ಲಿಂಗರಾಜ ರಾಮಾಪೂರ ಅವರ ಗದ್ಯ ಕವನಗಳ ಕೃತಿ-ಚಿರಸ್ಮರಣೆ-ವ್ಯಕ್ತಿಚಿತ್ರ ಕಾವ್ಯ. ಇಲ್ಲಿ ವ್ಯಕ್ತಿ ಚಿತ್ರಗಳ ಕಾವ್ಯವಿದೆ. ‘ನನ್ನ ಪ್ರೀತಿ ಗೌರವಾದರಗಳಿಗೆ ಪಾತ್ರರಾದ ವ್ಯಕ್ತಿಗಳನ್ನು ಕುರಿತು ಅವರ ಚಿಂತನೆ, ಸಾಧನೆಗಳ ಕುರಿತು ನಾನು ನನ್ನ ಮನಸ್ಸು, ಬುದ್ಧಿಯಲ್ಲಿ ಆಳವಾದ ಚಿಂತನಗೈದು ಬರೆದಿರುವುದಾಗಿ ನಮ್ರವಾಗಿ ನಿವೇದಿಸುತ್ತಿರುವೆ’ ಎಂದು ಕವಿ ತಮ್ಮ ನಿವೇದನೆಯ ಮಾತುಗಳಲ್ಲಿ ಹೇಳಿದ್ದಾರೆ. ಜನಪರ ಮತ್ತು ಜೀವಪರವಾಗಿ ತಮ್ಮನ್ನು ಅರ್ಪಿಸಿಕೊಂಡ ಸಾಹಿತಿ, ವಿಜ್ಞಾನಿ, ಗಾಯಕ, ಸೈನಿಕ. ಗುರು ಮತ್ತು ಸಮಾಜ ಸೇವಕರ ಕುರಿತಾದ ಅರ್ಥಪೂರ್ಣ ಮತ್ತು ಭಾವಪೂರ್ಣವಾದ ಇಲ್ಲಿಯ ಕವನಗಳು ಓದಿಸಿಕೊಳ್ಳುತ್ತವೆ.
ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...
READ MOREಈಗಾಗಲೇ ವೈಜ್ಞಾನಿಕ ಬರಹಗಳಿಂದ ಗುರುತಿಸಿಕೊಂಡಿರುವ ಯುವ ಶಿಕ್ಷಕ, ಲೇಖಕ ಡಾ.ಲಿಂಗರಾಜ ರಾಮಾಪೂರ ತಮ್ಮ ಸಮೀಪಕ್ಕೆ, ಸಂಪರ್ಕಕ್ಕೆ ಬಂದ ಮಹನೀಯರ ಕುರಿತ ನುಡಿನಮನಗಳನ್ನೇ ಕಾವ್ಯರೂಪಕ್ಕಿಳಿಸಿ ‘ಚಿರಸ್ಮರಣೆ’ ಎಂಬ ಶೀರ್ಷಿಕೆಯಡಿ 33 ಕವನಗಳ ಮೂಲಕ ಓದುಗರ ಕೈಗೆ ಕೊಟ್ಟಿದ್ದಾರೆ. ಇಂತಹ ಪ್ರಯೋಗ ಹೊಸದಲ್ಲದಿದ್ದರೂ ಲಿಂಗರಾಜರು ಕೊಂಚ ವಿಭಿನ್ನವಾಗಿ, ಸರಳವಾಗಿ ಹೊಸ ಓದುಗರಿಗೆ ಅರ್ಥವಾಗುವ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲರಾಗಿದ್ದಾರೆ ಎನ್ನಬಹುದು.
ದೇಶ ಕಂಡ ಮಹಾನ್ ವ್ಯಕ್ತಿಗಳ ಸಾವು ಬರೀ ಸಾವಷ್ಟೇ ಆಗದೇ ಅವರು ಶಾಶ್ವತವಾಗಿ ನಮ್ಮೊಂದಿಗೆ ನೆಲೆಸಿಬಿಡುತ್ತಾರೆ. ಅಂತಹ ಹಿನ್ನೆಲೆಯಲ್ಲಿ ಈ ಕವನ ಸಂಕಲನವನ್ನು ಹೊರತರಲಾಗಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಸಂಗೀತ, ಕಲೆ, ಕ್ರೀಡೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿ ಅಪಾರ ಖ್ಯಾತಿ ಗಳಿಸಿದ ಹಲವು ವ್ಯಕ್ತಿಗಳಿಗೆ ನುಡಿ ನಮನ ಸಲ್ಲಿಸುವ ಶೃದ್ಧಾಂಜಲಿಯೇ ‘ಚಿರಸ್ಮರಣೆ’.
