ಸುಮಾರು 40 ಕವಿತೆಗಳನ್ನೊಳಗೊಂಡ ಕೃತಿ "ನೆನಪುಗಳ ಮಾತು ಮಧುರ" ಕಂಸ ಅವರ ಕವನ ಸಂಕಲನವಾಗಿದೆ. 40 ಕವಿತೆಗಳ ರಚನೆಯನ್ನು ನೋಡುತ್ತಾ ಹೋದಾಗ, ಒಂದಕ್ಕಿಂತ ಒಂದು ವಿಷಯ ವಸ್ತು ಭಿನ್ನ. "ನಾನು ಹೇಗೆ ಕವಿ ಯಾದೆ" ಎಂಬ ಕವನದಿಂದ ಹಿಡಿದು "ಕುಲುಮೆ" ಕವನದ ತನಕವೂ ಓದುವಿಕೆ ಸಾಗಿಕೊಂಡು ಬಂದಿದ್ದೇ ಗೊತ್ತಾಗಲಿಲ್ಲ. ಕವಿ "ಕಂಸ" ಅವರು ಅನಿರೀಕ್ಷಿತವಾಗಿ ತಾವು ಕವಿಯಾದ ಅನುಭವವನ್ನೇ ತಮ್ಮ ಮೊದಲ ಕವಿತೆಯಲ್ಲಿ ಹಂಚಿಕೊಂಡಿದ್ದಾರೆ. ಕವಿಯಾದವನು ಇರುವೆ ಕಾಲಿನ ಸಪ್ಪಳವನ್ನು ಕೂಡ ಆಲಿಸುವಷ್ಟು ಸೂಕ್ಷ್ಮಗ್ರಾಹಿ ಆಗಿರಬೇಕು, ನಿರಂತರ ಅಧ್ಯಯನಶೀಲನಾಗಿರಬೇಕು, ಇತರರಿಗೆ ತನ್ನ ಸೋಲು ಗೆಲುವುಗಳನ್ನು ಹೋಲಿಸಿಕೊಳ್ಳದೆ ತನ್ನಲ್ಲಿರುವ ಆತ್ಮ ಬಲವನ್ನು ನಂಬಿ ಮುನ್ನಡೆಯಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದ್ದಾರೆ.