ಉಮೇಶ ನಾಯ್ಕ ಅವರ ಮೊದಲ ಸಂಕಲನ ’ಪೂರ್ಣ ಸತ್ಯವಲ್ಲ ರಸ್ತೆಗಳು’. ಬರೆದುದರ ಗುಂಗಿನಲ್ಲಿ ಮೈಮರೆಯದೆ, ಬರೆಯಬೇಕಾದುದರ ಇಂಗಿತಕ್ಕೆ ಅನುವಾಗುವ, ಬರೆಯುವುದರ ಆಚೆಗೂ ಇರುವ ಬದುಕಿನ ಹೆಚ್ಚುಗಾರಿಕೆಯ ಬಗ್ಗೆ ಎಚ್ಚರವಿರುವ ಗುಣದಿಂದಾಗಿ ಈ ಕವಿತೆಗಳು ತಮ್ಮಷ್ಟಕ್ಕೆ ತಾವೇ ಹೃದಯವಂತವೆನ್ನಿಸುತ್ತವೆ. ಅವರ ನೆನಪುಗಳಲ್ಲಿ ಢಾಳಾಗಿರುವುದು ಬಗೆಬಗೆಯ ಕಷ್ಟಗಳ ಪೈಪೋಟಿ. ಇದು ಕೆಲವೊಮ್ಮೆ ಸೂಕ್ಷ್ಮವಾಗಿ, ಕೆಲವೊಮ್ಮೆ ವ್ಯಗ್ರತೆಯ ಅದದೇ ರೂಪದಲ್ಲಿ ಈ ಕವಿತೆಗಳಲ್ಲಿ ವ್ಯಕ್ತವಾಗಿದೆ. ನೋಡುವ ನೋಟದ ಸ್ವಂತಿಕೆ, ಗ್ರಹಿಕೆಯ ಸೂಕ್ಷ್ಮ. ಶಕ್ತಿ ಮತ್ತು ಅಹಂಕಾರ, ಭ್ರಮೆ ಎರಡೂ ಇಲ್ಲದ ಶುದ್ಧತೆಯಲ್ಲಿ ಪಕ್ಕಾದ ಪ್ರಾಮಾಣಿಕತೆ -ಇದರಿಂದಾಗಿ ಭರವಸೆ ಮೂಡಿಸಿವೆ ಈ ಕವಿತೆಗಳು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಉಮೇಶ ನಾಯ್ಕ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು ಗಮನ ಸೆಳೆದವರು. ಬರವಣಿಗೆ, ಗಾಯನ, ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಮತ್ತು ತಬಲಾ ವಾದನ), ರಂಗಭೂಮಿ ಮತ್ತು ಸಾಹಿತ್ಯಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ವೃತ್ತಿಯಲ್ಲಿ ಉಪನ್ಯಾಸಕರು. ಕವಿತೆ ಅವರ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾಗಿದ್ದರೂ, ಕವಿತೆಯೇತರ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಉಮೇಶ ನಾಯ್ಕ, ಉತ್ತರ ಕನ್ನಡದ ನಾಮಧಾರಿ ಸಮಾಜದ ಬಗೆಗೂ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ. ಉತ್ತರ ಕನ್ನಡದ ರೈತಹೋರಾಟದ ಹಿನ್ನೆಲೆಯೊಡನೆ ತಮ್ಮ ತಂದೆಯವರ ಕುರಿತು ಅವರು ಬರೆದಿರುವ ಕೃತಿ ಒಂದು ಕಾಲಘಟ್ಟದ ಸಾಂಸ್ಕೃತಿಕ ...
READ MORE