ಅಯ್ಯೋ ನಾನು ದೇವರಲ್ಲ...! ಎಂಬುದು ಕವಿ ವೃಶ್ಚಿಕಮುನಿ ಪ್ರವೀಣ್‌ಕುಮಾರ್ ಸುಲಾಖೆ, ಗುಳೇದಗುಡ್ಡ ಅವರ ಕವನ ಸಂಕಲನ. 60ಕ್ಕೂ ಹೆಚ್ಚು ಕವಿತೆಗಳನ್ನು ಒಳಗೊಂಡಿದೆ. ಬದುಕಿನ ವಿವಿಧ ಆಯಾಮಗಳು ಕವಿತೆಗಳ ವಸ್ತು. ಇಲ್ಲಿಯ ಬಹುತೇಕ ಕವಿತೆಗಳು ನಾಡಿನ ವಿವಿಧ ಪ್ರತಿಕೆಗಳಲ್ಲಿ ಪ್ರಕಟವಾಗಿದೆ.
ಪ್ರವೀಣಕುಮಾರ ಸುಲಾಖೆ ಗುಳೇದಗುಡ್ಡ ಅವರು ಕವಿ, ಲೇಖಕರು. ವೃಶ್ಚಿಕಮುನಿ ಎಂಬುದು ಇವರ ಕಾವ್ಯನಾಮ. ಪ್ರಸ್ತುತ ದಾಂಡೇಲಿಯಲ್ಲಿ ವಾಸವಾಗಿದ್ದು, ದಾಂಡೇಲಿ ಬಂಗೂರ ನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಪ್ರಜಾವಾಣಿ ಪತ್ರಿಕೆಯ ಸ್ಥಳೀಯ ವರದಿಗಾರರಾಗಿದ್ದಾರೆ. ಕೃತಿಗಳು: ಬೊಗಸೆಯಷ್ಟು ಹನಿ, ಅವಗಣನೆ (ಕವನ ಸಂಕಲನ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ದೀಪಾವಳಿ, ಯುಗಾದಿ ಕತೆ, ಕವನ ಸ್ಪರ್ಧೆಗಳಲ್ಲಿಯೂ ಇವರ ಬರಹಗಳು ಬಹುಮಾನ ಪಡೆದಿವೆ. ...
READ MOREಮುನ್ನುಡಿ
ಕವಿತೆ ಸುಮ್ಮನೆ ಕೈ ಹಿಡಿಯುವುದಿಲ್ಲ. ಆದ್ದರಿಂದಲೇ ಎಲ್ಲರೂ ನಿಜ ಕವಿಗಳಾಗುವುದಿಲ್ಲ. ಬರೆಯಲೇಬೇಕು ಎನ್ನುವ ಹುಕಿಗೆ ಬಿದ್ದವರು ಡೈರಿಯನ್ನೂ ಬರೆಯಬಹುದು, ಅರ್ಜಿ, ಪರೀಕ್ಷೆಗಳನ್ನೂ ಬರೆಯಬಹುದು. ಆದರೆ ಕವಿತೆ ಬರೆಯುವುದು? ಉಹ್ಞೂಂ, ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ಕವಿತೆಯೊಂದು ಬಂದು ಅಪ್ಪಿಕೊಳ್ಳುವಂತಹ ಮನಸ್ಸು-ಹೃದಯ ಎಲ್ಲರಲ್ಲಿಯೂ ಇರುವುದಿಲ್ಲ. ಕವಿತೆಯೊಂದು ಓದಿಕೊಂಡವನ ಮನಸ್ಸಿಗೂ ಕವಿತೆಯಾಗಿಯೇ ಹಿತವಾಗಿ ಆತುಕೊಂಡಿತೆಂದರೆ, ಅವನು ನಿಜವಾದ ಕವಿ. ಮತ್ತು ಕವಿತೆಗಳು ಅವನನ್ನು ಹಿಂಬಾಲಿಸಿಕೊಂಡು ಬಂದು ‘ನನ್ನನ್ನೂ ನಿನ್ನ ಮಡಿಲಿಗೆಳೆದುಕೋ’ ಎಂದು ಪ್ರೀತಿಯಿಂದಲೇ ಓಲೈಸಲಾರಂಭಿಸುತ್ತವೆ. ಹೀಗೆ ಒಲವೆನ್ನುವುದು ಕವಿ ಮತ್ತು ಕವಿತೆಯ ನಡುವಿದ್ದಾಗಲೇ ಓದುಗನಿಗೆ ಕವಿ-ಕವಿತೆಗಳೆರಡೂ ಕಾಡಲಾರಂಭಿಸುತ್ತವೆ.
