‘ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ 2020-2021- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ ಕಾರಣದಿಂದ ಪ್ರಕಟಿಸುವ ತುರ್ತನ್ನು ಎದುರುಗೊಂಡವು ಎಂಬುದು ವಾಸ್ತವ. ಆದರೆ ಇದೊಂದೇ ಕಾರಣವಲ್ಲ. ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳ ವಾರ್ಷಿಕ ಸಾಹಿತ್ಯ ಸಮೀಕ್ಷೆಗಳಲ್ಲಿ `ಈ ವರ್ಷದಲ್ಲಿ ಮಹಿಳೆಯರು ಕೆಲವು ಮುಖ್ಯ ಕಾದಂಬರಿ ಮತ್ತು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ' ಎಂಬ ಒಂದು ಸಾಲಿನ ಶಿಫಾರಸು ನೀಡುತ್ತಿದ್ದ ಕ್ರಮ ಇಂದಿಗೂ ಹೆಚ್ಚೇನೂ ಬದಲಾಗಿಲ್ಲ.
ಮಹಿಳೆಯರ ಮಹತ್ವದ, ಹೊಸ ನೋಟದ, ಅಸ್ಮಿತೆಯ, ಕೃತಿಗಳನ್ನು ಪುರುಷ ವಿಮರ್ಶಕರು ಗಮನಿಸಿಯೇ ಇಲ್ಲ; ಇನ್ನು ವಿಮರ್ಶೆ ಬರೆಯುವುದು ದೂರದ ಮಾತು. ಮುನ್ನುಡಿ, ಬೆನ್ನುಡಿ ಬರೆದ ಕೆಲವು ವಿಮರ್ಶಕರನ್ನು ಹೊರತುಪಡಿಸಿದರೆ, ಆ ಕೊರತೆಯನ್ನು ತುಂಬಿದ್ದು ವಿಮರ್ಶಕಿಯರೇ ಎಂಬುದನ್ನು ಗಮನಿಸಬೇಕು. ಇಂತಹ ಪೂರ್ವಗ್ರಹ, ಜಾಣ ಕುರುಡುತನ ಮತ್ತು ಮರೆವು ಇಂದಿಗೂ ವಿಮರ್ಶಕರಲ್ಲಿ ವ್ಯಾಪಕವಾಗಿರುವ ಹೊತ್ತಲ್ಲಿ ಕವಯಿತ್ರಿಯರ ಪ್ರಾತಿನಿಧಿಕ ಕವನ ಸಂಗ್ರಹಗಳಿಗೆ ಮಹತ್ವವೂ ಇದೆ; ಅವುಗಳ ಪ್ರಕಟಣೆಯ ಅಗತ್ಯವೂ ಇದೆ ಎಂದಿದ್ದಾರೆ ಪ್ರೊ. ಸಬಿಹಾ ಭೂಮಿಗೌಡ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
READ MORE