ಆರಿಫ್ ರಾಜಾ ಅವರ ’ನಕ್ಷತ್ರ ಮೋಹ’ ಕವಿತಾ ಮಾಲಿಕೆಗೆ ಪಿ. ಲಂಕೇಶ್ ಪ್ರಶಸ್ತಿ ದೊರಕಿದೆ.
ಕವಿಯ ದೃಷ್ಟಿಯಲ್ಲಿ, ಸ್ಪರ್ಶದಲ್ಲಿ, ಆಲಿಸುವಿಕೆಯಲ್ಲಿ, ಅನುಭಾವದಲ್ಲಿ ವಿಹರಿಸುವ ಗಿರಕಿ ಹೊಡೆಯುವ ನಕ್ಷತ್ರ ರೂಪಕಗಳು ಒಳಗಿಳಿದು ಕತ್ತಲೆ ಬೆಳಕುಗಳ ದರ್ಶನ ಮಾಡಿಸುತ್ತಾ ಇವರ ಕವನ ಸಂಕಲನ ಓದುಗರಲ್ಲಿ ಸಾಗುತ್ತದೆ.
ತಾತ್ವಿಕ ನೆಲೆಗಟ್ಟಿನ ಕೆಲ ಮೋಹಗಳನ್ನೂ ಇಲ್ಲಿ ಕಾಣಬಹುದಾದರೆ, ಮನುಷ್ಯ ತನ್ನ ಬೆತ್ತಲೆಗೆ ನಾಚಿ ಬಟ್ಟೆ ತೊಟ್ಟ ದಿನ ಈ ಸೃಷ್ಟಿಯ ಕರಾಳ ದಿನ ಎನ್ನುವ ಸಾಲುಗಳು ಅಲ್ಲಮರನ್ನೂ ನೆನಪಿಸುತ್ತವೆ. ಬೆತ್ತಲೆಯ ವ್ಯಾಖ್ಯಾನವನ್ನೂ ಕೂಡ ವಿಡಂಬನಾತ್ಮಕ ಶೈಲಿಯಲ್ಲಿಯೇ ಮನಮುಟ್ಟಿಸುವ ಪ್ರಯತ್ನ ಇವರ ಕೃತಿಯಲ್ಲಿ ನಡೆದಿದೆ. ನಕ್ಷತ್ರವೊಂದರ ಇರುವಿಕೆಗಾಗಿ ಹಂಬಲಿಸುವ ಕವಿ, ಅರ್ಥದ ಅತಿಕ್ರಮಣವೆಂಬ ವಿರಳ ಪರಿಕಲ್ಪನೆಯಲ್ಲಿ ಬೆರಗುಗೊಳಿಸುತ್ತಾರೆ.
ನಾಯಿ ಬೊಗಳಿದರೆ ಸಾಕು
ನಕ್ಷತ್ರ ಉದುರಿ ಧರೆಗೆ ಬೀಳುವುದು
ಎಂದೂ ತುಂಬದ ಭುವಿಯೊಂದು
ಅವಕೆ ಅನುರಕ್ತ ಬೂದಿಬಟ್ಟಲು” ಎನ್ನುವಲ್ಲಿ ದಮನಿತ ನಕ್ಷತ್ರವೊಂದು ಮನಕಲಕುತ್ತದೆ.ಈ ನಕ್ಷತ್ರಗಳು ಶೋಷಿತ ಹೆಣ್ಣಿನ ವ್ಯಾಘ್ರ ಮುಖದಂತೆ ಗಹಗಹಿಸಿ ಅಳುವಿನಲ್ಲಿಯೇ ಅಂತ್ಯಕಾಣುವ ಕರಾಳ ಚಿತ್ರಗಳಂತೆ ತೋರುತ್ತದೆ.
2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಆರಿಫ್ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ...
READ MORE