ಇದೊಂದು ಗದ್ಯ ಕವನಗಳ ಕೃತಿ. ಇಲ್ಲಿ ವ್ಯಕ್ತಿ ಚಿತ್ರಗಳ ಕಾವ್ಯವಿದೆ. ‘ನನ್ನ ಪ್ರೀತಿ ಗೌರವಾದರಗಳಿಗೆ ಪಾತ್ರರಾದ ವ್ಯಕ್ತಿಗಳನ್ನು ಕುರಿತು ಅವರ ಚಿಂತನೆ, ಸಾಧನೆಗಳ ಕುರಿತು ನಾನು ನನ್ನ ಮನಸ್ಸು, ಬುದ್ಧಿಯಲ್ಲಿ ಆಳವಾದ ಚಿಂತನಗೈದು ಬರೆದಿರುವುದಾಗಿ ನಮ್ರವಾಗಿ ನಿವೇದಿಸುತ್ತಿರುವೆ’ ಎಂದು ಕವಿ ತಮ್ಮ ನಿವೇದನೆಯ ಮಾತುಗಳಲ್ಲಿ ಹೇಳಿದ್ದಾರೆ.
ಜನಪರ ಮತ್ತು ಜೀವಪರವಾಗಿ ತಮ್ಮನ್ನು ಅರ್ಪಿಸಿಕೊಂಡ ಸಾಹಿತಿ, ವಿಜ್ಞಾನಿ, ಗಾಯಕ, ಸೈನಿಕ. ಗುರು ಮತ್ತು ಸಮಾಜ ಸೇವಕರ ಕುರಿತಾದ ಅರ್ಥಪೂರ್ಣ ಮತ್ತು ಭಾವಪೂರ್ಣವಾದ ಇಲ್ಲಿನ ಕವನಗಳು ಮತ್ತೊಮ್ಮೆ, ಮಗದೊಮ್ಮೆ ಓದುವಂತೆ ಮಾಡುತ್ತವೆ. ಆಯಾ ಸಂದರ್ಭಕ್ಕೆ ಅಲ್ಲಿನ ವ್ಯಕ್ತಿಗಳ ಚಿತ್ರಣವನ್ನು ಭಾವಪೂರ್ಣ ವಾಗಿ ಕಟ್ಟಿಕೊಡುತ್ತವೆ.
ನಾದಲೋಕದ ದಿವ್ಯ ಬೆಳಕೆ
ಪುಟ್ಟರಾಜ ಪ್ರಭಾಕರ
ವೇದಶಾಸ್ರ್ತ ಪುರಾಣ ಪುಟದೊಳು
ಚಿತ್ತ ಬೆಳಕು ಚಂದಿರ
(ಪುಟ್ಟರಾಜ)
ಜ್ಞಾನವೇ ಯಜ್ಞವೆಂದು
ಅನ್ನವೇ ದೇವರೆಂದು
ವಿದ್ಯೆಯೇ ಮಂತ್ರವೆಂದು
ಬದುಕನ್ನೇ ಪವಾಡವನ್ನಾಗಿಸಿದೆ
(ಮಹಾಚೇತನ ಶಿವಕುಮಾರ ಶ್ರೀ)
ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಘರ್ಜಿಸಿ
ಕನ್ನಡ ಪ್ರೀತಿಯ ಉಜ್ವಲ ಹಣತೆಯ ಬೀಗಿ
(ಶರಣರ ನಿಜರೂಪ)
ಬೀಜಬಿತ್ತುವುದ ಬಿಟ್ಟು ಬಂದನೊಬ್ಬ ಯೋಗಿ
ಭವದ ಕಳೆಯನು ತೆಗೆಯುತ ಅವನಾಗಲಿಲ್ಲ ಭೋಗಿ
(ಅಕಳಂಕ ಅಟಲ್)
ಹೀಗೆ ಗದ್ಯ ಕಾವ್ಯಗಳು ಓದುಗನಿಗೆ ಅರ್ಥಪೂರ್ಣವಾದ ವ್ಯಕ್ತಿ ಚಿತ್ರಣವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತವೆ. ಕವಿ ತಮ್ಮ ಸೇವಾ ಅವಧಿಯಲ್ಲಿ ಸಮೀಪಕ್ಕೆ, ಸಂಪರ್ಕಕ್ಕೆ ಬಂದ ಸಮಾಜದ ಹಲವು ರಂಗಗಳ ಸಾಧಕರ ಚಿತ್ರವನ್ನು ಇಲ್ಲಿನ ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಸಾಹಿತ್ಯ ಲೋಕದ ದಿಗ್ಗಜರಾದ ಮಾಸ್ತಿ, ತೋಫಖಾನೆ, ನಿಸ್ಸಾರ ಅಹ್ಮದ್, ರಾಷ್ಟ್ರಕವಿ ಶಿವರುದ್ರಪ್ಪ, ಡಾ.ಕರ್ಕಿ, ಸುದರ್ಶನ ದೇಸಾಯಿ, ದೊಡ್ಡಣ್ಣ ಗದ್ದನಕೇರಿ, ಚಂದ್ರಕಾಂತ ಕರದಳ್ಳಿ, ಸಂಶೋಧಕ ಕಲಬುರ್ಗಿ, ಈಶ್ವರ ಕಮ್ಮಾರ, ಆರೂರು ಲಕ್ಷ್ಮಣ ಶೇಟ್ ಮುಂತಾದವರ ನುಡಿನಮನದ ಶ್ರದ್ಧಾಂಜಲಿಯ ಕವನಗಳ ಜೊತೆಗೆ ಸಿನಿಜಗತ್ತಿನ ಡಾ.ರಾಜಕುಮಾರ, ವಿಷ್ಣುವರ್ಧನ, ಅಂಬರೀಶ ಹಾಗೂ ಜೀವಪರ ನಿಲುವಿನ ಗದುಗಿನ ತೋಂಟದಾರ್ಯ ಸ್ವಾಮಿಗಳು, ಇಳಕಲ್ ಮಹಾಂತ ಸ್ವಾಮಿಗಳು, ಶಿವಾನಂದ ಶ್ರೀಗಳ ಕವನಗಳು ಅಲ್ಲದೇ ತಮ್ಮ ಅಜ್ಜನವರ ಬಗ್ಗೆ ಬರೆದ ‘ಅಧ್ಯಾತ್ಮಜೀವಿ ಈರಪ್ಪಜ್ಜ’, ‘ಅಕ್ಷರದಾನಿ ಕರಡಿ ಮಾಸ್ತರ’ ಕವನಗಳು ಓದಿಸಿಕೊಂಡು ಹೋಗುತ್ತವೆ.
