’ಕಾವ್ಯದ ಕನವರಿಕೆ’ ಕೃತಿಯು ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಜಗನ್ನಾಥ ಕೆ. ಢಾಂಗೆ `ಕವಿಯ ವಿಚಾರಗಳು ಬಾಹ್ಯ ಮತ್ತು ಅಂತರಂಗದ ಜ್ಞಾನ-ಮೌಲ್ಯಗಳ ನೆಲೆಯಾಗಿರುತ್ತವೆ. ಭಾವಾಭಿವ್ಯಕ್ತಿಗೆ ಅಕ್ಷರ ರೂಪ ಕೊಡುವ ಮನುಷ್ಯನ ಯತ್ನ ಪುರಾತನ ಮತ್ತು ನಿರಂತರ. ಇಂದು ಯುವ ಸಮುದಾಯದ ಹಲವರು ವಾಟ್ಸ್ಯಾಪ್, ಫೇಸ್ ಬುಕ್ ಹೀಗೆ ಸಾಮಾಜಿಕ ಅಂತರ್ ಜಾಲದೊಳಗೆ ಕರಗಿ ಹೋಗುತ್ತಿದ್ದಾರೆ. ಕೆಲವರು ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಂಕಷ್ಟದಲ್ಲಿಯೂ ಸಂಭ್ರಮ ಪಡುವಂತಹ ಬದುಕಿಗೆ ಭರವಸೆಯನ್ನು ತುಂಬುವಂತಹ ಕೃತಿ ಇದಾಗಿದೆ. ಅಪ್ಪನ ಕೊಡುಗೆ ಮತ್ತು ಪ್ರೀತಿಯನ್ನು ಭಾವನಾತ್ಮಕ ಸಾಲುಗಳಲ್ಲಿ ವ್ಯಕ್ತಪಡಿಸಿದ ಕವನವೊಂದು ಹೀಗಿದೆ: ” ಅಪ್ಪ ನಿಜಕ್ಕೂ ನೀ ತುಪ್ಪದ ದೀಪ! ಅಪ್ಪ ಮಥನದ ಮಜ್ಜಿಗೆಯಲ್ಲಿ ಬೆಣ್ಣೆಯಾದರೆ! ಬೆಣ್ಣೆಯೊಳಗೆ ತುಪ್ಪವಾಗಿ, ತುಪ್ಪದೊಳಗೆ ಜ್ಯೋತಿಯಾಗಿ ಬೆಳಗಿದೆ" ಈ ಕವಿತೆಯಲ್ಲಿ ಅಪ್ಪನನ್ನು ತುಪ್ಪಕ್ಕೆ ಹೋಲಿಕೆ ಮಾಡಿರುವುದು ಔಚಿತ್ಯ ಪೂರ್ಣವಾಗಿದೆ. ತುಪ್ಪವಾಗುವ ಬಗೆಯಲ್ಲಿನ ಹಂತಗಳಂತೆಯೇ ಅಪ್ಪನ ತ್ಯಾಗ ಸಂಯಮಕ್ಕೆ ಹಿಡಿದ ಕನ್ನಡಿಯಂತಿದೆ. ಕಾವ್ಯದ ಕನವರಿಕೆಯಲ್ಲಿ ಹೀಗೆಯೆ ಸಾಕಷ್ಟು ಕವನಗಳ ಸರಮಾಲೆಯನ್ನು ಸರಳವಾಗಿ, ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ವೈವಿಧ್ಯಮಯ ವಿಷಯ, ವಿಚಾರಗಳು ಮೂಡಿ ಬಂದಿದ್ದು, ಕವಿತೆ ವ್ಯಕ್ತಿ ಮತ್ತು ಸಮಾಜವನ್ನು ತಿದ್ದುತ್ತದೆ. ಬದುಕಿನ ಪರಿಪೂರ್ಣತೆಯೆಡೆಗೆ ಸಾಗಲು ಕೈದೀವಿಗೆಯಾಗುತ್ತದೆ . ಸಮಾಜದ ಆಶಯ ಪ್ರತಿಯೊಂದು ಕವಿತೆಗಳಲ್ಲಿ ವ್ಯಕ್ತವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಮೂಲತಃ ಚಿತ್ರದುರ್ಗ ತಾಲೂಕಿನ ನೆಲ್ಲಿಕಟ್ಟೆಯವರು. ಕತೆ, ಕವನ, ಲೇಖನ, ಓದು, ಬರಹ, ಹಾಡುಗಾರಿಕೆ, ಚಿತ್ರಕಲೆ, ಹಾಗೂ ನೃತ್ಯ ಇವರ ಹವ್ಯಾಸ. ಸದ್ಯ, ವೈದ್ಯಕೀಯ ವಿದ್ಯಾರ್ಥಿನಿ. ಕೃತಿಗಳು: ಕಾವ್ಯದ ಕನವರಿಕೆ (ಕವನ ಸಂಕಲನ) ...
READ MORE