ಅರವಿಂದ ಅವರ ಕವಿತೆಗಳ ಸಂಕಲನ. ಈ ಸಂಕಲನದ ಕವಿತೆಗಳ ಬಗ್ಗೆ ಮುನ್ನುಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ ಅವರು ಹೀಗೆ ಬರೆದಿದ್ದಾರೆ-
ಇಲ್ಲಿನ ಕವಿತೆಗಳನ್ನು ನಿಧಾನವಾಗಿ ಓದಬೇಕು. ವಿಳಂಬ ಕಾಲದ ಸಂಗೀತದ ಹಾಗೆ ಕೇಳಬೇಕು. ಆಗ ಅನ್ಯ ಸ್ವರಗಳು ಸೇರಿಕೊಳ್ಳುತ್ತವೆ. ಆ ಅನ್ಯಸ್ವರ ಗುಚ್ಛಗಳೇ ಇವರು ಮಿಡಿಯ ಹೊರಟಿರುವ ರಾಗದ ಜೀವಸ್ವರಗಳಾಗಿರಬಹುದು! ಈ ಕಿರುಗವಿತೆಯನ್ನು ನೋಡಿ. “ತಥಾಗತನನ್ನು ಅರಸಿ ಹೊರಟಿದ್ದೇನೆ ನಿರಾಕರಿಸಲಿಕ್ಕ? ನೆರಳಿಗಂಟಿದ ದೇಹ ಚಲಿಸುತ್ತೆ. ನೆರಳ ನೆರಳಾಗಿ ಸತ್ಯ ನಿಜಕ್ಕೂ ಸತ್ಯವ?!” ಕವಿ, ತಥಾಗತ (ಬುದ್ಧ)ನನ್ನು ಅರಸಿ ಹೊರಟಿದ್ದಾನೆ! ತಥಾಗತನೂ ಹೀಗೆ ಯಾವುದನ್ನೋ ಅರಸಿ ಹೊರಟವನೇ. ಹಾಗೆ ಈತ ಹೊರಟದ್ದೂ ತಥಾಗತನ ಒಂದು ನೆರಳಿನಂತೆ ಆಗಿಬಿಟ್ಟಿತು! ಅಲ್ಲದೆ ಬುದ್ಧನು ಎಲ್ಲವನ್ನೂ ನಿರಾಕರಣೆ ಮಾಡಿದವನಲ್ಲವೆ? ತಾನೂ ನಿರಾಕರಣೆಯನ್ನೇ ಅರಸಿ ಹೊರಟಂತೆ ಆಯಿತೆ? ಅರಸುವಿಕೆಯಲ್ಲಿಯೇ ನಿರಾಕರಣೆಯ ಒಂದು ಗುಣವೂ ಅಡಗಿದೆಯೆ? ಅಂದರೆ ಏನನ್ನೋ ಅರಸುವಿಕೆಯಲ್ಲಿ ಇರುವುದರ ನಿರಾಕರಣೆಯು ಅಡಗಿರುವುದಿಲ್ಲವೆ? ಅಥವಾ ತಥಾಗತನೇ ಸಿಕ್ಕಿದರೂ ಅದು ನಿರಾಕರಣೆಯ ತತ್ತ್ವವೇ ಸಿಕ್ಕಂತಲ್ಲವೇ? ನಿರಾಕರಣೆಯು “ಸಿಗುವುದು” ಎಂದರೇನರ್ಥ? ಅಲ್ಲಿಯೇ ಒಂದು ವಿರೋಧಾಭಾಸವಿಲ್ಲವೆ? ಒಟ್ಟಿನಲ್ಲಿ ತಾನು ತಥಾಗತನ ನೆರಳಿಗೆ ಅಂಟಿಕೊಂಡಂತಾಯಿತೆ? ದೇಹಕ್ಕಂಟಿದ ನೆರಳು ಎಂದಿರಬೇಕಾಗಿದ್ದ ಮಾತು ನೆರಳಿಗಂಟಿದ ದೇಹ ಎಂದಾಗಿಬಿಟ್ಟಿತೆ? ಆಗಿ; ನೆರಳ ನೆರಳಾಗಿಹೋಯಿತೆ? ಈ ನೆರಳಿಗೆ ಸತ್ಯವೇ ತಿಳಿಯಿತು ಎಂದಿಟ್ಟುಕೊಳ್ಳಿ; ಅದು, ಸತ್ಯವೆಂದು ತಿಳಿಯುವುದು ಹೇಗೆ? “ಸತ್ಯ ನಿಜಕ್ಕೂ ಸತ್ಯವ?” ಎನ್ನುವುದು ಪದ್ಯದ ಕೊನೆಯ ಸಾಲು. ಸತ್ಯವನ್ನು ಸತ್ಯ ಎಂದು ತಿಳಿಯುವುದಕ್ಕೆ ಇನ್ನೊಂದು ‘ಪದ’ ಬೇಕು. “ನಿಜ” ಎನ್ನುವುದು ಆ ಇನ್ನೊಂದು ಪದ! “ಸತ್ಯ ನಿಜಕ್ಕೂ ಸತ್ಯವ”- ಎಂದು ಕೇಳಿದಾಗ ‘ನಿಜಕ್ಕೂ’ ಎಂಬ ಪದದ ಒತ್ತಾಸೆಯಿಂದಾಗಿ ಒಂದು ಭರವಸೆಯ ಧ್ವನಿ ಕೇಳಿಸುತ್ತದೆ. ಆದರೂ ಅದು ಬರಿಯ ಇನ್ನೊಂದು ಪದವೂ ಹೌದು; ನೆರಳಿನ ನೆರಳಿನಂತೆ. ಆದರೆ ಆ ಇನ್ನೊಂದು ಪದದಲ್ಲಿ ಸತ್ಯವೇ ಇರಬಹುದು - ಅಕ್ಕ; “ಚೆನ್ನನ ಪರಿ ಬೇರೆ” ಎಂದಾಗ ಆಗುವಂತೆ! ಈ ಕವಿತೆಯ ಜೊತೆಗೆ “ಚರಿತ್ರೆ” ಎಂಬ ಕವಿತೆಯ ಈ ಸಾಲುಗಳನ್ನಿಟ್ಟು ನೋಡಿ. “ಗುಡ್ಡದ ದಾಸಯ್ಯ ಹೇಳಿದ ಜಗತ್ತು ಎಂಬೋದು ಬರೀ ಭಾಷೆ ಕಾಣ್ ಮಗ ಭಾಷೇನ ರಚಿಸಿದ್ದು ನಾನೇ ಅಂತ ನೀ ಅಂದ್ಕೋತೀಯ ನಿನ್ನನ್ನ ರಚಿಸಿದ್ದು ತಾನೇ ಅಂತ ಭಾಷೆ ಅಂದ್ಕೊಳ್ಳುತ್ತೆ ನಿನ್ನ ಕಾಗದದ ಕ್ಯಾಮರ ಒಂದು ಪದ ಇನ್ನು ನಿನ್ನ ಪ್ರಶ್ನೆ ಭಾಷೆಯ ಸಿದ್ಧ ತಾರ್ಕಿಕ ನಿಯಮಗಳ ಮುಖಾಂತರ ಉದ್ಭವಿಸಿದ ಮತ್ತೊಂದು ಪದ ನಂಬೋದು ಹೇಗೆ?” ಈ ಸಾಲುಗಳನ್ನು ಓದುತ್ತಿದ್ದಂತೆ ಇದು ಇನ್ನೊಬ್ಬ ದಾಸಯ್ಯನೇ ಹೇಳಿದ “ನಾಮದ ಬಲ” ಎಂಬ ನುಡಿಗಟ್ಟನು ನೆನಪಿಸಿತು. ನಿನ್ನ ನಾಮದ ಬಲದಿಂದ ನಿನ್ನ ಹಂಗನ್ನೇ ಮೀರುವುದು ಸಾಧ್ಯ ಎಂದು ತನ್ನ ಇಷ್ಟದೈವದೊಡನೆ ಆಡುವ ಸಾಲು ಅದು. ಅರ್ಥವನ್ನು ಮೀರಿ ನಾಮದ (= ಭಾಷೆಯ) ಜೀವಂತಿಕೆಯನ್ನು ಸೂಚಿಸುವ ಸಾಲು ಅದು. ಪಾರ್ವತೀಪರಮೇಶ್ವರರು ವಾಗರ್ಥಗಳಂತೆ ಬೆರೆತಿದ್ದಾರೆ ಎಂದು ಕಾಳಿದಾಸನು ಸ್ತುತಿಸುವಾಗಲೂ ಈ “ನಾಮದಬಲ” ಇನ್ನೊಂದು ರೀತಿಯಲ್ಲಿ ಕೇಳಿಸುತ್ತದೆ. ಆದರೆ ಇಂಥ ನಂಬಿಕೆ ಈ ಕಾಲದ ಈ ಕವಿಗೆ ಇಲ್ಲವಾಗಿದೆ. ಕವಿಗೆ ತಾನು ಸೃಷ್ಟಿಸಿದ ಪಾತ್ರಗಳ ಜೊತೆ-ತನ್ನದೇ ಭಾಷೆಯ ಜೊತೆ-ತನ್ನ ನಾಮದ ಬಲದ ಜೊತೆ-ನಿರಂತರ ಸಂಘರ್ಷವಿದೆ. ಸಂಕಲನದುದ್ದಕ್ಕೆ ಇದು ಕಾಣಿಸುತ್ತದೆ. ‘ಸಂಗತಿ’ಗಳ ಜೊತೆ ‘ಅಸಂಗತಿ’-`ವಿಸಂಗತಿ’ಗಳು ತಳಕು ಹಾಕಿಕೊಂಡಿರುವುದು ಕವಿಗೆ ಕಾಣಿಸುತ್ತದೆ. ಇವನ್ನು ‘ನಾಮದ ಬಲ’ ಎಂದು ನಂಬುವುದು ಹೇಗೆ? ಸಂಕಲನದುದ್ದಕ್ಕೆ ಈ ದ್ವಂದ್ವವಿದೆ.
ವಿಸರ್ಜನೆ ಕೃತಿಯ ವಿಮರ್ಶೆ- ಹೊಸ ಮನುಷ್ಯ
ಐ.ಐ.ಟಿ.ಯೊಂದರಲ್ಲಿ ಭೌತಶಾಸ್ತ್ರ ಸಂಶೋಧಕರಾಗಿರುವ ಅರವಿಂದ ಅವರ ಈ ಮೊದಲ ವಿಸರ್ಜನೆ ಕವನ ಸಂಕಲನ 'ತನ್ನ ಹಸಿಯಾದ ಆದರೆ ಕುತೂಹಲಕಾರಿಯಾಗಿರುವ ಪ್ರಯೋಗಶೀಲತೆಯ ಗುಣದಿಂದ ನಮ್ಮನ್ನು ಸೆಳೆಯುತ್ತದೆ. ಒಟ್ಟು ೪೯ ಪದ್ಯಗಳಿರುವ ಈ ಸಂಕಲನದ ಬಹುತೇಕ ಕವಿತೆಗಳು ಒಂದು ಬಗೆಯ ಅಸ್ತಿತ್ವವಾದಿ ಆಧ್ಯಾತ್ಮಿಕತೆಯನ್ನು ಶೋಧಿಸುವಂತೆ ಭಾಸವಾಗುತ್ತದೆ. ಒಂದು ಬಗೆಯ ಅಮೂರ್ತತೆಯತ್ತ ತುಡಿಯುವ ಹಲವಾರು ಕವಿತೆಗಳು ಈ ಸಂಕಲನದಲ್ಲಿವೆ.
