‘ಆತ್ಮ ಭಾರತ’ ಅರವಿಂದರ ಆರನೆಯ ಕವನಸಂಕಲನ. ಕಾಲು ಶತಕದಿಂದ ಕವಿತೆ ಬರೆಯುತ್ತಿರುವ ಅರವಿಂದರು ತಮ್ಮ ಮೊದಲ ಕವನಸಂಗ್ರಹವಾದ ಕಾವ್ಯಾರ್ಪಣ ದಿಂದಲೇ ಓದುಗರ ಮನಸ್ಸನ್ನು ಆಕರ್ಷಿಸಿದ್ದಾರೆ. ನವ್ಯಕಾವ್ಯವನ್ನು ಒಂದು ಪರಂಪರೆಯನ್ನಾಗಿ ಮಾಡಿದ ಧ್ವನಿಗಳಲ್ಲಿ ಅರವಿಂದರ ಧ್ವನಿ ಮಹತ್ವಪೂರ್ಣವಾಗಿದ್ದರೂ ಅದು ತನ್ನ ವೈಶಿಷ್ಟ್ಯವನ್ನು ಮೊದಲಿಗೆ ಮೊಳಗಿಸಿದ್ದುದು ನಾ ಭಾರತೀಕುಮಾರದಲ್ಲಿ, ಆಧುನಿಕ ಭಾರತೀಯ ಸಂಸ್ಕೃತಿಯ ಅಂದಾದುಂದಿಯನ್ನು ಚಿತ್ರಿಸುತ್ತ, ಅದರ ಅವನತಿಯ ಬಗ್ಗೆ ದುಃಖ-ರೊಚ್ಚು ವ್ಯಕ್ತಪಡಿಸುತ್ತ, ಭಾರತೀಕುಮಾರನ ಸದ್ಯದ ವಿಚಿತ್ರ ದ್ವಂದ್ವವನ್ನು ವಿಡಂಬನಾತ್ಮಕವಾಗಿ ಕಾವ್ಯದಲ್ಲಿ ಹಿಡಿದ ರೀತಿ ಅರವಿಂದರ ಮಹತ್ವವನ್ನು ವೃದ್ಧಿಂಗತಗೊಳಿಸಿತು.
ನಗರಾಯಣದಲ್ಲಿ ಭಾರತೀಯ ಸಂಸ್ಕೃತಿಯ ನಾಗರ ರೂಪವನ್ನು ಅತ್ಯಂತ ಮಾರ್ಮಿಕವಾಗಿ, ನಾಟ್ಯಮಯವಾಗಿ ಚಿತ್ರಿಸಿ, ಅದರ ರಾಕ್ಷಸತ್ವವನ್ನು ಕಾವ್ಯರೂಪದಲ್ಲಿ ಮೂರ್ತಗೊಳಿಸಿ ಅರವಿಂದರು ತಮ್ಮ ಸೋಪಜ್ಞತೆ ಯನ್ನೂ ಪ್ರಬುದ್ಧತೆಯನ್ನೂ ಪ್ರಮಾಣಪಡಿಸಿದರು. ಒಟ್ಟಿನ ಮೇಲೆ, ನಾ ಭಾರತೀಕುಮಾರದಿಂದೀಚೆಗೆ ಅರವಿಂದ ನಾಡಕರ್ಣಿಯವರ ಕಾವ್ಯಕ್ಕೆ ಗಮನಾರ್ಹವಾದ ತಿರುವು ಸಿಕ್ಕು, ಅದು ತನ್ನದೇ ಆದ ಪ್ರೌಢತ್ವವನ್ನು ಪಡೆದಿದೆ ಎಂದು ನಿಸ್ಸಂಕೋಚ ವಾಗಿ ಹೇಳಬಹುದು. ಆತ್ಮಭಾರತ ಈ ಪ್ರೌಢತ್ವದ ಒಂದು ಮಹತ್ವದ ಅವತಾರ ಎನ್ನಬಹುದು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮುಟಾದವರಾದ ಕವಿ ಅರವಿಂದ ನಾಡಕರ್ಣಿ ಅವರು ಜನಿಸಿದ್ದು 1931 ಜನವರಿ 1 ರಂದು ಜನಿಸಿದರು. ತಾಯಿ ಉಮಾಬಾಯಿ, ತಂದೆ ಶಂಕರ ದತ್ತಾತ್ರೇಯ ನಾಟಕರ್ಣಿ. ಬಂಕಿಕೊಡ್ಲುವಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈನ ರೂಯಿಯಾ ಕಾಲೇಜಿನಿಂದ ಬಿಎಸ್‌ಸ್ಸಿ ಪದವಿ ಹಾಗೂ ಕೊಲ್ಲಾಪುರದ ಶಹಾಜೀ ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ ಪದವಿ ಪಡೆದರು. ಮುಂಬೈನ ಇನ್‌ಕಂಟ್ಯಾಕ್ಸ್ ಕಚೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಆರಂಭಿಸಿ, ಸಲಹೆಗಾರರಾಗಿ ಕೆಲಸ ಮಾಡಿ ನಿವೃತ್ತರಾದರು. ಕೆಲಕಾಲ ಸೃಜನವೇದಿ ಪತ್ರಿಕೆಯನ್ನು ನಡೆಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಗೌರವಗಳಿಗೆ ಭಾಜನರಾಗಿದ್ದಾರೆ. ಮಡಿಕೇರಿಯಲ್ಲಿ ...
READ MORE