ಸವೆದ ದಾರಿಯಲಿ ಸಾವಿರ ನೋವು, ಸಂತಸವಿದೆ ಹಿಂತಿರುಗಿ ನೋಡಿದರೆ ನಾನು - ನೀನು ಮಾತ್ರವೇ ಸಂಬಂಧದ ಅರ್ಥ ಹುಡುಕಿ ಸೋತೆವು ನಂಟು ಅಂಟಾಗುತ್ತಿಲ್ಲ...!’ (ಹೆಜ್ಜೆಗುರುತು) ಬದುಕು ಮತ್ತು ಪ್ರೀತಿಯ ನಡುವಿನ ಹೊಯ್ದಾಟವನ್ನು ಹೀಗೆ ಕೇವಲ ನಾಲ್ಕು ಸಾಲುಗಳಲ್ಲೇ ಕಟ್ಟಿಕೊಟ್ಟು, ಪ್ರೀತಿಗಾಗಿಯೇ ಬದುಕುವ ಬದುಕಿನ ಪೂರ್ಣ ಚಿತ್ರಣವನ್ನು ನಮ್ಮ ಕಣ್ಣೆದುರು ತಂದು ನಿಲ್ಲಿಸುವ ರೀತಿಯಿದೆಯಲ್ಲ, ಅದೇ ಪ್ರವೀಣಕುಮಾರ ಸುಲಾಖೆ ಅವರೊಳಗಿನ ಕವಿ ಎಷ್ಟು ನಿಜ’ ಎನ್ನುವುದನ್ನು ತೋರಿಸಿಬಿಡುತ್ತದೆ. ಈ ಕಾರಣದಿಂದಲೇ ಪ್ರವೀಣಕುಮಾರ ಸುಲಾಖೆ ಅವರ ಕವಿತೆಗಳ ಓದು ಖುಷಿ ಕೊಡುತ್ತದೆ. ನನ್ನ ಕವಿತೆಗಳು ನನ್ನ ಬದುಕಿನ ಪ್ರತಿಬಿಂಬದಂತೆ ಎಂದೇ ಭಾವಿಸಿಕೊಂಡು ಕವಿತೆಗಳನ್ನು ಅಕ್ಷರಗಳಲ್ಲಿ ಪೋಣಿಸಿಡುವ ಪ್ರವೀಣಕುಮಾರ ಅವರ ಕವಿತೆಗಳು ಬದುಕಿನೆಲ್ಲ ಸಂಗತಿಗಳನ್ನೂ ಒಳಗೊಳ್ಳುತ್ತಾ ಹೋಗುವುದರಿಂದಲೇ ಇನ್ನಷ್ಟು ಖುಷಿ ಕೊಡುತ್ತದೆ. ಅವರು ಕವಿತೆಗಳನ್ನು ಬರೀ ಪ್ರೀತಿಯ ಗೂಟಕ್ಕೆ ಮಾತ್ರವೇ ಕಟ್ಟಿ ಹಾಕಿಲ್ಲ, ಬದಲಿಗೆ ಬದುಕು ಸಾಗುವ ದಾರಿಯಲ್ಲಿ ಎದುರಾಗುವ ಎಲ್ಲವಕ್ಕೂ ಕವಿತೆಗಳನ್ನು ಕಟ್ಟುತ್ತಾ ಹೋಗುತ್ತಾರೆ. ಇದೇನು ಕವಿತೆ ಎಂದರೆ ಬರೀ ಪ್ರೀತಿಯನ್ನಪ್ಪಿಕೊಂಡು ಬಿಟ್ಟಿದೆ ಎಂದುಕೊಳ್ಳುವಾಗ ಬಂಡಾಯದ ಬಾವುಟದ ಗೂಟದಲ್ಲಿ ಕವಿತೆ ಪಟಪಟಿಸುತ್ತದೆ! ಇನ್ನೊಂದು ಕವಿತೆಯಲ್ಲಿ ಸಮಾಜ-ಅವ್ಯವಸ್ಥೆ ವಿರುದ್ಧದ ಕೂಗು ಮುಗಿಲು ಮುಟ್ಟುತ್ತದೆ. ಮೂಢನಂಬಿಕೆ, ದೇವರ ಬಗ್ಗೆ ಇರುವ ನಂಬಿಕೆ-ಅಪನಂಬಿಕೆಯ ನಡುವಿನ ಗೊಂದಲಗಳು ಕವಿತೆಯಾಗಿ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತವೆ. ಈ ಕಾರಣದಿಂದಲೇ ಅಯ್ಯೋ ನಾನು ದೇವರಲ್ಲ...!’ ಸಂಕಲನದಲ್ಲಿರುವ ಪ್ರವೀಣಕುಮಾರ ಅವರ ಕವಿತೆಗಳು ಇಷ್ಟವಾಗುತ್ತಾ ಹೋಗುವುದರ ಜೊತೆಗೆ, ನಮ್ಮದೇ’ ಯೋಚನೆ, ಆಕ್ರೋಶ, ಚಿಂತನೆಗಳ ಜೋಳಿಗೆಯಾಗಿ ನಮ್ಮ ಹೆಗಲಿಗೇರಿದಂತೆ ಭಾಸವಾಗುತ್ತದೆ.
ಒಂದು ಪ್ರಶ್ನೆ ಅವನು ನಮ್ಮನ್ನು ಸೃಷ್ಟಿಸಿದನೋ ಇಲ್ಲಾ ನಾವು ಅವನನ್ನು ಸೃಷ್ಟಿಸಿದೆವೋ ಉತ್ತರವಿಲ್ಲ ನನಗೆ ಯಾಕೆಂದರೆ ಅವನು ದೇವರು...!’ (ಯಾಕೆಂದರೆ ಇವನು ದೇವರು!) ದೇವರು ಕೂಡಾ ನನ್ನಂತೆಯೇ ಅನಾಥನೇನೋ ಎನ್ನುವ ಅನುಮಾನಕ್ಕೀಡಾಗುವ ಕವಿಗೆ ಕೊನೆಗೆ ಅವನು ನನ್ನಂತಲ್ಲ, ಅವನು ದೇವರು. ಆದ್ದರಿಂದ ಅನಾಥನಲ್ಲ ಅನ್ನಿಸಿದ ನಂತರ, ದೇವರು ನಮ್ಮ ಸೃಷ್ಟಿಯೋ ಅಥವಾ ನಾವು ದೇವರ ಸೃಷ್ಟಿಯೋ ಎನ್ನುವ ಅನುಮಾನ ಕಾಡುವುದನ್ನು ಕವಿ ಈ ಕವಿತೆಯಲ್ಲಿ ಕಟ್ಟಿಕೊಟ್ಟ ರೀತಿ ಇಷ್ಟವಾಗುತ್ತದೆ. ಈ ಸಂಕಲನದ ಬಹುತೇಕ ಕವಿತೆಗಳು ಇಂತಹದ್ದೇ ಕಾರಣಕ್ಕೆ ಇಷ್ಟವಾಗುತ್ತವೆ, ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.