ಮೊದಲ ಸಂಕಲನದಲ್ಲಿ ಸಾಧಾರಣವಾಗಿ ಕಾಣದೇ ಇರುವ ವಸ್ತು ವೈವಿಧ್ಯತೆಯನ್ನು ಮತ್ತು ಆತ್ಮವಿಶ್ವಾಸವನ್ನು ನಾವು ಇಲ್ಲಿ ಗಮನಿಸಬಹುದು. ಕವಿ ತಾವು ಶೋಧಿಸುತ್ತಿರುವ ವಾಸ್ತವಸತ್ಯದ ಬೇರೆ ಬೇರೆ ಆಯಾಮಗಳನ್ನು ತಮಗೆ ದಕ್ಕಿದ ಅನುಭವಗಳ ಮೂಲಕ ನಿರೂಪಿಸುತ್ತಿದ್ದಾರೆ. ಮೇಲ್ಕಾಣಿಸಿದ ಶೋಧನೆಯನ್ನು ಅನಾವರಣ ಮಾಡಲು ಯತ್ನಿಸುತ್ತಿರುವ ಈ ಸಂಕಲನ ಹಲವಾರು ಬಾರಿ ತೀರಾ ವಾಚ್ಯ ಮತ್ತು ನಾಟಕೀಯವು ಆಗಿದೆ. “ನನಗೆ ರೂಪಕಗಳಾಗುವುದು ಬೇಕಿಲ್ಲ” ಎಂಬ ಘೋಷಣೆ ಒಂದು ಪದ್ಯದಲ್ಲಿ ಬಂದಿದ್ದರೂ ಸಹ ಲೇಖಕರು ತಮ್ಮ ಅನುಭವಗಳನ್ನು ರೂಪಕಗಳ ಮೂಲಕವೇ ನಿರೂಪಿಸುತ್ತಿರುವ ಕ್ರಮವನ್ನು ಸಹ ನಾವು ಗಮನಿಸಬಹುದು.
ಲೇಖಕರು ಜೀವನದ ಸತ್ಯ-ಮಿಥ್ಯಗಳನ್ನು ಶೋಧಿಸುವ ಆಶಯ ಹೊಂದಿದ್ದು ಇದರ ಸಾಕಾರಕ್ಕಾಗಿ ಸತತವಾದ ಪ್ರಯೋಗಕ್ಕೆ ಇಲ್ಲಿನ ಪದ್ಯಗಳನ್ನು ಒಡ್ಡಿದ್ದಾರೆ. ಯಾವುದೇ ಶೀರ್ಷಿಕೆ ಇಲ್ಲದೆ ಮುಕ್ತ ಓದಿಗೆ ಒತ್ತಾಯಿಸುವ ಕವನಗಳಿಂದ ಮೊದಲಾಗಿ ನವ್ಯ ಕಾವ್ಯದ ಮಾದರಿಯಲ್ಲಿ ಧುತ್ತನೇ ಅರ್ಧಕ್ಕೆ ಮುಗಿಯುವಂತೆ ಭಾಸವಾಗುವ ಹಲವಾರು ಕವನಗಳು ಇಲ್ಲಿವೆ. ಆದರೆ ಈ ಪ್ರಯೋಗಗಳೂ ತೀರಾ ಹಸಿಯಾಗಿರುವಂತೆಯೇ ಹಲವಾರು ಬಾರಿ ಕೃತಕವೂ ಆಗಿವೆ. ಈ ಕೆಲ ಸಾಲುಗಳನ್ನು ಗಮನಿಸಿ:
ವೃತ್ತಾಕಾರದ ಚಲನೆ
ಆಸಕ್ತಿ ಅಥವಾ ಧೈಯ?
