‘ಮರೆತು ಬಿಟ್ಟದ್ದು’ ವಸುಂಧರಾ ಕೆ. ಎಂ ಅವರ ಮೊದಲ ಕವನ ಸಂಕಲನ. ಇತ್ತೀಚೆಗೆ ಕಾವ್ಯ ಕ್ಷೇತ್ರದಲ್ಲಿ ತುಂಬಾ ಜನ ಕೃಷಿ ಮಾಡುತ್ತಿದ್ದಾರೆ. ಔದ್ಯಮಿಕ ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣು ಸುತ್ತಲ ಜಗತ್ತನ್ನು ಎಚ್ಚರದಿಂದ ಗಮನಿಸುತ್ತಿದ್ದಾಳೆ. ಅವಳ ಅಸ್ಮಿತೆಯ ಹೆಜ್ಜೆ ಮುಂಚಿಗಿಂತಲೂ ಈಗ ಹೆಚ್ಚು ಸಂವೇದನಾಶೀಲವಾಗಿದೆ. ನಮ್ಮ ಚರಿತ್ರೆ, ಪುರಾಣ, ಇತಿಹಾಸಗಳು ಅವಳ ಮುಂದೆ ಅನೇಕ ಪ್ರಶ್ನೆಗಳನ್ನು ಎಸೆದಿವೆ. ಅವುಗಳ ವಿಶ್ಲೇಷಣೆಯಲ್ಲಿ ತೊಡಗಿಕೊಂಡು ಅವಳು ಭ್ರಾಂತಳಾಗಿದ್ದಾಳೆ, ವಿಭ್ರಾಂತಳಾಗಿದ್ದಾಳೆ.
ಕೆಲವಕ್ಕೆ ಉತ್ತರಗಳು ಜಟಿಲವಾಗಿವೆ. ಕೆಲವಕ್ಕೆ ಜಾಣ ಉತ್ತರಗಳನ್ನು ನಮ್ಮ ಭಾರತೀಯ ಪರಂಪರೆ, ಮೊದಲೇ ಕೆತ್ತಿ ಇಟ್ಟುಬಿಟ್ಟಿದೆ. ಆದರೂ ಅವಳ ಆತ್ಮಸಾಕ್ಷಿ ಈ ಉತ್ತರಗಳನ್ನು ಮನಸಾರೆ ಸ್ವೀಕರಿಸುತ್ತಿಲ್ಲ. ಇಂಥ ಹಿನ್ನೆಲೆಯಲ್ಲಿ ಸ್ತ್ರೀ ಪ್ರಜ್ಞೆಯೊಂದು, ತನ್ನ ಸೂಕ್ಷ್ಮಸಂವೇದನೆಗಳನ್ನು ಕಾವ್ಯ ಮಾಧ್ಯಮದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳ ಬಯಸುವುದನ್ನು ವಸುಂಧರಾ ಅವರ ಕವಿತೆಗಳಲ್ಲಿ ಗಾಢವಾಗಿ ಕಾಣುತ್ತೇವೆ.
ವಸುಂಧರಾ ಕೆ.ಎಂ ಅವರು ಮೂಲತಃ ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದವರು. ಹುಟ್ಟಿದ್ದು 1981 ಸೆಪ್ಟಂಬರ್ 14ರಂದು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಬಾರಿಗೇ ಉತ್ತೀರ್ಣರಾಗಿ 2006 ರಿಂದ ಕರ್ನಾಟಕ ರಾಜ್ಯ ಸರಕಾರಿ ಸೇವೆಯಲ್ಲಿದ್ದು ಪ್ರಸ್ತುತ ಕೃಷಿ ಮಾರಾಟ ಇಲಾಖೆಯಲ್ಲಿ ಉಪನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಮರೆತು ಬಿಟ್ಟದ್ದು’ ಇವರ ಪ್ರಥಮ ಕವನ ಸಂಕಲನ. ...
READ MORE