‘ಕನ್ನಡಿ ಮುಂದೆ ನಿಂತಾಗ’ ಕವಿ, ರಂಗಕರ್ಮಿ ಬೇಲೂರು ರಘುನಂದನ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಎಂ.ವಿ.ವಸು ಹಾಗೂ ಸುಧಾ ಅಡಗೂರು ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ.. ‘ಸಮಕಾಲೀನ ಕನ್ನಡ ಸಾಹಿತ್ಯ ಆಧುನಿಕೋತ್ತರದ ಕಡೆ ಸಾಗುತ್ತಿದೆ. ಆದರೆ ದಟ್ಟವಾದ ಲಕ್ಷಣಗಳನ್ನು ಅದು ಹೊದ್ದಂತೆ ಕಾಣುವುದಿಲ್ಲ. ಒಂದು ಚೌಕಟ್ಟಿಗೆ ಸಿಗದೆ ಹೋಗುವ ಆ ಗುಣ ಅಲ್ಲಲ್ಲಿ ಇಟುಕುತ್ತಿದೆ. ನವೋದಯದ ಮಧುರ ಭಾವದ ಜಾಡು ಹಿಡಿಯುವ ಬರವಣಿಗೆಗಳು ಇನ್ನೂ ಮುಂದುವರೆದಿವೆ. ಹಾಗೆಯೇ ನವ್ಯದ ಅಸಂಗತ ಶೈಲಿ, ನೋವು ಪ್ರತಿಭಟನೆಗೆ ದನಿಯಾದ ದಲಿತ ಸಾಹಿತ್ಯ, ಲಿಂಗ ಸೂಕ್ಷ್ಮತೆಗಳು ಮೇಳೈಸಿಕೊಂಡ ಕಾಲಘಟ್ಟವಾಗಿ ಕಾಣಬರುತ್ತಿದೆ. ಈ ಕಾಲಘಟ್ಟದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ರಘುನಂದನ್ ಅವರ ಕವನಗಲೂ ಇದೇ ದಾಟಿಯಲ್ಲಿ ಸಾಗುತ್ತಿವೆ. ಕವಿಯಾಗುವ, ಕವಿತ್ವದ ಜೋಂಪಿನಲ್ಲಿ ಸಾಗುವ ವ್ಯಕ್ತಿತ್ವ ಅವರಲ್ಲಿ ಕಾಣಬರುತ್ತಿದೆ. ಬೇಲೂರಿನಂತಹ ಪಟ್ಟಣ ಪ್ರದೇಶದ ಹಿನ್ನೆಲೆಯಲ್ಲಿ ಬಂದು, ಹಾಸನದಲ್ಲಿ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿ ಇಂದು ಬೆಂಗಳೂರು ಮಹಾನಗರದಲ್ಲಿ ಬದುಕುವ ರಘುನಂದನ್ ಅವರ ವ್ಯಕ್ತಿತ್ವ ವಿಕಸನದಲ್ಲಿ ಎದುರಾಗುವ ಸವಾಲುಗಳು ಕವನದ ಸಾಲುಗಳಲ್ಲಿ ಬೆಸೆದುಕೊಂಡಿವೆ ಎನ್ನುತ್ತಾರೆ ಎಂ.ವಿ. ವಸು. ಜೊತೆಗೆ ಹೊಸ ಪೀಳಿಗೆಗಿರುವ ಸವಾಲುಗಳು ಕವಿಗಿರುವ ಸಾಧ್ಯತೆಗಳೂ ಆಗಿವೆ. ಕನ್ನಡಿ ಮುಂದೆ ನಿಂತಾಗ ಕವನ ಸಂಕಲನ ಕವಿ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.. ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...
READ MORE