ಕರಾವಳಿಯ 96 ಕವಿಗಳ ಕವಿತೆಗಳನ್ನು ಕಾವ್ಯ ಸಂಗಮ' ಕೃತಿಯಲ್ಲಿ ಜೊತೆಗೂಡಿಸಲಾಗಿದ್ದು ಇದು ಕರಾವಳಿಯ ಸಮಗ್ರ ಕಾವ್ಯವನ್ನು ಅಥವಾ ಎಲ್ಲ ಕವಿಗಳನ್ನು ಒಟ್ಟು ಸೇರಿಸಿದೆ ಎಂದು ಹೇಳುವಂತಿಲ್ಲವಾದರೂ, ಗರಿಷ್ಠ ಮಟ್ಟದಲ್ಲಿ ಒಟ್ಟು ಸೇರಿಸಲು ಪ್ರಯತ್ನಿಸಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ. ಈ ಹಿಂದೆಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕವಿಗಳನ್ನು ಕತೆಗಾರರನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. ಆ ಪ್ರಯತ್ನಗಳ ಸಾಲಲ್ಲಿ ಈ 'ಕಾವ್ಯ ಸಂಗಮ'ವನ್ನು ಸೇರಿಸಬಹುದು. ಇಲ್ಲಿ ಕವಿತೆಗಳನ್ನು, ಕವಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಲ್ಲ ಬಗೆಯ ಚಿಂತನೆಗಳ ಕುರಿತಂತೆ ಒಲವಿರುವವರನ್ನು ಗುರುತಿಸಲಾಗಿದೆ. ಅಂಬಾತನಯ ಮುದ್ರಾಡಿ, ಅಂಶುಮಾಲಿ, ಜನಾರ್ದನ ಭಟ್, ಜಯರಾಮ ಕಾರಂತರಿಂದ ಹಿಡಿದು, ಆರ್ಕೆ ಮಣಿಪಾಲ, ನಾ. ಮೊಗಸಾಲೆ, ಗುಲಾಬಿ ಬಿಳಿಮಲೆ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದವರೂ ಇದ್ದಾರೆ. ನವೋದಯ, ಬಂಡಾಯ, ನವ್ಯ, ನವ್ಯೂತ್ತರ ಎಲ್ಲವೂ ಕರಾವಳಿಯ ಕಡಲ ಅಲೆಗಳಲ್ಲಿ ಅನ್ನೋನ್ಯವಾಗಿವೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡದ ಬಹುಮುಖ್ಯ ಮಾನವೀಯ ಮನಸ್ಸುಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಸುಬ್ರಾಯ ಚೊಕ್ಕಾಡಿ, ವಿಷ್ಣು ನಾಯ್ಕ, ಡಾ. ಸಬಿಹಾ ಭೂಮಿಗೌಡ, ಹರಿಯಪ್ಪ ಪೇಜಾವರ, ವನರಾಗ ಶರ್ಮ, ರಾಧಾಕೃಷ್ಣ ಉಳಿಯತ್ತಡ್ಕ, ಶಶಿಲೇಖಾ ಬಿ, ಡಾ. ಶರಭೇಂದ್ರ ಸ್ವಾಮಿ, ರಾಜು ಹೆಗಡೆ, ಚಂದ್ರಕಲಾ ನಂದಾವರ, ಜ್ಯೋತಿ ಗುರುಪ್ರಸಾದ್, ಮೇಟಿ ಮುದಿಯಪ್ಪ ಮುಂತಾದ ಪ್ರಬುದ್ಧ ಕವಿ ಕವಯಿತ್ರಿಯರ ಕವನಗಳು ವರ್ಗೀಕರಣಕ್ಕೆ ಸಿಗದಂತೆ ಬದುಕಿನ ಅರ್ಥವನ್ನು, ವರ್ತಮಾನದ ತಲ್ಲಣಗಳನ್ನು ಕಾವ್ಯ ಪ್ರಕಾರದಲ್ಲಿ ದಾಖಲಿಸಲಾಗಿದ್ದು ಯುವಕವಿಗಳ ಕವಿತೆಗಳೂ ಇಲ್ಗಲಿ ಮನಾರ್ಹವಾಗಿವೆ.