ಸುಮಾರು 28 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ, 12 ಕೃತಿಗಳನ್ನು ಸಂಪಾದಿಸಿದ ಡಾ.ಲಿಂಗರಾಜ ರಾಮಾಪೂರವರ ಈ ‘ಚಿರಸ್ಮರಣೆ’ ಗದ್ಯಕಾವ್ಯ ಸಂಕಲನ ಒಂದು ಹೊಸ ಪ್ರಯೋಗವೆಂದೇ ಹೇಳಬೇಕು. ತಮ್ಮ ಸ್ಮೃತಿಪಟಲದ ಅನಿಸಿಕೆಗಳನ್ನು ಅಕ್ಷರರೂಪಕ್ಕೆ ಇಳಿಸಿ ಕಾವ್ಯರೂಪದಲ್ಲಿ ಹರಿಸಿ ಓದುಗರಿಗೆ ನೀಡಿದ್ದಾರೆ. ಈ ಕವಿತೆಗಳಿಗೆ ಗೆಳೆಯ, ಚಿತ್ರ ಕಲಾವಿದ ಸಂಜಯ ಕಾಳೆ ಅವರು ರೇಖಾಚಿತ್ರಗಳನ್ನು ಒದಗಿಸಿ ಕವಿತೆಗಳಿಗೆ ಹೆಚ್ಚು ಮೆರಗು ನೀಡಿದ್ದಾರೆ.
ಸದಾ ಹೊಸದರತ್ತ ತುಡಿಯುವ ಡಾ.ಲಿಂಗರಾಜ ರಾಮಾಪೂರ ನಮ್ಮ ಬಳಗದ ಒಬ್ಬ ಕ್ರಿಯಾಶೀಲ ಮತ್ತು ಸೃಜನಶೀಲ ವ್ಯಕ್ತಿತ್ವದ ಯುವ ಲೇಖಕ. ತಮ್ಮ ಸಾಹಿತ್ಯಕ ಮತ್ತು ವೈಜ್ಞಾನಿಕ ಚಟುವಟಿಕೆಗಳಿಂದ ನಾಡಿನ ತುಂಬ ಚಿರಪರಿಚಿತರಾಗಿದ್ದಾರೆ. ಆದರ್ಶ ಶಿಕ್ಷಕರಾದ ಇವರು ಗೌರವ ಸಮ್ಮಾನಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಮೆರಿಕ ಸುತ್ತಿ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ನೀಡಿದ್ದಾರೆ. ತಮ್ಮ ಪ್ರಾಂಗಣದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಸದಾ ನಿರತರಾಗಿರುವ ಮಗು ಮನಸ್ಸಿನ ಲಿಂಗರಾಜರಿಂದ ಇನ್ನೂ ಅರ್ಥಪೂರ್ಣವಾದ ಮಕ್ಕಳ ಮನೋವಿಕಾಸದ ಕೃತಿಗಳನ್ನು ನಿರೀಕ್ಷಿಸಿ ಈ ಸುಂದರ ವ್ಯಕ್ತಿಚಿತ್ರಣ ‘ಚಿರಸ್ಮರಣೆ’ಗೆ ಹಾರೈಸಿ, ಶುಭ ಕೋರಿ ಅವರನ್ನು ಅಭಿನಂದಿಸುತ್ತೇನೆ.
-ಬಸವರಾಜ ಗಾರ್ಗಿ, ಬೆಳಗಾವಿ, ಸಂಸ್ಥಾಪಕ ಸದಸ್ಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ
(ಕೃತಿಯ ಮುನ್ನುಡಿ)