ಮಧುರ ಎಂಬುದು ಕವಯತ್ರಿ ಮಧುರಾ ಎನ್ ಭಟ್ ಅವರ ಗಝಲ್ ಸಂಕಲನ. ಸಾಹಿತಿ ಕಿರಣ್ ಹಿರಿಸಾವೆ ಅವರು ಈ ಕೃತಿಯ ಕುರಿತು ‘ಒಲವ ಕೊಳಲ ನುಡಿಸಿ ಎದೆಯ ಗುಡಿಯಲಿ ನೆಲೆಸಿದೆ ನೀನು ಎನ್ನ ಸಖ / ಚೆಲುವ ಭಾವ ಸೇರಿಸಿ ಮನದ ಕೊಳೆಯನು ಅಳಿಸಿದೆ ನೀನು ಎನ್ನ ಸಖ’ ಈ ಪಲ್ಲವಿಯನ್ನು ಓದಿದರೆ ಸಾಕು ಮಧುರಾ ಎನ್ ಭಟ್ ಅವರ ಗಝಲ್ ನ ಹದ ಹಾಗೂ ಮಾಧುರ್ಯದ ಸೊಬಗು ತಿಳಿದುಬಿಡುತ್ತದೆ. ಅತಿಯಾದ ದೀರ್ಘಸ್ವರ ಗಳಿಲ್ಲದ, ಒತ್ತಕ್ಷರಗಳಿಲ್ಲದ, ಕಠಿಣವಾದ ಪದಗಳಿಲ್ಲದ, ಕ್ಲಿಷ್ಟಕರ ಒಳಾರ್ಥಗಳಿಲ್ಲದ ಭಾವಪೂರ್ಣವಾದ ನೇರವಾಗಿ ಹೃದಯಕ್ಕೆ ತಾಗುವ ಕಾವ್ಯರಚನೆಯ ಪರಿ ಇದು. ನಾನು ಗಮನಿಸಿದಂತೆ ಇವರ ಗಝಲ್ ರಚನೆಗಳು ಕೇವಲ ಕಾವ್ಯಪ್ರೇಮದಿಂದ ಹುಟ್ಟಿದ್ದಲ್ಲ. ಅವು ಕಾವ್ಯಾರಾಧನೆಯ ಉನ್ನತ ಸ್ತರಕ್ಕೆ ಸೇರಿದವು. ಭಕ್ತಿ ಹಾಗೂ ಆರಾಧನೆಯಿಂದ ಸೃಷ್ಟಿಯಾದ ಕಾವ್ಯ ಹೂವಲ್ಲಿನ ಜೇನಂತೆ ತಾನಾಗಿಯೇ ಒಸರುತ್ತದೆ. ಹೂವಲ್ಲಿನ ಪರಿಮಳದಂತೆ ತಾನಾಗಿಯೇ ಸುಗಂಧ ಪಸರಿಸುತ್ತದೆ. ಹೂವಲ್ಲಿನ ಚಿಗುರಂತೆ ಸದಾ ಹೊಸಭಾವವನ್ನು ಹೊಮ್ಮಿಸುತ್ತದೆ. ಹೂವಲ್ಲಿನ ಸೌಂದರ್ಯದಂತೆ ಮನಸೆಳೆಯುತ್ತದೆ ಇವರ ಗಝಲ್ ಗಳು ಎಂದರೆ ಅತಿಶಯೋಕ್ತಿಯಲ್ಲ.ಯಾವುದೇ ಕಾವ್ಯ ರಸಸೃಷ್ಟಿಗೈಯ್ಯಬೇಕು ಕಾವ್ಯ ರಸಿಕರಿಗೆ. ಅದರಲ್ಲಿ ಇವರ ಗಝಲ್ ಗಳು ಗೆದ್ದಿವೆ. ವ್ಯಕ್ತಿಯ ವಿವಿಧ ಅನೂಹ್ಯ ಭಾವಗಳಾದ ನೋವು, ನಿರಾಶೆ, ಪ್ರೇಮ, ಹತಾಶೆ, ಸಂತಸ, ವಿರಹ, ಸ್ನೇಹ ಸರಳತೆ ಇವುಗಳೆಲ್ಲವನ್ನೂ ಸಮರ್ಥವಾಗಿ ಗಝಲ್ ಗಳು ಧ್ವನಿಸುತ್ತವೆ. ಅದರಲ್ಲೂ ಹೆಣ್ಣು ಗಂಡಿನ ನವುರಾದ ಭಾವಗಳ ಸೂಕ್ಷ್ಮ ಸ್ಪರ್ಶ ಎದ್ದು ಕಾಣುತ್ತದೆ. ಉದಾಹರಣೆಗೆ : ಭಾವಗಳ ತೆರೆದು ಕನಸಿನೂರಿಗೆ ಪಯಣಿಸುವೆ ಜತೆಯಾಗುವೆಯಾ ಗೆಳತಿ/ ಬಾನಂಗಳ ಬಯಸಿ ಸ್ವರ್ಗದ ಬಾಗಿಲಿಗೆ ಲತೆಯಾಗುವೆಯಾ ಗೆಳತಿ/ ತನ್ನೆಲ್ಲ ಗತದ ಭಾರವ ಕಳಚಿ ಕನಸಿನೂರಿಗೆ ಗೆಳತಿಯನ್ನು ಆಹ್ವಾನಿಸುವ ಗೆಳೆಯನ ಮಾತಿನ ಹಿಂದೆ ನೂರು ಭಾವಗಳ ಸಮ್ಮಿಳಿತವಿದೆ. ಇಲ್ಲಿನ ಸಾಲುಗಳು ಪದಗಳ ಗೂಡಾಗದೆ ಗಡುಗೆಯೊಳಗಿನ ಹಾಲಿನ ಕೆನೆಯಂತೆ ಭಾವಸಾಂದ್ರದ ಲಹರಿಗಳಾಗಿವೆ ಎಂದರೆ ತಪ್ಪಿಲ್ಲ. ಕವಿ ಮಾಗುತ್ತಾ ಜೀವನ ಹಾಗೂ ಕಾವ್ಯಾನುಭವದಿಂದ ಪ್ರಬುದ್ಧನಾಗುತ್ತ ಅನುಭಾವದೆಡೆಗೆ ಸಾಗಲೇಬೇಕು. ನಾಡಿನ ಎಲ್ಲ ಹಿರಿಯ ಸಾಹಿತಿಗಳ ಕಾವ್ಯದಲ್ಲಿ ಇದನ್ನು ಕಾಣಬಹುದು. ಆಶ್ಚರ್ಯವೆಂದರೆ, ಈ ಮೊದಲುಗಳಲ್ಲೇ ಮಧುರಾ ಅವರು ಅನಂತಕ್ಕೆ, ಅನುಭಾವಕ್ಕೆ, ಅಲೌಕಿಕಕ್ಕೆ, ಅಧ್ಯಾತ್ಮಕ್ಕೆ ಹೊರಳಿರುವುದು. ಉದಾಹರಣೆಗೆ :- ಒಳಿತು ಕೆಡಕುಗಳ ನಡುವೆ ಗುರುತಿಸುತ ಇರುವಿಕೆಯ ಅಳೆಯಬೇಕಿದೆ ಗೆಳತಿ ಹಳತು ಮರೆಯುತ ಹೊಸತು ತೆರೆಯುತ ಆಧ್ಯಾತ್ಮವನು ಸೆಳೆಯಬೇಕಿದೆ ಗೆಳತಿ ಆಕಾರವಿಲ್ಲದ ಆತ್ಮಕೆ ಸಂಸ್ಕಾರ ನೀಡುತ ಜಯಿಸಬೇಕು ಅರಿಷಡ್ ವೈರಿಗಳನು ಅಂಧಕಾರ ಕಳೆಯಲು ಸತ್ಯಜ್ಯೋತಿ ಬೆಳಗುತ ಬದುಕನು ಕಳೆಯಬೇಕಿದೆ ಗೆಳತಿ ಸ್ಪಷ್ಟವಾಗಿ ಅನುಭಾವದ ಛಾಪನ್ನು, ಜೀವನ ದರ್ಶನವನ್ನು, ಲೌಕಿಕದಿಂದ ಅಲೌಕಿಕದೆಡೆಗಿನ ಪಯಣದ ಹರಿವನ್ನು ಲೇಖಕಿ ಇಲ್ಲಿ ಬಿಂಬಿಸುತ್ತಾರೆ. ಪಳಗಿದ ಕೈಗಳ ಬರಹ ಎಂದು ವೇದ್ಯವಾಗುತ್ತದೆ. ಒಟ್ಟಾರೆಯಾಗಿ ಮನಕ್ಕೆ ಮುದನೀಡುವ ನೇರ ಹೃದಯಕ್ಕೆ ಲಗ್ಗೆ ಹಾಕುವ ಮಗದೊಮ್ಮೆ ಓದಿ ಚಿಂತಿಸಬೇಕೆನ್ನುವ ಸಾಲುಗಳು ಈ ಸಂಕಲನದಲ್ಲಿವೆ; ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ ಮಧುರಾ ಎನ್. ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮದೇ ಸಿ ಎನ್ ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಹೊಂದಿದ್ದಾರೆ. ಗಝಲ್, ಕವಿತೆ, ಛಂದೋಬದ್ಧ ಕಾವ್ಯ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಮಧುರ, ಗೋಧೂಳಿ (ಗಜಲ್ ಸಂಕಲನಗಳು) ...
READ MORE