ಲೇಖಕ ಅರವಿಂದ ಪಟೇಲ್ ಅವರ ಕವನ ಸಂಕಲನ 'ಹಾಲು ಚೆಲ್ಲಿದ ಹೊಲ' . ಈ ಸಂಕಲನಕ್ಕೆ ಬರಗೂರು ರಾಮಚಂದ್ರಪ್ಪ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, 'ಹಾಲು ಚೆಲ್ಲಿದ ಹೊಲ' ಎಂಬುದೇ ಒಂದು ಸಾರ್ಥಕ ರೂಪಕ. ಇಲ್ಲಿ 'ಹೊಲ' ಎಂಬುದು ರೈತರು ಉಳುವ ಹೊಲ ಮಾತ್ರವಾಗುವುದಿಲ್ಲ; ಬದುಕು, ಸಮಾಜ ಮನೋವಲಯ ಹೀಗೆ ಎಲ್ಲವೂ ಆಗುತ್ತದೆ. ಈ ಹೊಲ ಇದ್ದಕ್ಕಿದ್ದಂತೆ ರೂಪುಗೊಂಡದ್ದಲ್ಲ. ಹಲವು ಪೀಳಿಗೆಗಳ ಕಾಯಕದ ಫಲವಿದು. ಇಲ್ಲಿ 'ಅಮೃತ ಸುಧೆ ಹರಿದಿಹುದು'. ಆದರೆ ಅಮೃತಕ್ಕೆ ವಿಷ ಸುರಿಯುವವರೂ ಇದ್ದಾರೆ. ಇಂಥ ಪ್ರವೃತ್ತಿಗೆ ಪ್ರತಿರೋಧ ಒಡ್ಡುವ ಆಶಯವನ್ನು ಕವಿ ಮುನ್ನೆಲೆಗೆ ತರುತ್ತಾರೆ. ದ್ವೇಷ ಬೀಜಗಳ ಬಸಿರಿಗೆ ಈ ನೆಲವನ್ನು ನೀಡುವುದಿಲ್ಲ ಎಂಬ ಬದ್ಧತೆಯು ಕವಿ ಅರವಿಂದ ಪಟೇಲ್ ಅವರ ಪ್ರಮುಖ ಆಶಯವಾಗಿರುವುದನ್ನು ಈ ಸಂಕಲನದಲ್ಲಿ ಕಾಣಬಹುದು. ದ್ವೇಷದ ಬೆಂಕಿಯನ್ನು ಬಿತ್ತಬೇಡಿ ಎಂದು ಬಿನ್ನಹ ಮಾಡುತ್ತಾ ಕವಿಯು 'ಧರ್ಮ ದಳ್ಳುರಿಗಳ ಹೂಗಳು ಉರುಳಿ ಮಸಣವೇ ಕೂಗುತಿದೆ' ಎಂಬ ಸಾಲುಗಳಲ್ಲಿ ನಮ್ಮ ಪ್ರಸ್ತುತ ಸಂದರ್ಭದಲ್ಲಿ ಧರ್ಮದ ದುರುಪಯೋಗವಾಗುತ್ತಿರುವುದನ್ನು ಶಕ್ತ ರೂಪಕದಲ್ಲಿ ಅಭಿವ್ಯಕ್ತಿಸಿದ್ದಾರೆ. ಅರವಿಂದಪಟೇಲರ ಮುಖ್ಯ ಕವನಗಳು ಅವರಲ್ಲಿ ಗಾಢವಾಗಿ ಕಾಡಿಸುವ ಮಾನವೀಯ ಕವಿಯನ್ನು ಕಾಣಿಸುತ್ತವೆ. ಮನ, ಮೆದುಳುಗಳನ್ನು ಮುಟ್ಟಿ ನಮ್ಮನ್ನೂ ಕಾಡಿಸುತ್ತವೆ. ಚಿಂತನೆಗೆ ಹಚ್ಚುತ್ತವೆ. ಮತ್ತಷ್ಟು ಮಹತ್ವದ ನಿರೀಕ್ಷೆ ಹುಟ್ಟಿಸುತ್ತವೆ ಎಂದಿದ್ದಾರೆ.
ಡಾ. ಅರವಿಂದ ಪಟೇಲ್ 1959ರಲ್ಲಿ ಬಳ್ಳಾರಿಯ ಕೃಷಿ ಕುಟುಂಬದಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಅನೇಕ ಸಂಘ ಸಂಸ್ಥೆಗಳೊಂದಿಗೆ ಸಕ್ರಿಯವಾಗಿರುವ ಅವರು ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಕೃಷಿಕರ ಪರವಾಗಿಯೇ ಕೆಲಸ ಮಾಡುತ್ತಾ ತಮ್ಮ ಸಹಜ ಕೃಷಿಯ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಪ್ರಜಾ ಜಾಗೃತಿ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ‘ಅರಿವು’ ಸಂಘಟನೆ ಬಳ್ಳಾರಿ ಇದರ ಮೂಲಕ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಆರೋಗ್ಯ, ಪರಿಸರ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಕುರಿತ ಕಾರ್ಯಕ್ರಮಗಳು, ಸಾಹಿತ್ಯಕ ಕಾರ್ಯಕ್ರಮಗಳನ್ನು ...
READ MORE