಲಿ
ವಿಜಯ್ ಪವಡಿಸುವನು .
ಯುದ್ದಗಳ ಕೌರ್ಯ , ಸೇಡು , ಪ್ರತೀಕಾರಗಳ ನೆನೆದು ಈ ಯುದ್ದಗಳೇಕೆ ಮಾತಾಡುವದಿಲ್ಲ ? ಮನುಷ್ಯತ್ವಮಾನವೀಯತೆಯ ಎಲ್ಲವನೂ ಮರೆತು ದ್ವೇಷವೇ
ನಮ್ಮಲ್ಲೇಕೆ ಮೈದುಂಬಿದೆ ? ಈ ಯುದ್ದದಿಂದಾಗಿ ಯೋಧನ ತಾಯಿ , ಪತ್ನಿ , ಪುಟ್ಟ ಕಂಗಳ ಕೂಸು, ತಂಗಿಯ ಅಣ್ಣ ಇವರ ಪ್ರೀತಿ, ಮಮತೆ, ಸಂಬಂಧಗಳ ಮಾರಣ ಹೋಮದಲ್ಲಿ ನಾವಿಂದು ಅಟ್ಟಹಾಸದಲಿ ಬೀಗುತಿದ್ದೇವೆ ಎಂದು " ಯುದ್ದಗಳು " ಕವಿತೆಯಲ್ಲಿ ಯುದ್ದಕ್ಕೆ ಬೇಕಾಗಿರುವದು ಪ್ರತಿಷ್ಟೆ ಒಂದೇ ಎಂದು ಮನುಕುಲದ ಅಳಿವನ್ನು ನೆನೆದು ಕಣ್ಣೀರಾಗಿರುವನು.
ಮಗುಮನದ ವಿಜಯನ ಕವಿತೆಗಳಲ್ಲಿ ಬಾಲ್ಯದ ನೆನಪುಗಳು ಜೀವಂತವಾಗಿದ್ದು ಸದಾ ಕಾಡುತ್ತಿರುತ್ತದೆ . ಇಲ್ಲಿ ಮಾನವೀಯ ಮನಸ್ಸೊಂದು ಎಚ್ಚರಿಕೆಯಿಂದಿದ್ದು
ಕಡು ಬಿಸಿಲಿನಲೂ ಬೆಳದಿಂಗಳ ತಂಪು ಇಂಪಾಗಿ ಅದಮ್ಯ ಉತ್ಸಾಹದ ಚಿಲುಮೆಯೊಂದು ಎಂದಿಗೂ ಜಾಗ್ರತೆಯಿಂದ ಇರುತ್ತದೆ. ತನ್ನ ನೋವು ನಲಿವಿನ
ನಡುವೆ ವಿಜಯ್ ಸಮಕಾಲೀನ ತಲ್ಲಣಗಳ ಕುರಿತು ಯೋಚಿಸುವ ಶಕ್ತಿ - ಮನಸ್ಸು ಹೊಂದಿದ್ದರಿಂದ ಮುಂಬರುವ ದಿನಗಳಲ್ಲಿ ಶಕ್ತಿಶಾಲಿ ಅಕ್ಷರಗಳ ನಡುವೆ ಹೊಸ ಹೊಸ ಮೌಲ್ಯಯುತವಾದ ಕವಿತೆಗಳೊಂದಿಗೆ ವಿಜಯ್ ಕಂಗೊಳಿಸಲಿ ಎಂದು ಹಾರೈಸಿ , ಈ ಚೊಚ್ಚಲು ಸಂಕಲನಕೆ ಅಭಿನಂದಿಸುವೆ .
-ಪ್ರಕಾಶ ಕಡಮೆ, ನಾಗಸುಧೆ, ಹುಬ್ಬಳ್ಳಿ
(ಕಡಲವಾಣಿ ಪತ್ರಿಕೆ, 19-07-2021)
©2024 Book Brahma Private Limited.