ಪಡಪೋಶಿ ರಾತ್ರಿಗೆ’ ಅಗ್ದೀ ಕಾಡುವ ಇನ್ನೊಂದು ಕವಿತೆ. ...ಹಚ್ಚಿಕೊಂಡ ತಪ್ಪಿಗೆ ನೆನಪಿನ ಗಾಯವಿದೆ ಮುಲಾಮು ತರಲು ಮರೆತ ನೀನು ಬರದೆ ಹೋದ ಬೆಳಕಿನಂತೆ... ಈ ಪಡಪೋಶಿ ರಾತ್ರಿಗೆ ನಾನು ನಾನಾಗದೆ ನೀನಾಗುವ ಜರೂರತ್ತು ಇತ್ತಾದರೂ ಕನವರಿಕೆಯಲ್ಲಿಯೆ ಬೆಳಕಾಯಿತು...’ ಪಡಪೋಶಿ ರಾತ್ರಿಯಲ್ಲಿ ಕಳೆದುಕೊಂಡ ಒಲವೊಂದು ನೆನಪಾಗುವ ಬಗೆ ಹಾಗೂ ಪಡಪೋಶಿ ರಾತ್ರಿಯಲ್ಲಿ ಒಲವೊಂದು ಜೊತೆಯಾದರೆ ಹೇಗೆ ಇರುಳೊಂದು ಅರ್ಥ ತುಂಬಿಕೊಳ್ಳುತ್ತಿತ್ತು ಎನ್ನುವುದನ್ನು ಕವಿ ಕಟ್ಟಿಕೊಡುವ ರೀತಿ ಎದೆಯಾಳಕ್ಕೆ ಇಳಿದುಬಿಡುತ್ತದೆ. ತುಟಿ ಪಥ್ಯ, ಸಿಗರೇಟಿನ ಬೇಸರಿಕೆ... ಕವಿತೆಯಲ್ಲಿರುವ ಈ ಪದಗಳು ಕವಿಯ ಪದಗಳೊಂದಿಗಿನ ತುಂಟಾಟದ ಸಂಕೇತ. ಸಂಕಲನದ ಶೀರ್ಷಿಕೆಯಾಗಿರುವ ಅಯ್ಯೋ ನಾನು ದೇವರಲ್ಲ’ ಕವಿತೆ ಹೇಗೆ ನಂಬಿಕೆಯೊಂದು ದೇವರಾಗುತ್ತದೆ ಎನ್ನುವುದನ್ನು ಹೇಳುವ ರೀತಿ ನಿಜಕವಿಗೆ ಮಾತ್ರ ಸಾಧ್ಯವಾಗುವಂತಹದ್ದು. ಸಂಕಲನದಲ್ಲಿರುವ ನೀನು ಕೊಳ್ಳದ ಕೊಳಲು’, ನಾನು ಮತ್ತು ಅವಳು’, ಸೈಬರ್ ಕೆಫೆಯಲ್ಲಿ ಕವನ’, ಹಸಿವು ಮತ್ತು ಐದು ರೂಪಾಯಿ’, ಆಟಕ್ಕೆ ಇನ್ನೇನು ಬೇಕು’, ಬೆತ್ತಲೆ ಮನಸು’, ಅವಳ ಸ್ವಗತ’, ಅವಳ ಬಗೆಗಿನ ನೆನಪುಗಳು’, ಗಾಂಧೀ ಟೀ ಅಂಗಡಿ’ ಸೇರಿದಂತೆ ಹೆಚ್ಚಿನ ಕವಿತೆಗಳು ಸಂಕಲನದ ಚೆಲುವನ್ನು ಹೆಚ್ಚಿಸಿದೆ. ಪ್ರ
ವೀಣಕುಮಾರ ಸುಲಾಖೆಯವರು ಬರಹದಲ್ಲಿಯೇ ಬದುಕಿನ ತಿರುಳನ್ನು ಹುಡುಕಲು ಪ್ರಯತ್ನಿಸುವವರು; ಹಾಗೇ ಬದುಕಿನ ನೆಮ್ಮದಿಯನ್ನೂ ಅರಸುವವರು. ಅವರ ಪದ್ಯವಾದರೂ ಅಷ್ಟೇ, ಗದ್ಯವಾದರೂ ಅಷ್ಟೇ, ಅಲ್ಲಿ ಬದುಕಿನೆಡೆಗಿನ ಪ್ರೀತಿ ಸದಾ ಚಿಮ್ಮುತ್ತಲೇ ಇರುತ್ತದೆ. ಈ ಕಾರಣದಿಂದಲೇ ಅವರ ಬರಹಗಳ ಓದು ನನ್ನಲ್ಲಿ ದೊಡ್ಡ ಉತ್ಸಾಹವನ್ನು ಚಿಮ್ಮಿಸುತ್ತಿರುತ್ತದೆ. ಈ ಉತ್ಸಾಹ ನಿಮ್ಮೆಲ್ಲರದ್ದೂ ಆಗಲಿ ಮತ್ತು ಪ್ರವೀಣ ಅವರು ಹೀಗೆ ಬರೆಯುತ್ತಾ ನಮ್ಮೆಲ್ಲರಲ್ಲೂ ಉತ್ಸಾಹವನ್ನು ಚಿಮ್ಮಿಸುತ್ತಲೇ ಇರಲಿ...
-ಕೆ.ಗಣೇಶ ಕೋಡೂರು