ಸುವರ್ಣಪುತ್ಥಳಿ -ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಭಾವಗೀತೆಗಳ ಸಂಕಲನ. ಬಹುತೇಕೆ ಕವಿತೆಗಳು ರಾಗ ಸಂಯೋಜನೆಗೊಂಡು ಗೀತೆಗಳಾಗಿವೆ. ಕವಿ ಪ್ರೊ ಕೆ. ಎಸ್ ನಿಸಾರ್ ಅಹಮದ್ ಅವರು ಮುನ್ನುಡಿ ಬರೆದು ‘ಕಲಾವಿದ ಬಾಗೂರು ಮಾರ್ಕಾಂಡೇಯ ಅವರ ರೇಖೆಗಳ ಹಾಗೂ ಚುಕ್ಕಿಚಿತ್ರಗಳ ಅರ್ಥಪೂರ್ಣ ಕಲೆಗಾರಿಕೆ ನನ್ನನ್ನು ಮೋಡಿಗೊಳಿಸಿದವು. ಬೇರೆಯ ಕಲಾವಿದರಿಗಿಂತ ಪ್ರತ್ಯೇಕವಾದ ವೈಶಿಷ್ಟ್ಯವನ್ನು ಈ ವ್ಯಕ್ತಿ ರೂಢಿಸಿಕೊಂಡಿರುವುದು ನನಗೆ ಮನವರಿಕೆಯಾಗಿದ್ದು ಅವರನ್ನು ಅಭಿನಂದಿಸಿದೆ. ನನಗೆ ಆಶ್ಯರ್ಯ ಮತ್ತು ಸಂತೋಷ ನೀಡಿದ ಸಂಗತಿ ಎಂದರೆ ಮಾರ್ಕಾಂಡೇಯ ಅವರಲ್ಲಿ ನೆಲೆಗೊಂಡ ಕವನ ರಚನಾ ಸಾಮರ್ಥ್ಯ, ಬರೆದ ಭಾವಗೀತೆಗಳು, ಮಕ್ಕಳಿಗಾಗಿ ಬರೆದ ಕೆಲವು ಚೆಲುವುಗವನಗಳನ್ನು ಓದಿದಾಗ ನನಗೆ ಈ ಕಲಾವಿದರ ಭಾವದ್ಯೋತಕ ಶಕ್ತಿಯ ಅರಿವು ಹಿರಿಮೆಯೆನಿಸಿತು. ಮಕ್ಕಳ ಮನೋಭಾವಕ್ಕೆ ತಕ್ಕಂತಹ ಸುಲಲಿತ, ಸುಭಗ ಪದ ಲಾಲಿತ್ಯ ಸರಳ ಹಾಗೂ ಮನಸ್ಸನ್ನು ಸೂರೆಗೊಳ್ಳುವ ನುಡಿ ಸಾಲು, ಚಿತ್ತಾರಗಳು ಪ್ರಾಸಗಳ ನಾಟ್ಯಶೀಲ ಗತಿ ನನಗೆ ಮೆಚ್ಚಾದವು. ಹೊಸ ಹೊಸ ವಿಷಯಗಳ ಸ್ವಾರಸ್ಯಕರವಾದ ನಿರೂಪಣೆ ಬಾಗೂರರಿಗೆ ಸುಲಭ ಸಾಧ್ಯವಾಗಿರುವುದು ಶ್ಲಾಘ್ಯ ಸಂಗತಿ... ಎಂದಿದ್ದಾರೆ.
ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ, ಚೈತ್ರ ಚೆಲುವು, ಸುವರ್ಣಪುತ್ಥಳಿ, ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...
READ MORE