ಇದು ನಂದಿನಿ ವಿಶ್ವನಾಥರವರ ಎರಡನೆಯ ಕವನಸಂಕಲನ. ವಿಭಿನ್ನ ಕಾವ್ಯ ರಚನಾ ಶೈಲಿ ಹಾಗೂ ಭಾಷೆ, ಪ್ರತಿಮೆ, ರೂಪಕ, ಲಯಗಳು ನಂದಿನಿ ಅವರ ಕವಿತೆಗಳ ವಿಶೇಷ.
’ಮಾತು ಅತಿಯಾದರೆ ಬೆತ್ತಲೆಯ ಭಯ
ಮೌನಿಯಾದರೆ ಭಾವನೆಗಳ ಭಾರ' ಎನ್ನುವ ನಂದಿನಿ
’ಹಡಗು ಏರಿದ್ದಾಗಿದೆ ಕಂಡದ್ದೆಲ್ಲ
ನೀರು ಕಾಣದ್ದೆಲ್ಲ ಊರು' ಎಂದು ಬರೆಯಬಲ್ಲರು.
ಐವತ್ತು ಕವಿತೆಗಳಿರುವ ’ಒಳಸೆಲೆ’ ಯನ್ನು ನಂದಿನಿಯವರು ತಮ್ಮ ಕಾವ್ಯಗುರು ಬಿ.ಆರ್. ಲಕ್ಷ್ಮಣರಾವ್ ಅವರಿಗೆ ಅರ್ಪಿಸಿದ್ದಾರೆ.
ಗಂಡ ಮನೆಬಿಟ್ಟ ಬಳಿಕ ಅವಳು ಅಟ್ಟದಿಂದ ಹಳೆ ಪೆಟ್ಟಿಗೆ ಇಳಿಸುತ್ತಾಳೆ;
ಮನಸ್ಸಿನ ಭಾರವನ್ನು ಇಳಿಸಿದಂತೆಯೇ’ ಎನ್ನುವ ನಂದಿನಿ ಅವರ ಬಹುತೇಕ ಕವಿತೆಗಳು ಪ್ರೀತಿ, ಪ್ರೇಮ ಮತ್ತು ಲವಲವಿಕೆಯ ಸುತ್ತ ಹರಡಿರುವಂತಹವುಗಳು. ಅಪರೂಪಕ್ಕೆ ’ಬಡತನದ ಬೆರಗು’ ಎನ್ನುವಂತಹ ಕವಿತೆಗಳೂ ಇವೆ. ಅವುಗಳ ಸಂಖ್ಯೆ ಅತೀ ವಿರಳ. ಒಲವು ಅವರ ಕವಿತೆಗಳ ಕೇಂದ್ರ ಕಾಳಜಿ.
ಬೆನ್ನುಡಿಯಲ್ಲಿ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ’ನಂದಿನಿ ಅವರ ಕವಿತೆಗಳು ಬೇಲಿಯ ಮೇಲೆ ಮಾನವಾಗಿ , ಡೋಲಾಯಮಾನವಾಗಿ ಕುಳಿತ ಅಚ್ಚ ಶುಭ್ರ ನೀಲಿ ಹೂವಿನ ನಿಟ್ಟುಸಿರಿನ ಸ್ವಗತದಂತಿದೆ. ಹೆಣ್ಣೆಂದರೆ ಹೀಗೇ ಬರೆಯಬೇಕೆಂಬ ಅಲಿಖಿತ ಸಂವಿಧಾನಕ್ಕೆ ಕಟ್ಟಿ ಕೊಳ್ಳದೇ ತನಗೆ ಅತ್ಯಾಪ್ತ ನೆಲೆಯಲ್ಲಿ
ಅನ್ನಿಸಿದ್ದನ್ನು ಹಿಂಜರಿಕೆ ಇಲ್ಲದೇ ಹೊರಹಾಕುವ ನೀಳ್ದನಿಯ ಆರ್ತಾಲಾಪಗಳು ಇವು. ಸಹಜ ಕವಯತ್ರಿ ನಂದಿನಿ, ಹಾಗಾಗಿ ಈ ಆಲಾಪಗಳಲ್ಲಿ ಎಲ್ಲೂ ಅಪಸ್ವರ
ಕಾಣದು. ಈ ಸ್ವಕೀಯ ಕವಿತೆಗಳನ್ನು ನೋಡುವಾಗ ನಂದಿನಿಯವರ ಭಾಷಾ ಸೂಕ್ಷ್ಮತೆ, ಲಯ ಪ್ರಜ್ಞೆ, ಸಹಜ ಪ್ರಾಸಾನುಪ್ರಾಸಗಳ ರಿಂಗಣ, ಜಾನಪದ ವರಸೆಗಳನ್ನು
ಆಧುನಿಕತೆಗೆ ಬೆಸೆಯುವ ಸಲೀಲವಾದ ವಿಲಾಸ, ಮುಟ್ಟಿದರೆ ಮಾಸಬಹುದೆನ್ನಿಸುವ ಕೋಮಲತೆ, ಇಷ್ಟಾಗಿಯೂ ತನ್ನ ಅಸ್ಮಿತೆಯನ್ನು ಸ್ಥಾಪಿಸುವ ಒಳಹಠ ಇವನ್ನು ಸೂಕ್ಷ್ಮ ಕಾವ್ಯ ಸಂವೇದಿ ಗಮನಿಸಿಯೇ ಗಮನಿಸುತ್ತಾನೆ. ಅಪ್ಪಟ ಪ್ರಾಮಾಣಿಕತೆ ಈ ಕವಿತೆಗಳ ಸಾರಸತ್ತ್ವವಾಗಿದೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ. ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ. ...
READ MORE