ಕೇಂದ್ರ ತ್ಯಾಗಿ ಹಾಗೂ ಕೇಂದ್ರಾಭಿಗಾಮಿಯ ನಡುವೆ
ಹಗ್ಗ ಜಗ್ಗಾಟ? ಕೊನೆ ಶುಭಂ
ಇಲ್ಲಿನ ಕೆಲವು ಕವನಗಳು ಶುದ್ದ ಸಾಹಿತ್ಯ ಪ್ರಕಾರಗಳನ್ನು ಒಡೆದು, ಒಂದು ಬಗೆಯ ಮಿಶ್ರಣದ ಗುಣರೂಪವನ್ನು ಹೊಂದಿದೆ. ಸಂಕಲನದ ಮೊದಲ ಪದ್ಯ 'ಮಳೆಯನ್ನು ಹುಟ್ಟು ಎಂದೂ ಕರೆಯಬಹುದು' ಪದ್ಯ- ಗದ್ಯಗಳೆರಡನ್ನು ಮಿಶ್ರಮಾಡಿ ನಿರೂಪಿತವಾಗಿದೆ. ಮತ್ತೊಂದು ರಚನೆಯಲ್ಲಿ ಕವಿ-ಕವಿತೆ- ಮನುಷ್ಯನ ನಡುವಿನ ಸಂಬಂಧವನ್ನು ಅರಸುವ ಲೇಖಕರು “ಕವಿಯಾದ ದುರಂತದ ಪರಿಹಾರಕ್ಕೆ ನಾ ಕವಿತೆ ಬರಿತೀನಿ” ಎಂಬಂತಹ ದೇಶಾವರಿ ಹೇಳಿಕೆಯನ್ನು ನೀಡುತ್ತಾರೆ. ಹಾಗೆಯೇ ʼಒಂದು ಸಾಲಿನ ಕವಿತೆಗಳು' ಎಂಬ ಮತ್ತೊಂದು ಪದ್ಯದಲ್ಲಿ ಸಂಪ್ರದಾಯ ಎಂಬುದನ್ನು ವ್ಯಾಖ್ಯಾನಿಸುತ್ತಾ `ಬಿಟ್ಟು ಬಂದ ಚಪ್ಪಲಿಗಳು ಪಾದುಕೆಗಳಾಗಿತ್ತು' ಎಂಬಂತಹ ಅರ್ಥಗರ್ಭಿತ ಸಾಲುಗಳನ್ನು ದಾಖಲಿಸಿದ್ದಾರೆ. ಅಂದರೆ ಈ ಮೊದಲ ಸಂಕಲನದಲ್ಲಿ ತೀರಾ ವಾಚ್ಯ ಮತ್ತು ನಾಟಕೀಯವೆನಿಸುವ ಸಾಲುಗಳು ಮತ್ತು ಧುತ್ತನೇ ಅರ್ಥವನ್ನು ಚಿಮ್ಮಿಸುವ ಕಾವ್ಯಾತ್ಮಕ ಸಾಲುಗಳು ಒಟ್ಟೋಟ್ಟಿಗೆ ಇವೆ. 'ವಾಸ್ತವ' ಎಂಬ ಕಿರುಕವಿತೆಯ ಈ ಅರ್ಥಗರ್ಭಿತ ಸಾಲುಗಳನ್ನು ಗಮನಿಸಿ: ಗಲಭೆಯಲ್ಲಿ/ ಮಕ್ಕಳ ಶೂಗಳು
ಚಲ್ಲಾಪಿಲ್ಲಿಯಾಗಿದಾಗ/ ಕಸ ಆಯುವ ಹುಡುಗ
ತನ್ನ ಕಾಲಿಗೊಂದುವ
ಶೂ ಹುಡುಕುತ್ತಿದ್ದ.
ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಲಕ್ಷ್ಮೀಶ ತೋಳ್ಳಾಡಿಯವರು ಸರಿಯಾಗಿಯೇ ಗುರುತಿಸುವಂತೆ ಈ ಕವನ ಸಂಕಲನ ಇನ್ನೂ ಹೆಚ್ಚಿನ ಪರಿಷ್ಕರಣೆಯನ್ನು ಬೇಡುತ್ತದೆ. ಆದರೆ ಲೇಖಕರಿಗೆ ಕಾವ್ಯದ ಲಯ ಸಿದ್ದಿಸಿರುವುದರಿಂದ ಇವರ ಮುಂದಿನ ಕಾವ್ಯ ಕೃಷಿಯ ಬಗ್ಗೆ ಕುತೂಹಲ ಮೂಡುತ್ತದೆ.
(ಕೃಪೆ: ಪುಸ್ತಕಾವಲೋಕನ, ಬರಹ: ಟಿ. ಅವಿನಾಶ್)
©2024 Book Brahma Private Limited.