'ಕಳೆದು ಹೋದ ಜೀವ' ಈಚನೂರು ಇಸ್ಮಾಯಿಲ್‍ರವರ ಖಂಡಕಾವ್ಯವಿದು. ಈ ಖಂಡಕಾವ್ಯದ ಕವಿಗೆ ವಸ್ತುವಾಗಿದ್ದು ಗುಜರಾತಿನಲ್ಲಿ ನಡೆದ ಹತ್ಯಾಕಾಂಡ.
ಆಕೆಯ ಹೆಸರು ಕೌಸರ್ ಬಾನು. ಗಂಡ ಫಿರೋಝ್. ಇಬ್ಬರು ಗುಲ್ಬರ್ಗದಿಂದ ಹೊಟ್ಟೆಯ ಪಾಡಿಗಾಗಿ ಗುಜರಾತಿಗೆ ಹೋಗಿರುತ್ತಾರೆ. ಅಲ್ಲಿ ದುಡಿದು ಬದುಕುತ್ತಿರುತ್ತಾರೆ. ಕಷ್ಟವೋ ಸುಖವೋ ಅಂತೂ ಈ ದಂಪತಿಗಳು ಭವಿಷ್ಯದ ಕನಸು ಅದೇನು ಕಂಡಿದ್ದರೋ? ಆದರೆ, 2002ರ ಗುಜರಾತ್ ಗಲಭೆಯ ನಂತರ ಕೋಮು ದ್ವೇಷ ಮುಗಿಲುಮುಟ್ಟುತ್ತದೆ. ಗೋದ್ರಾದ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಬಿದ್ದ ನಂತರ ಇಡೀ ಗುಜರಾತ್ ಹಬೆಯಾಡುತ್ತದೆ. ಈ ರೈಲಿಗೆ ಬೆಂಕಿ ಹಚ್ಚಿದ್ದು ಮತ್ತೊಂದು ಕೋಮಿನವರು ಎಂದು ತಿಳಿದ ಕೆಲವರು ಹಸಿರು ಬಾವುಟಗಳ ಬೆನ್ನುಹತ್ತಿ ಆಕ್ರಮಣ ಮಾಡುತ್ತಾರೆ. ಅಲ್ಲಿ ಕಷ್ಟದ ಬದುಕು ಸಾಗಿಸುತ್ತಿದ್ದ ಕೌಸರ್‍ಬಾನು ಕೋಮು ಗಲಭೆಗೆ ಭೀಕರವಾಗಿ ಬಲಿಯಾಗಿ ಹೋಗುತ್ತಾಳೆ. ಆಕೆ ಕೊಲೆಗೈಯ್ಯಲ್ಪಟ್ಟಾಗ ಗರ್ಭಿಣಿ. ಇದನ್ನೆಲ್ಲ ಕಣ್ಣಾರೆ ಕಂಡ ಆಕೆಯ ಗಂಡ ಫಿರೋಝ್ ಮಾತು ಕಳೆದುಕೊಳ್ಳುತ್ತಾನೆ. ಇಲ್ಲಿ ಒಂದು ಕೊಲೆ ನಡೆದು ಮೂರು ಜೀವಗಳು ನಶ್ವರಗೊಳ್ಳುತ್ತವೆ. ತನ್ನ ಮಗುವಿನ ಬಗ್ಗೆ ಅದೇನು ಕನಸು ಕಂಡಿದ್ದಳೋ ಅವಳು? ಅಂತಹ ಧರ್ಮ ಧರ್ಮಗಳ ನಡುವಿನ ಜಗಳಗಳಲ್ಲಿ ಮಾನವ ಧರ್ಮವನ್ನು ಪ್ರೀತಿಸುವ ಜೀವಗಳು ಬಲಿಯಾಗಿ ಹೋಗುತ್ತವೆ. ಅಂತಹ ಕಾಳಜಿಯನ್ನು ತನ್ನ ಕಾವ್ಯದ ವಸ್ತುವಾಗಿಸಿಕೊಂಡ ಈಚನೂರು ಇಸ್ಮಾಯಿಲ್ ಕಳೆದು ಹೋದ ಜೀವವನ್ನು ಮತ್ತೆ ಕೆತ್ತಿಕೊಡುವ ಪ್ರಯತ್ನ ಮಾಡಿದ್ದಾರೆ. ಇಂತಹ ಹಲವಾರು ಖಂಡಕಾವ್ಯಗಳು ಈ ಕೃತಿಯಲ್ಲಿವೆ.
ಬರಹಗಾರ ಈಚನೂರು ಇಸ್ಮಾಯಿಲ್ ಅವರು ಜನಿಸಿದ್ದು ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕಿನ ಈಚನೂರಿನಲ್ಲಿ. ಈಚನೂರು, ತಿಪಟೂರು, ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಇವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯಿಂದ ಸರ್ಕಾರಿ ಅಧಿಕಾರಿಯಾಗಿರುವ ಇವರು, ಸಾಹಿತ್ಯಾಸಕ್ತರು. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರ ಸುಮಾರು ಮುವತ್ತು ಕೃತಿಗಳನ್ನು ಬರೆದಿದ್ದಾರೆ. ...
READ MORE